×
Ad

ಅಬ್ದುಲ್ ರಹೀಂ ಕೊಲೆ ಪ್ರಕರಣ: ತಪ್ಪಿತಸ್ಥರ ವಿರುದ್ಧ ಕ್ಷಿಪ್ರ ಕ್ರಮ ಆಗದಿದ್ದರೆ ಜಿಲ್ಲಾದ್ಯಂತ ಪ್ರತಿಭಟನೆ: ಎಸ್‌ಕೆಎಸ್ಸೆಸ್ಸೆಫ್

Update: 2025-05-29 12:43 IST

ಮಂಗಳೂರು, ಮೇ 29: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೊಳ್ತಮಜಲು ನಿವಾಸಿ ಅಬ್ದುಲ್ ರಹೀಂ ಎಂಬ ಅಮಾಯಕ ಕೂಲಿ ಕಾರ್ಮಿಕನ ಹತ್ಯೆಗೆ ಸಂಧಿಸಿದಂತೆ ಕೊಲೆಗಾರರು ಮತ್ತು ಸಂಚು ರೂಪಿಸಿದವರು ಹಾಗೂ ಪ್ರಚೋದನೆಕಾರಿ ಭಾಷಣ ನಡೆಸಿದವರನ್ನು ಅತಿ ಕ್ಷಿಪ್ರವಾಗಿ ಬಂಧಿಸಿ ಕಠಿಣ ಶಿಕ್ಷೆ ಜಾರಿಗೊಳಿಸಬೇಕು. ಇಲ್ಲದಿದ್ದರೆ ಸಂಘಟನೆಯು ಜಿಲ್ಲೆಯಾದ್ಯಂತ ಪ್ರತಿಭಟನೆಯನ್ನು ನಡೆಸಲಿದೆ ಎಂದು ಎಸ್‌ಕೆ ಎಸ್ಸೆಸ್ಸೆಫ್ ಎಚ್ಚರಿಸಿದೆ.

ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ಗುರುವಾರ ಸುದ್ದಿಗೋಷ್ಠಿ ಯಲ್ಲಿ ಈ ಬಗ್ಗೆ ಸಂಘಟನೆಯ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಅನೀಸ್ ಕೌಸರಿ ಮಾತನಾಡಿದರು. ದುಷ್ಕರ್ಮಿಗಳು ಅಬ್ದುಲ್ ರಹೀಂ ಎಂಬ ಅಮಾಯಕ ಯುವಕನನ್ನು ಬರ್ಬರವಾಗಿ ಹತ್ಯೆಗೈದಿದ್ದಾರೆ. ಅವರ ಜೊತೆಗಿದ್ದ ಖಲಂದರ್ ಎನ್ನುವ ಯುವಕನಿಗೂ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ದ.ಕ ಜಿಲ್ಲೆಯಲ್ಲಿ ಕೋಮು ಪ್ರೇರಿತ ಕೊಲೆಗಳ ಸರಣಿ ಮುಂದುವರಿಯುತ್ತಿದ್ದು, ಇದು ಸಾರ್ವಜನಿಕರನ್ನು ಭಯಭೀತರನ್ನಾಗಿಸಿದೆ. ಜನ ಸಾಮಾನ್ಯರ ವಿಶೇಷವಾಗಿ ದಿನಕೂಲಿ ಕೆಲಸ ಮಾಡಿ ಬದುಕುವವರ ಬದುಕಿನ ದಾರಿಯನ್ನು ಇದು ಕಸಿಯುತ್ತಿದೆ. ಕಾನೂನಿನ ಭಯವಿಲ್ಲದೆ ಕೋಮುವಾದಿ ಶಕ್ತಿಗಳು ನಿರಂತರ ದ್ವೇಷ ಭಾಷಣಗಳನ್ನು ನಡೆಸುತ್ತಿರುವುದರ ಪರಿಣಾಮವಾಗಿ ರಹೀಮನ ಹತ್ಯೆ ನಡೆದಿದೆ. ಗೃಹ ಇಲಾಖೆಯ ವೈಫಲ್ಯ ವೂ ಕಾರಣವಾಗಿದೆ ಎಂದು ಅವರು ಆರೋಪಿಸಿದರು.

ಮೃತ ಅಬ್ದುಲ್ ರಹೀಂ ಜಾತ್ಯತೀತ ತತ್ವವನ್ನು ಅಳವಡಿಸಿಕೊಂಡು ಬದುಕಿದಂತಹ ವ್ಯಕ್ತಿಯಾಗಿದ್ದು, ಯಾವುದೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾದವನಲ್ಲ. ದಕ್ಷಿಣ ಕನ್ನಡ ಜಿಲ್ಲೆಯ 500 ರಷ್ಟು ಮೊಹಲ್ಲಾಗಳಿಗೆ ನೇತೃತ್ವ ನೀಡುತ್ತಿರುವ SKSSF ಎನ್ನುವ ಧಾರ್ಮಿಕ ಯುವಜನ ಸಂಘಟನೆಯ ಕಾರ್ಯಕರ್ತ ಮತ್ತು ಸ್ಥಳೀಯ ಮೊಹಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿಯೂ ಸೇವೆ ನಿರ್ವಹಿಸುತ್ತಿದ್ದ. ಜೊತೆಗೆ, ತನ್ನ ಪಾಡಿಗೆ ದುಡಿದು ಕುಟುಂಬ ನಿರ್ವಹಣೆ ಮಾಡುತ್ತಿದ್ದ. ಎಲ್ಲಾ ಧರ್ಮೀಯರೊಂದಿಗೆ ಸೌಹಾರ್ದಯುತ ಸಂಬಂಧ ಹೊಂದಿದ್ದ ಅಮಾಯಕ ಅಬ್ದುಲ್ ರಹೀಂ ನ ಮನೆಗೆ ಗೃಹ ಸಚಿವರು, ಉಸ್ತುವಾರಿ ಸಚಿವರು ಮೃತರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿ, ಕುಟುಂಬಕ್ಕೆ ಸರ್ಕಾರದ ವತಿಯಿಂದ 50 ಲಕ್ಷ ರೂ. ಪರಿಹಾರ ಧನ ಪರಿಹಾರ ಮಂಜೂರು ಮಾಡಬೇಕು. ಕೋಮು ದ್ವೇಷದ ಭಾಷಣ ಮಾಡುವವರ ಬಗ್ಗೆ ಗೃಹ ಇಲಾಖೆಗೆ ಮಾಹಿತಿ ಇದೆ. ಹಾಗಾಗಿ ಅಂತಹವರನ್ನು ಬಂಧಿಸಿ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ಮೃತ ಅಬ್ದುಲ್ ರಹೀಂ ಸ್ಮರಣಾರ್ಥ ಜಿಲ್ಲೆಯ 100 ಕೇಂದ್ರಗಳಲ್ಲಿ ರಕ್ತದಾನ ಹಾಗೂ 3000 ಶಾಖಾ ಕೇಂದ್ರಗಳಲ್ಲಿ ಪ್ರಾರ್ಥನಾ ಸಂಗಮ ನಡೆಸಲು ಸಂಘಟನೆ ವತಿಯಿಂದ ತೀರ್ಮಾನಿಸಲಾಗಿದೆ ಎಂದು ಅವರು ಈ ಸಂದರ್ಭ ತಿಳಿಸಿದರು.

ಸುದಿಗೋಷ್ಠಿಯಲ್ಲಿ ಸಂಘಟನೆಯ ರಾಜ್ಯ ಸಮಿತಿ ಅಧ್ಯಕ್ಷ ಮುಫ್ತಿ ರಫೀಖ್ ಅಹ್ಮದ್ ಹುದವಿ, ಕೋಶಾಧಿಕಾರಿ ಸಯ್ಯಿದ್ ಅಮೀರ್ ತಂಙಳ್ ಕಿನ್ಯ, ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಓ.ಪಿ. ಅಶ್ರಫ್, ರಾಜ್ಯ ಸಮಿತಿ ಕಾರ್ಯಕಾರಿ ಸದಸ್ಯರಾದ ಖಾಸಿಂ ದಾರಿಮಿ, ರಿಯಾಝ್ ರಹ್ಮಾನಿ, ತಾಜು‌ದ್ದೀನ್ ರಹ್ಮಾನಿ, ಮುಹಮ್ಮದ್ ಮಾಸ್ಟರ್ ಉಪಸ್ಥಿತರಿದ್ದರು.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News