ಅ.27ರಂದು ಬದಿಯಡ್ಕದ ಪೆರಡಾಲದಲ್ಲಿ ಕಯ್ಯಾರ ಕಿಞ್ಞಣ್ಣ ರೈ ಸ್ಮಾರಕ ಸಭಾಭವನ ಉದ್ಘಾಟನೆ
ಮಂಗಳೂರು: ಬದಿಯಡ್ಕದ ಪೆರಡಾಲದಲ್ಲಿ ಕಯ್ಯಾರದಲ್ಲಿ ಗಡಿನಾಡ ಸಾಹಿತಿ ಕಯ್ಯಾರ ಕಿಞ್ಞಣ್ಣ ರೈಗಳ ಹೆಸರಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಸಾಂಸ್ಕೃತಿಕ ಭವನದ ಕಾಮಗಾರಿ ಶೇ 99ರಷ್ಟು ಮುಗಿದಿದ್ದು, ಅಕ್ಟೋಬರ್ 27ರಂದು ಉದ್ಘಾಟನೆಗೊಳ್ಳಲಿದೆ ಎಂದು ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನ ಮರದ ತಿಳಿಸಿದ್ದಾರೆ.
ದ.ಕ. ಜಿಲ್ಲೆಯಲ್ಲಿ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಅನುಷ್ಠಾನಗೊಳಿಸಲಾದ ಕಾಮಗಾರಿಗಳ ಬಗ್ಗೆ ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಪರಿಶೀಲನಾ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಉಪಸ್ಥಿತಿಯಲ್ಲಿ ಕರ್ನಾಟಕದ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಲಿರುವರು ಎಂದು ಮಾಹಿತಿ ನೀಡಿದರು.
ಕನ್ನಡಪರ ಚಟುವಟಿಕೆಗಳಿಗೆ ಈ ಸಾಂಸ್ಕೃತಿಕ ಭವನ ಬಳಕೆಯಾಗಲಿದೆ. ಅಕ್ಕಲಕೋಟೆಯಲ್ಲೂ ಸಾಂಸ್ಕೃತಿಕ ಭವನ ಉದ್ಘಾಟನೆಗೆ ಸಿದ್ದವಾಗಿದೆ. ಗೋವಾದಲ್ಲಿ ಕನ್ನಡ ಭವನ ನಿರ್ಮಿಸಲಾಗುವುದು ಎಂದು ಮಾಹಿತಿ ನೀಡಿದರು.
ದ.ಕ. ಜಿಲ್ಲೆಯಲ್ಲಿ 2019-20ರಲ್ಲಿ ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರದಿಂದ ಜಿಲ್ಲಾ ರಂಗ ಮಂದಿರಕ್ಕೆ 5 ಕೋಟಿ ರೂ, ತುಳು 3.60 ಕೋಟಿ ರೂ., ಕೊಂಕಣಿಗೆ 3.60 ಕೋಟಿ ರೂ. ಮತ್ತು ಬ್ಯಾರಿಗೆ 3 ಕೋಟಿ ರೂ. ಸೇರಿ ದಂತೆ ಒಟ್ಟು 16 ಕೋಟಿ ರೂ ಮಂಜೂರು ಮಾಡಲಾಗಿತ್ತು. ಆದರೆ ಅನುದಾನದಲ್ಲಿ ಕೆಲಸ ಆಗಿಲ್ಲ ಎಂಬ ಕಾರಣ ಕ್ಕಾಗಿ ಹಣವನ್ನು ಹಿಂದಕ್ಕೆ ಪಡೆದು ಬೇರೆ ಅಭಿವೃದ್ಧಿ ಕಾರ್ಯಗಳಿಗೆ ಬಳಕೆ ಮಾಡುವ ಬಗ್ಗೆ ತೀರ್ಮಾನಿಸಿ ಸರಕಾರಕ್ಕೆ ಪತ್ರ ಬರೆಯುವ ಬಗ್ಗೆ ತೀರ್ಮಾನಿಸಲಾಗಿತ್ತು. ಆ ಬಳಿಕ ನಡೆದ ಸಭೆಯಲ್ಲಿ ಸ್ಪೀಕರ್‌ಯು.ಟಿ. ಖಾದರ್ ಅವರು ಗಡಿಪ್ರದೇಶದಿಂದ ಯಾವ ಉದ್ದೇಶಕ್ಕಾಗಿ ಹಣ ಮಂಜೂರಾಗಿದೆಯೋ ಅದೇ ಉದ್ದೇಶಕ್ಕಾಗಿ ಬಳಕೆ ಮಾಡಲಾಗುವು ದಾಗಿ ಭರವಸೆ ನೀಡಿದ್ದರು. ಬಳಿಕ ತಾನು ತುಳು ಭವನ, ಕೊಂಕಣಿ ಅಕಾಡೆಮಿ ಹೋಗಿದ್ದೆ.ಬ್ಯಾರಿ ಭವನ ಮತ್ತು ರಂಗ ಮಂದಿರ ಜಾಗವನ್ನು ಪರಿಶೀಲನೆ ಮಾಡಿದ್ದೆ. ಇದರಿಂದಾಗಿ ಮಂಜೂರಾದ ಹಣ ಈ ಎಲ್ಲ ಕಾಮಗಾರಿಗಳಿಗೆ ಬಳಕೆಯಾಗುವ ಆಶಾಭಾವನೆ ಮೂಡಿದೆ. ವಾರದೊಳಗೆ ಅನುದಾನವನ್ನು ಮೂಲ ಉದ್ದೇಶಗಳಿಗೆ ನೀಡುವಂತೆ ದ.ಕ. ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಲಾಗಿದೆ ಎಂದರು.
ದ.ಕ. ಜಿಲ್ಲೆಗೆ 14.60 ಕೋಟಿ ರೂ, ಕಾಸರಗೋಡಿಗೆ 15.28 ಕೋಟಿ ರೂ.ಗಳನ್ನು ಕನ್ನಡ ಶಾಲೆಗಳ ಕಟ್ಟಡ, ಶೌಚಾಲಯ, ರಂಗ ಮಂದಿರ ಶಾಲಾ ಕಂಪೌಂಡ್ ನಿರ್ಮಾಣಕ್ಕಾಗಿ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನೀಡಲಾಗಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಗಡಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ್ ಮತ್ತೀಹಳ್ಳಿ, ಸದಸ್ಯ ಎ.ಆರ್.ಸುಬ್ಬಯ ಕಟ್ಟೆ , ಕೊಂಕಣಿ ಅಕಾಡೆಮಿ ಅಧ್ಯಕ್ಷ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ಉಪಸ್ಥಿತರಿದ್ದರು.