ಆತ್ಮಕಥೆ ಅಪೂರ್ವ ದಾಖಲೀಕರಣ: ಡಾ. ಎಂ. ಪ್ರಭಾಕರ ಜೋಶಿ
ನಿಡ್ಲೆ: ಆತ್ಮಕಥೆ ಒಂದು ಅಪೂರ್ವ ದಾಖಲೀಕರಣ. ಆದು ಕೃತಿಕಾರರಷ್ಟೇ ಓದುಗರಿಗೂ ಆತ್ಮಾವಲೋಕನಕ್ಕೆ ಪ್ರೇರಣೆ ನೀಡುತ್ತದೆ ಎಂದು ಬಹುಶ್ರುತ ವಿದ್ವಾಂಸ, ಯಕ್ಷಗಾನ ಕಲಾವಿದ ಡಾ. ಎಂ. ಪ್ರಭಾಕರ ಜೋಶಿ ಅಭಿಪ್ರಾಯಪಟ್ಟರು.
ಉಜಿರೆಯ ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನವು ತಮ್ಮ ‘ರಜತ ಸರಣಿ’ಯ ಅಂಗವಾಗಿ ಯಕ್ಷದೀವಿಗೆ ತುಮಕೂರು ಇವರ ಸಹಯೋಗದಲ್ಲಿ ನಿಡ್ಲೆ ಬರೆಂಗಾಯದ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ‘ಅನಾಮಧೇಯ ಅಧ್ಯಾಪಕನ ಆತ್ಮಚರಿತ್ರೆ’ ಕೃತಿ ಲೋಕಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.
ಆತ್ಮಕಥೆ ಬರೆಯುವಲ್ಲಿ ಅನುಕೂಲ, ಅನಾನುಕೂಲ ಎರಡೂ ಇವೆ. ಅನೇಕ ಬಾರಿ ಅದು ಕೃತಿಕಾರನ ಸ್ವಸಮರ್ಥನೆಯ ಸಾಧನವಾಗುತ್ತದೆ. ಆತ್ಮಕಥೆ ಬರೆಯುವ ನೆಪದಲ್ಲಿ ಅನೇಕ ಮಂದಿ ತಮಗಿದ್ದ ಬಡತನವನ್ನು ಮಾರ್ಕೆಟ್ ಮಾಡಿಕೊಳ್ಳುವುದಿದೆ. ಆದರೆ ಭೀಮ ಭಟ್ಟರು ಎಲ್ಲಿಯೂ ತಮ್ಮ ಕಷ್ಟಕಾರ್ಪಣ್ಯಗಳನ್ನು ರಂಜನೀಯವಾಗಿ ಹೇಳಿಲ್ಲ. ಈ ಮನೋಗತವನ್ನು ಅರ್ಥಮಾಡಿಕೊಂಡು ಆರತಿ ಪಟ್ರಮೆಯವರು ತಮ್ಮ ತಂದೆಯ ಜೀವನಕಥನವನ್ನು ಸಮತೋಲನದಿಂದ ನಿರೂಪಿಸಿದ್ದಾರೆ ಎಂದರು.
ಮಕ್ಕಳ ಶಿಸ್ತು ಸಂಪತ್ತಾಗುವ ಬಗೆ ಎಂಬ ಅಧ್ಯಾಯವೊಂದೇ ಸಾಕು ಇಡೀ ಪುಸ್ತಕದ ಉತ್ಕøಷ್ಟತೆಯನ್ನು ವಿವರಿಸುವುದಕ್ಕೆ. ಇಡೀ ಕೃತಿ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕವಾಗುವ ಎಲ್ಲ ಯೋಗ್ಯತೆಯನ್ನೂ ಹೊಂದಿದೆ ಎಂದರು.
ಈ ಸಂದರ್ಭ ಮಾತನಾಡಿದ ಕೃತಿಕಾರ ಕೆ. ಭೀಮ ಭಟ್, ನಮ್ಮ ಮಾತು ಮತ್ತು ಕೃತಿಗಳ ನಡುವೆ ಸುಸಂಬದ್ಧತೆ ಇರಬೇಕು. ಹೇಳುವುದೊಂದು ಮಾಡುವುದೊಂದು ಆಗಬಾರದು. ಮಾತಿನಲ್ಲಿ ಸಂಯಮ ಇರಬೇಕು. ನಮ್ಮ ಸುತ್ತಲಿನ ಸಮಾಜದಲ್ಲಿ ಚಾಲ್ತಿಯಲ್ಲಿರುವ ನಿಯಮಗಳನ್ನು ಎಲ್ಲರೂ ಪಾಲಿಸಬೇಕು. ಆಗ ದಿನನಿತ್ಯದ ಬದುಕಿನಲ್ಲಿ ಗೊಂದಲಗಳಿಗೆ ಅವಕಾಶವೇ ಇರುವುದಿಲ್ಲ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರತಿಷ್ಠಾನದ ಸಂಚಾಲಕ ಉಜಿರೆ ಅಶೋಕ ಭಟ್, ಹಿರಿಯರ ಬದುಕು ಹೊಸ ತಲೆಮಾರಿಗೆ ಎಂದಿಗೂ ಆದರ್ಶ. ಯುವ ತಲೆಮಾರು ಹೇಗೆ ಬದುಕಬೇಕು, ಯಾವ ಮೌಲ್ಯಗಳನ್ನು ತಮ್ಮ ವ್ಯಕ್ತಿತ್ವದ ಭಾಗವನ್ನಾಗಿಸಬೇಕು ಎಂಬುದನ್ನು ಭೀಮಭಟ್ಟರ ಆತ್ಮಕಥೆ ಸ್ಪಷ್ಟಪಡಿಸುತ್ತದೆ ಎಂದರು.
ರಜತ ಸರಣಿಯಲ್ಲಿ ಒಟ್ಟು 138 ತಾಳಮದ್ದಳೆಗಳನ್ನು ರಾಜ್ಯದ ವಿವಿಧ ಭಾಗಗಳಲ್ಲಿ ಸಂಘಟಿಸಿದ್ದು ಒಂದು ಸಾರ್ವಕಾಲಿಕ ದಾಖಲೆಯಾಗಿದೆ ಎಂದರು.
ಕೃತಿಯ ನಿರೂಪಕಿ ಹಾಗೂ ಕರ್ನಾಟಕ ಯಕ್ಷಗಾನ ಅಕಾಡೆಮಿಯ ನಿಕಟಪೂರ್ವ ಸದಸ್ಯೆ ಆರತಿ ಪಟ್ರಮೆ ಉಪಸ್ಥಿತರಿದ್ದರು. ಕಾರ್ಯಕ್ರಮದ ಸಂಯೋಜಕರಾದ ವಿಷ್ಣು ಮರಾಠೆ ನಿಡ್ಲೆ ಧನ್ಯವಾದ ಸಮರ್ಪಿಸಿದರು. ಸಿಬಂತಿ ಪದ್ಮನಾಭ ನಿರೂಪಿಸಿದರು.
ಸಭಾಕಾರ್ಯಕ್ರಮದ ಬಳಿಕ ‘ಸ್ಯಮಂತಕಮಣಿ’ ತಾಳಮದ್ದಳೆ ಜರುಗಿತು. ಹಿಮ್ಮೇಳದಲ್ಲಿ ಪುತ್ತೂರು ರಮೇಶ್ ಭಟ್, ಜನಾರ್ದನ ತೋಳ್ಪಾಡಿತ್ತಾಯ, ಪಿ. ಜಿ. ಜಗನ್ನಿವಾಸ ರಾವ್ ಸಹಕರಿಸಿದರು. ಮುಮ್ಮೇಳದಲ್ಲಿ ಡಾ. ಎಂ. ಪ್ರಭಾಕರ ಜೋಶಿ, ಉಜಿರೆ ಅಶೋಕ ಭಟ್, ಡಾ. ಸಿಬಂತಿ ಪದ್ಮನಾಭ, ಆರತಿ ಪಟ್ರಮೆ ಅರ್ಥಧಾರಿಗಳಾಗಿ ಭಾಗವಹಿಸಿದರು.