×
Ad

ತಲಪಾಡಿ : ಮಾನವ ತಲೆಬುರುಡೆ ಪತ್ತೆ; ಆತ್ಮಹತ್ಯೆ ಶಂಕೆ

Update: 2025-10-07 21:26 IST

ಉಳ್ಳಾಲ: ಮರದ ಗೆಲ್ಲಿಗೆ ಹಗ್ಗದಿಂದ ನೇಣು ಬಿಗಿದು ಮೃತಪಟ್ಟಿರುವ ಸ್ಥಿತಿಯಲ್ಲಿ ಮಾನವನ ತಲೆ ಬುರುಡೆ, ಅಸ್ಥಿಗಳು ಮತ್ತು ಇತರೆ ಅವಶೇಷಗಳು ಪತ್ತೆಯಾಗಿರುವ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ತಲಪಾಡಿ ದೇವಿಪುರದ ಅಕ್ಷಯ ಫಾರ್ಮ್‌ ನೊಳಗಡೆ ಮಂಗಳವಾರ ಬೆಳಿಗ್ಗೆ ನಡೆದಿದೆ.

ಅಕ್ಷಯ ಫಾರ್ಮ್ ಒಳಗಡೆಯ ಮರದ ಕೆಳಗಡೆ ಮಾನವನ ಅಸ್ಥಿ,ತಲೆಬುರುಡೆ ಮತ್ತು ಅವಶೇಷಗಳು ಪತ್ತೆಯಾಗಿವೆ. ಫಾರ್ಮ್ ನೊಳಗಡೆ ತೋಟದ ಕೆಲಸ ಮಾಡುತ್ತಿದ್ದ ಸ್ಥಳೀಯ ಕಾರ್ಮಿಕರಿಗೆ ಇಂದು ಬೆಳಿಗ್ಗೆ ಅಸ್ಥಿಗಳು ಕಾಣಸಿಕ್ಕಿವೆ. ಸ್ಥಳದಲ್ಲಿ ಹಸಿರು ಬರ್ಮುಡ ಚಡ್ಡಿ, ಹಸಿರು ಟೀ ಶರ್ಟ್ ಪತ್ತೆಯಾಗಿದ್ದು ,ಮರದ ಗೆಲ್ಲಲ್ಲಿ ನೈಲಾನ್ ಹಗ್ಗದ ನೇಣಿನ ಕುಣಿಕೆ ಇದ್ದು ಅದರಲ್ಲಿ ಹೆಡ್ ಫೋನ್ ಮತ್ತು ಎಲುಬುಗಳು ನೇತಾಡುತ್ತಿವೆ.ಮತ್ತೊಂದು ಗೆಲ್ಲಲ್ಲಿ ಕೇಸರಿ ಶಾಲು ಜೋತು ಬಿದ್ದಿದೆ.ಬರ್ಮುಡದಲ್ಲಿ ಮೊಬೈಲ್ ಫೋನ್ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.

ಸ್ಥಳಕ್ಕೆ ಉಳ್ಳಾಲ ಪೊಲೀಸರು ಮತ್ತು ಸೋಕೊ ತಂಡವು ಭೇಟಿ ನೀಡಿದ್ದು ಬುರುಡೆ, ಎಲುಬುಗಳು ಮತ್ತು ಇತರ ಅವಶೇಷಗಳನ್ನ ಸಂಸ್ಕರಿಸಿ ಪರಿಶೀಲನೆಗೆ ಕಳಿಸಲಾಗಿದೆ.

ದೇಹವು ಸಂಪೂರ್ಣ ಕೊಳೆತು ಹೋಗಿದ್ದು ಎಲುಬು ಬುರುಡೆಯ ಅವಶೇಷಗಳು ಮಾತ್ರ ಉಳಿದಿದ್ದು ಅನೇಕ ತಿಂಗಳ ಹಿಂದೆ ಘಟನೆ ನಡೆದಿರುವ ಶಂಕೆ ಇದೆ.ಅಕ್ಷಯ ಫಾರ್ಮ್ ಸುತ್ತಲೂ ಆವರಣ ಗೋಡೆಯಿದ್ದು ಇದರೊಳಗೆ ಘಟನೆ ಹೇಗೆ ನಡೆಯಿತೆಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ರಾಹುಲ್ ಕುಮಾರ್ ಎಂಬ ಬಿಹಾರ ಮೂಲದ ವ್ಯಕ್ತಿ ಎರಡು ತಿಂಗಳ ಹಿಂದೆ ಕೇರಳದಲ್ಲಿ ನಾಪತ್ತೆ ಆಗಿದ್ದ ಈ ಬಗ್ಗೆ ಆ.7 ರಂದು ಮಂಜೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈತನ ಮೃತ ದೇಹ ಇದಾಗಿದೆ ಎಂದು ತಿಳಿದು ಬಂದಿದೆ. ಉಳ್ಳಾಲ ಪೊಲೀಸರು ಪರಿಶೀಲನೆ ನಡೆಸಿದಾಗ ಮೃತಪಟ್ಟ ವ್ಯಕ್ತಿ ಧರಿಸಿದ್ದ ಪ್ಯಾಂಟ್ ನಲ್ಲಿ ಮೊಬೈಲ್ ಪತ್ತೆ ಆಗಿದೆ. ಇದರ ಆಧಾರದಲ್ಲಿ ಮೃತದೇಹದ ಗುರುತು ಪತ್ತೆ ಹಚ್ಚಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News