ಜು.10ರಂದು MEIF ವತಿಯಿಂದ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ
ಮಂಗಳೂರು: ದ.ಕ, ಉಡುಪಿ, ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಗಳ ವ್ಯಾಪ್ತಿಗೆ ಒಳಪಡುವ ಮುಸ್ಲಿಮ್ ವಿದ್ಯಾಸಂಸ್ಥೆಗಳ ಒಕ್ಕೂಟ(MEIF)ದ ಜು.10ರಂದು ಕಂಕನಾಡಿಯ ಜಮೀಯ್ಯತುಲ್ ಫಲಾಹ್ ಸಭಾಂಗಣದಲ್ಲಿ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗುವುದು ಎಂದು ಪ್ರಕಟನೆ ತಿಳಿಸಿದೆ.
MEIF ವ್ಯಾಪ್ತಿಗೆ ಒಳಪಡುವ ಆಯ್ದ 40 ವಿದ್ಯಾ ಸಂಸ್ಥೆಗಳ 8, 9 ಮತ್ತು ಪಿಯುಸಿಯಲ್ಲಿ ಈ ವರ್ಷದಿಂದ ಸಿವಿಲ್ ಸರ್ವಿಸ್ ಪರೀಕ್ಷೆಗೆ ಸಂಬಂಧಿಸಿ (ಐಎಎಸ್, ಐಪಿಎಸ್) ಸಿಲೆಬಸ್ ಅಳವಡಿಸಲಾಗುವುದು. ಈ ಕುರಿತು ಸಿದ್ಧಪಡಿಸಿರುವ ಗೈಡ್ ಪಠ್ಯಪುಸ್ತಕಗಳನ್ನು ಕಾರ್ಯಕ್ರಮದಲ್ಲಿ ದ.ಕ. ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಬಿಡುಗಡೆ ಮಾಡುವರು.
40 ವಿದ್ಯಾ ಸಂಸ್ಥೆಗಳ ಆಯ್ದ ಆರು ವಿದ್ಯಾರ್ಥಿಗಳಂತೆ ಒಟ್ಟು 240 ವಿದ್ಯಾರ್ಥಿಗಳೊಂದಿಗೆ ಐಎಎಸ್ ಪರೀಕ್ಷೆಗಳ ಕುರಿತು ಹಿರಿಯ ಐಪಿಎಸ್ ಅಧಿಕಾರಿ ಹಾಗೂ ಬಿಎಂಟಿಸಿ ವಿಜಿಲೆನ್ಸ್ ನಿರ್ದೇಶಕ ಅಬ್ದುಲ್ ಅಹದ್ ಪುತ್ತಿಗೆ ಪ್ರೇರಣಾ ತರಗತಿಯೊಂದಿಗೆ ಸಂವಾದ ನಡೆಸುವರು.
ಆರ್ಥಿಕವಾಗಿ ಹಿಂದುಳಿದ ಅರ್ಹ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ವಿವಿಧ ಕಾಲೇಜುಗಳಲ್ಲಿ ನೀಡಲು ಉದ್ದೇಶಿಸಿರುವ ಉಚಿತ ಸೀಟುಗಳನ್ನು NCAHC ಕರ್ನಾಟಕ ಇದರ ಅಧ್ಯಕ್ಷ ಡಾ.ಯು.ಟಿ.ಇಫ್ತಿಕಾರ್ ಅಲಿ ಸಾಂಕೇತಿಕವಾಗಿ ಎಂಟು ವಿದ್ಯಾರ್ಥಿಗಳಿಗೆ ವಿತರಿಸುವ ಮೂಲಕ ಚಾಲನೆ ನೀಡುವರು.
ಸಂಸ್ಥೆಯ ಮಾಸಿಕ 'MEIF News Letter' ಪತ್ರಿಕೆಯನ್ನು ಬ್ಯಾರೀಸ್ ಗ್ರೂಪ್ ಅಧ್ಯಕ್ಷ ಸೈಯದ್ ಮುಹಮ್ಮದ್ ಬ್ಯಾರಿ ಬಿಡುಗಡೆಗೊಳಿಸುವರು.
ವಿಷಯ ಶಿಕ್ಷಕರಿಗೆ ನಡೆಯುವ ಕಾರ್ಯಾಗಾರದಲ್ಲಿ ಪಿ.ಎ.ಇಂಜಿನಿಯರಿಂಗ್ ಕಾಲೇಜಿನ ಡೀನ್ ಡಾ.ಸೈಯದ್ ಅಮೀನ್ ಅಹ್ಮದ್ ಸಂಪನ್ಮೂಲ ವ್ಯಕ್ತಿಯಾಗಿ ತರಬೇತಿ ನೀಡಲಿದ್ದಾರೆ.
ಐಎಎಸ್ ಪರೀಕ್ಷೆ ಎದುರಿಸಿರುವ ಮುಹಮ್ಮದ್ ಸಬೀರ್ ಮತ್ತು ಮುಹಮ್ಮದ್ ರುಮಾನ್ ಅಪರಾಹ್ನ ವಿದ್ಯಾರ್ಥಿಗಳೊಂದಿಗೆ ಪ್ಯಾನಲ್ ಚರ್ಚೆ ನಡೆಸುವರು ಎಂದು ಮೀಫ್ ಅಧ್ಯಕ್ಷ ಮೂಸಬ್ಬ ಪಿ. ಬ್ಯಾರಿ ಜೋಕಟ್ಟೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.