ಆಳ್ವಾಸ್ ವಿರಾಸತ್‌ನಲ್ಲಿ ನೀಲಾದ್ರಿ ಕೈಚಳಕದ ಸಿತಾರ್-ಝಿತಾರ್ ಸಂಗೀತದ ಝಲಕ್
ವಿದ್ಯಾಗಿರಿ(ಮೂಡುಬಿದಿರೆ): ವೈಭವದಿಂದ ಅಲಂಕೃತಗೊಂಡ ಆಳ್ವಾಸ್ ವಿರಾಸತ್ ನ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲು ರಂಗಮಂದಿರದಲ್ಲಿ ಕೋಲ್ಕತ್ತಾದ ನೀಲಾದ್ರಿ ಕುಮಾರ್ ಸಿತಾರ್- ಝಿತಾರ್ ಕೈ ಚಳಕದ ಸಂಗೀತ ಪರಿಕರಗಳ ಝಲಕ್ ಮೂಲಕ ಕಲಾವೈಭವವನ್ನು ಅನಾವರಣ ಗೊಳಿಸಿದರು.
ತಾವೇ ಅಭಿವೃದ್ಧಿ ಪಡಿಸಿದ ಎಲೆಕ್ಟ್ರಿಕ್ ಸಿತಾರ್ ಕೆಂಪು ವರ್ಣದ 'ಝಿತಾರ್' ಮೂಲಕ ಕಛೇರಿ ಆರಂಭಿಸಿದ ನೀಲಾದ್ರಿ, ತಮ್ಮದೇ ಸಂಯೋಜನೆಯ 'ಸಮ್ಮಿಲನ' (ಫ್ಯೂಜನ್) ಮೂಲಕ ಕಛೇರಿಗೆ ನಾಂದಿ ಹಾಡಿದರು.
'ಗ್ರೇಟ್ ಗ್ಯಾಂಬ್ಲರ್' ಸಿನಿಮಾದ 'ದೋ ಲಬ್ಜೋ ಕೀ ಹೇ' ನಾದದ ಮೂಲಕ ಮತ್ತೆ ಚಾಲನೆ ನೀಡಿದ ಅವರು, ಬಳಿಕ 'ಕರ್ಜ್' ಸಿನಿಮಾದ ' ಏಕ್ ದಿವಾನಾ ಥಾ..' ಸ್ವರ ನುಡಿಸಿದರು.
ಮಹಾತ್ಮ ಗಾಂಧೀಜಿಯ ನೆಚ್ಚಿನ 'ವೈಷ್ಣವ ಜನತೋ..' ನುಡಿಸಿದರು.
'ಸವಾಲ್ ಜವಾಬ್' ಮಾದರಿಯಲ್ಲಿ ತಬಲಾ ವಾದಕ ಅಮಿತ್ ಕವ್ಟೇಕರ್ ಜೊತೆ ಕಿರು ಜುಗಲ್ ಬಂಧಿ ನಡೆಸಿದರು. ಶಿಖರ್ ನಾದ್ ಖುರೇಷಿ ಅವರು ತಬಲಾ ನಾದ ಮಿಶ್ರಿತ ಆಫ್ರಿಕನ್ ಜಂಬೆಯಲ್ಲಿ ಜೊತೆಯಾದರು. ತಕ್ಷಣವೇ ವಯೋಲಿನ್ ನಲ್ಲಿದ್ದ ಯಾದ್ನೇಶ್ ರಾಯ್ಕರ್ 'ಸವಾಲ್' ಸ್ವೀಕರಿಸಿದರು. ಶಿಖರ್ ನಾದ್ ಖುರೇಷಿ ಜಂಬೆಯಲ್ಲಿ 'ಜವಾಬ್' ನೀಡಿದರು. ಪ್ರೇಕ್ಷಕರು ಕರತಾಡನ ಮೂಲಕ ತಾಳ ಹಾಕಿದರು.
30ನೇ ವರ್ಷದ ಆಳ್ವಾಸ್ ವಿರಾಸತ್‌ನಲ್ಲಿ ಬುಧವಾರ ಉತ್ತರದ ಹಿಂದೂಸ್ತಾನಿ ಗಾನ ಹೊಮ್ಮಿದರೆ, ಗುರುವಾರ ಪಶ್ಚಿಮದ ಗುಜರಾತಿನ ಗಜಲ್-ಭಜನ್ ನಿನಾದ. ಶುಕ್ರವಾರದ ಮುಸ್ಸಂಜೆಯಲ್ಲಿ ಪೂರ್ವದ ಕೋಲ್ಕತ್ತಾದ ನೀಲಾದ್ರಿ ಕುಮಾರ್ ಅವರ ಸಿತಾರ್ ತರಂಗಗಳ ಕಂಪನ. ಭಾರತೀಯ ಶಾಸ್ತ್ರೀಯ ಸಂಗೀತದ ಸ್ವತಂತ್ರ ಚಿಂತಕ, ಉತ್ಸಾಹದ ಚಿಲುಮೆ, ಪ್ರಯೋಗಮತಿ ಎಂಬ ಖ್ಯಾತಿಯ ನೀಲಾದ್ರಿ ಕುಮಾರ್, ರಾಗ ತಾಳ ಮಾತ್ರವಲ್ಲ ಪ್ರೇಕ್ಷಕರ ಜೊತೆಯೂ ಚಪ್ಪಾಳೆ ಮೂಲಕ ತಾಳ ಪ್ರಯೋಗ ನಡೆಸಿದರು.
ಐದನೇ ತಲೆಮಾರಿನ ಸಿತಾರ್ ವಾದಕರಾದ ನೀಲಾದ್ರಿ ಮಿಶ್ರ ಗರಾ ರಾಗದಲ್ಲಿ ನಂತರ ಸಿತಾರ್ ನುಡಿಸಿದರು. ಸಿತಾರ್ ನ 'ಜಾಲಾ' ಮೂಲಕ ಪ್ರೇಕ್ಷಕರ ಮನ ಸೆಳೆದರು.
ನಂತರ 'ವೈಷ್ಣವ ಜನತೋ... ಖಮಾಜ್' ರಾಗದಲ್ಲಿ ನೀಲಾದ್ರಿ ಹಾಗೂ ವಯೋಲಿನ್ ನಲ್ಲಿ ಯಾದ್ನೇಶ್ ರಾಯ್ಕರ್ ಜುಗಲ್ ಬಂಧಿ ನಡೆಸಿದರು. ನೀಲಾದ್ರಿ ಕೇವಲ ಎಡ ಕೈಯಲ್ಲಿ ಮಾತ್ರ ಝಿತಾರ್ ನುಡಿಸಿ, ಚಕಿತಗೊಳಿಸಿದರು.
ಅನಂತರ, ತಮಿಳಿನಲ್ಲಿ ಎಸ್.ಪಿ. ಬಾಲಸುಬ್ರಹ್ಮಣ್ಯಂ ಹಾಗೂ ಜಾನಕಿ ಹಾಡಿದ ಯುಗಳ 'ಮಲರೇ ಮೌನಮೇ' ನುಡಿಸಿದರು. ಬಳಿಕ ಹಂಸಧ್ವನಿ ರಾಗದ 'ವಾತಾಪಿ ಗಣಪತಿಂ ಭಜೇ...' ಗೆ ಹೊರಳಿದರು. ಶುದ್ಧ ಸಾಣಿಕೆ ನುಡಿಸಾಣಿಲೆ ಮೂಲಕ ಎರಡು ಗಂಟೆಗಳ ಕಛೇರಿ ಮುಕ್ತಾಯಗೊಳಿಸಿದರು.
ನೀಲಾದ್ರಿ ಸಿತಾರ್ ತರಂಗಗಳನ್ನು ಸೃಷ್ಟಿಸಿದರೆ, ಝಿತಾರ್ ಅಲೆಗಳನ್ನೇ ಸೃಷ್ಟಿಸಿ ಹೊನಲಾಗಿಸಿತು. ಆ ಮೂಲಕ ಯುವಜನತೆಯನ್ನು ಶಾಸ್ತ್ರೀಯ ಸಂಗೀತದೆಡೆಗೆ ಸೆಳೆದರು.
ತಬಲಾದಲ್ಲಿ ಅಮಿತ್ ಕವ್ಟೇಕರ್, ಕೀ ಪ್ಯಾಡ್ ನಲ್ಲಿ ಆ್ಯಂಜಲೋ ಫೆರ್ನಾಂಡಿಸ್, ಡ್ರಮ್ಸ್ ಮತ್ತು ಸ್ವರಮೇಳದಲ್ಲಿ ಉಸ್ತಾದ್ ಅಲ್ಲಾ ರಖಾ ಖಾನ್ ಪರಂಪರೆ ಹಾಗೂ ಝಾಕೀರ್ ಹುಸೇನ್ ಸಂಬಂಧಿ ಶಿಖರ್ ನಾದ್ ಖುರೇಷಿ, ವಯೋಲಿನ್ ನಲ್ಲಿ ಯಾದ್ನೇಶ್ ರಾಯ್ಕರ್ ಸಾಥ್ ನೀಡಿದರು.
ಪಶ್ಚಿಮ ಬಂಗಾಳದ ಕೋಲ್ಕತ್ತಾದ ನೀಲಾದ್ರಿ, ಅವರ ತಂದೆ ಪಂಡಿತ ಕಾರ್ತಿಕ್ ಕುಮಾರ್ ಮೂಲಕ ಸಿತಾರ್ ಕಲಿತರು. ತಂದೆ ಕಾರ್ತಿಕ್ ಕುಮಾರ್ ಪಂಡಿತ ರವಿಶಂಕರ್ ಅವರ ಶಿಷ್ಯರಾಗಿದ್ದರು.
6 ವರ್ಷ ಇದ್ದಾಗಲೇ ಸಂಗೀತ ಕಛೇರಿ ನೀಡಿದ್ದ ಕುಮಾರ್, 15 ವರ್ಷದಲ್ಲೇ ತನ್ನ ಆಲ್ಪಂ ಮಾಡಿದ್ದರು. ಎ.ಆರ್. ರೆಹಮಾನ್, ಸೆಲ್ವಗಣೇಶ್ ಮತ್ತಿತರ ಸಂಗೀತ ನಿರ್ದೇಶಕರ ಜೊತೆ ಕೆಲಸ ಮಾಡಿದ್ದು, ಝಾಕೀರ್ ಹುಸೇನ್ ಅವರ ಜೊತೆ ತಾಳವಾದ್ಯ ನುಡಿಸಿದ್ದಾರೆ.
ಪ್ಲಕ್‌ಡ್ (2014), ಸುರ್ ಯಜ್ಞ (2013), ಟುಗೆದರ್ (2011), ಔರ್ (2010), ಪ್ರಿಯಾರಿಟಿ (2008), ಝಿತಾರ್ (2007), ಸಿತಾರ್ ಗೇಜ್ (2004), ಸಂಜಾ ಸುರ್ (2003), ಐಎಫ್ (2002), ಧಾರೋಹರ್ (2000), ರೆವೆಲೇಷನ್ (1998), ಟುಗೆದರ್ (1995) ಹಾಗೂ ಟಚ್ ಈಸ್ ಆಲ್ ಟೇಕ್, ಹೆಡ್ ಟು ಹಾರ್ಟ್ ನೀಲಾದ್ರಿ ಅವರ ಪ್ರಮುಖ ಆಲ್ಬಂಗಳಾಗಿವೆ.
ಅವರು ಮನೋಹರಿ (ಬಾಹುಬಲಿ), ಚುಪ್ ಚುಪ್ ಕೇ (ಬಂಟಿ ಔರ್ ಬಬ್ಲಿ),. ಮೇಕ್ ಸಮ್ ನಾಯಿಸ್ (ದೇಸಿ ಬಾಯಿಸ್), ನಾ ಜಾನೇ ಕೋಯಿ (ಗ್ಯಾಂಗ್‌ಸ್ಟರ್), ಅಲ್‌ವಿದಾ, ಇನ್ ದಿನೋ, ಕಾರ್ ಸಲಾಮ್ (ಲೈಫ್ ಇನ್ ಮೆಟ್ರೋ) ಬಾಲಿವುಡ್ ಹಾಡುಗಳಿಗೆ ಝಿತಾರ್ ನುಡಿಸಿದ್ದಾರೆ.
ಸುನ್‌ರಹಾಹೇನಾ ತೂ (ಆಶಿಕಿ-2, ಅಂಕಿತ್ ತಿವಾರಿ ಹಾಡಿದ), ಕ್ರೇಜಿ ಕಿಯಾ ರೇ (ಧೂಮ್-2, ಅಭಿಷೇಕ್ ಬಚ್ಚನ್, ಹೃತಿಕ್ ರೋಷನ್, ಬಿಪಾಷಾ ಬಸು), ಜಾಗವೇ ಸಾರಿ ರೆಯ್ನಾ (ದೇದೇ ಇಷ್ಕ್ಕಿಯಾ), ದೀರೇ ಜಲ್ನಾ (ಪಹೇಲಿ- ಶಾರೂಕ್ ಖಾನ್, ರಾಣಿ ಮುಖರ್ಜಿ), ಎಕ್ ಓ ದಿನ್ (ಚಾಚಿ 420), ದೋಲ್ನಾ (ದಿಲ್ ತೋ ಪಾಗಲ್ ಹೇ), ಬಾದಲ್ ಉಟಿಯಾ (ಮಾತ್ರು ಕೀ ಬಿಜಿಲೀ ಕಾ ಮಂಡೋಲಾ), ನೈನಾ (ಓಂಕಾರ್), ಆವಾರಾ (ಸಾತ್ ಕೂನ್ ಮಾಫ್), ಪಿಯಾ ಬಸಂತೀ ರೇ (ಉಸ್ತಾದ್ ಸುಲ್ತಾನ್ ಖಾನ್), ಶಾಯದ್ ಏ ತೋ ಪ್ಯಾರ್ ಹೇ (ಲಕ್ಕಿ ನೋ ಟೈಮ್ ಫಾರ್ ಲವ್) ಸಿತಾರ್ ನುಡಿಸಿದ್ದಾರೆ.