ಸಹ್ಯಾದ್ರಿ ಸಿನರ್ಜಿಯಾದಲ್ಲಿ ಗಮನ ಸೆಳೆದ ‘ಏರ್‌ಶೋ’
ಬಾನಂಗಳದಲ್ಲಿ ಯುವ ಇಂಜಿನಿಯರ್‌ಗಳ ಕೌಶಲ್ಯ ಅನಾವರಣ
ಮಂಗಳೂರು, ನ.8: ಅಡ್ಯಾರ್‌ನ ಸಹ್ಯಾದ್ರಿ ಇಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್ ಕಾಲೇಜಿನ ಮೈದಾನದಲ್ಲಿ ಶನಿವಾರ ಯುವ ಇಂಜಿನಿಯರಿಗಳಿಂದ ರಚಿಸಲ್ಪಟ್ಟ ಲೋಹದ ಹಕ್ಕಿಗಳ ಹಾರಾಟ ‘ಏರ್ ಶೋ’ ಸೇರಿದ್ದ ಸಾವಿರಾರು ವಿದ್ಯಾರ್ಥಿಗಳಿಗೆ ಮುದ ನೀಡಿತು.
ಸಹ್ಯಾದ್ರಿ ಕ್ಯಾಂಪಸ್‌ನಲ್ಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಸಿನರ್ಜಿಯಾ 2025 ರಾಷ್ಟ್ರೀಯ ಸೃಜನಾತ್ಮಕ ನವೋದ್ಯಮ ಮೇಳದ ಅಂಗವಾಗಿ ಶನಿವಾರ ಬೆಳಗ್ಗೆ ‘ಏರ್‌ಶೋ’ ಆಯೋಜಿಸಲಾಗಿತ್ತು. ಕಾಲೇಜಿನ ಚಾಲೆಂಜರ್ಸ್ ಟೀಮ್‌ನಿಂದ ತಯಾರಿಸಲ್ಪಟ್ಟ ಯುದ್ಧ ವಿಮಾನ (ಫೈಟರ್ ಜೆಟ್), ಟ್ರೇನರ್ ಪ್ಲೇನ್, ಡ್ರೋನ್‌ಗಳ ಮಾದರಿಗಳು ಕಾಲೇಜು ಮೈದಾನದ ಬಾನಂಗಳದಲ್ಲಿ ವಿಭಿನ್ನ ಭಂಗಿಯಲ್ಲಿ ಹಾರಾಟ ನಡೆಸಿದವು. ಅಮೆರಿಕದ ಎಫ್ 22 ರಾಪ್ಟರ್‌ನ ನಾಲ್ಕು ಮಾದರಿ ವಿಮಾನಗಳು, 3 ಟ್ರೇನರ್ ವಿಮಾನಗಳು, ರೇಸ್ ಡ್ರೋನ್‌ಗಳ ಹಾರಾಟವನ್ನು ಸೇರಿದ್ದ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕ ವೃಂದ ಕಣ್ತುಂಬಿಸಿದರು.
‘ಈ ಬಾರಿಯ ಏರ್ ಶೋದಲ್ಲಿ ಕಾಲೇಜು ವಿದ್ಯಾರ್ಥಿಗಳು ವಿನ್ಯಾಸಗೊಳಿಸಿದ ನಾಲ್ಕು ಎಫ್ 22 ರಾಫ್ಟರ್‌ಗಳು, 3 ಟ್ರೇನ್ ಪ್ಲೇನ್‌ಗಳ ಉಡಾವಣೆಯನ್ನು ಮಾಡಲಾಯಿತು. ವೃತ್ತಿಪರ ಪೈಲಟ್‌ಗಳಾದ ಆದಿತ್ಯ ಪವಾರ್ ಮತ್ತು ಅಭಯ್ ಪವಾರ್ ಅವರ ಮೂರು ಬೃಹತ್ ವಿಮಾನ ಮಾದರಿಗಳ ಪ್ರದರ್ಶನವನ್ನು ನಡೆಸಿದ್ದಾರೆ. ಇಂಜಿನಿಯರಿಂಗ್‌ನ ವಿವಿಧ ವಿಭಾಗದ ವಿದ್ಯಾರ್ಥಿಗಳ ತಂಡ ಕಳೆದ ಸುಮಾರು ಮೂರು ತಿಂಗಳಿನಿಂದ ಸಿನರ್ಜಿಯಾದಡಿ ನಡೆಯುವ ಏರ್‌ಶೋಗೆ ತಯಾರಿ ನಡೆಸಿವೆ. ಈ ಪ್ರದರ್ಶನದ ಮೂಲಕ ಮಾದರಿ ವಿಮಾನಗಳ ತಯಾರಿ ಮತ್ತು ಹಾರಾಟದ ಬಗ್ಗೆ ಮಾಹಿತಿಯನ್ನು ಸಿನರ್ಜಿಯಾಕ್ಕೆ ಆಗಮಿಸಿರುವ ವಿವಿಧ ಶಾಲಾ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ನೀಡುವುದಾಗಿದೆ’ ಎಂದು ಸಹ್ಯಾದ್ರಿ ಕಾಲೇಜಿನ ಏರೋಫೀಲಿಯಾದ ಪೈಲಟ್, ವಿದ್ಯಾರ್ಥಿ ರಂಜಿತ್ ತಿಳಿಸಿದರು.
‘ಸಿನೆರ್ಜಿಯಾದಲ್ಲಿ ಸಹ್ಯಾದ್ರಿ ಸೈನ್ಸ್ ಟ್ಯಾಲೆಂಟ್ ಹಂಟ್ (ಎಸ್‌ಎಸ್‌ಟಿಎಚ್) ಹಾಗೂ ಏರ್‌ಶೋ ಪ್ರದರ್ಶನಗಳು ವಿದ್ಯಾರ್ಥಿಗಳಲ್ಲಿ ಹೊಸ ಕಲ್ಪನೆ, ಆಲೋಚನೆಗಳಿಗೆ ಅಕಾಶ ನೀಡಿವೆ. ವಿವಿಧ ಶಾಲಾ ಕಾಲೇಜುಗಳಿಂದ ಭಾಗವಹಿಸಿರುವ ವಿದ್ಯಾರ್ಥಿಗಳು ತಮ್ಮ ವಿಜ್ಞಾನ ಮಾದರಿಗಳ ಪ್ರದರ್ಶನ ನೀಡಿದ್ದಾರೆ. ಇದು ನಾವೀನ್ಯತೆಯ ಪ್ರದರ್ಶನದ ಜತೆಗೆ ಹೊಸತನ್ನು ಕಲಿಯುವ, ವಿದ್ಯಾರ್ಥಿಗಳಲ್ಲಿ ನಾಯಕತ್ವ, ನಿವರ್ಹಣೆ, ಒತ್ತಡ ನಿವಾರಣೆಯಂತಹ ಜೀವನ ಕೌಶಲ್ಯಗಳನ್ನು ಕಲಿಸುವ ಕಾರ್ಯಕ್ರಮವಾಗಿದೆ’ ಎಂದು ಸಿನೆರ್ಜಿಯಾ ಮತ್ತು ಎಸ್‌ಎಸ್‌ಟಿಎಚ್‌ನ ವಿದ್ಯಾರ್ಥಿ ಪ್ರಮುಖರಾದ ಜೀವಿತಾ ಜೆ.ಎಸ್., ವೈಭವ್, ಅನಿಕಾ, ಜೀವನ್, ಪ್ರಜೋತ್, ತೃಷ್ಯ ಅಭಿಪ್ರಾಯ ಹಂಚಿಕೊಂಡರು.
ಕಾಲೇಜಿನ ಪ್ರಾಂಶುಪಾಲ ಡಾ.ಎಸ್.ಎಸ್. ಇಂಜಗನೇರಿ, ಉಪ ಪ್ರಾಂಶಪಾಲ ಡಾ. ಸುಧೀರ್ ಶೆಟ್ಟಿ, ಡೀನ್ (ಅಕಾಡೆಮಿಕ್ಸ್) ಡಾ. ಶಮಂತ್ ರೈ ಹಾಗೂ ಇತರರು ಉಪಸ್ಥಿತರಿದ್ದರು.
‘ಸಹ್ಯಾದ್ರಿ ಕಾಲೇಜಿನ ಸಿನರ್ಜಿಯಾ 2025ರ ಕಾರ್ಯಕ್ರಮದಲ್ಲಿ ಸಹ್ಯಾದ್ರಿ ಸೈನ್ಸ್ ಟ್ಯಾಲೆಂಟ್ ಹಂಟ್ (ಎಸ್‌ಎಸ್‌ಟಿಎಚ್)ನಡಿ ಪ್ರೌಢಶಾಲಾ ಮತ್ತು ಪಿಯು ವಿದ್ಯಾರ್ಥಿಗಳಿಗೆ ನವೀನ ಆಲೋಚನೆಗಳ ಮಾದರಿಗಳ ಪ್ರದರ್ಶನ ನಡೆಯುತ್ತಿದೆ. ಅದರ ಜತೆಗೆ ಸಹ್ಯಾದ್ರಿ ಕಾಲೇಜು ಮಕ್ಕಳು ತಯಾರಿಸಿದ ವಿಮಾನಗಳ ಮಾದರಿಗಳ ‘ಏರ್‌ಶೋ’ ಮೂಲಕ ಕಾಲೇಜಿನ ಮಕ್ಕಳ ಪ್ರತಿಭೆಯನ್ನು ಅನಾವರಣಗೊಳಿಸಲಾಗಿದೆ.’
ಡಾ. ಪ್ರಶಾಂತ್ ರಾವ್, ಡೀನ್, ವಿದ್ಯಾರ್ಥಿ ಕಲ್ಯಾಣ ವಿಭಾಗ, ಸಹ್ಯಾದ್ರಿ ಕಾಲೇಜು.