ಬೆಳ್ತಂಗಡಿ : ಧನು ಪೂಜೆಗೆಂದು ಹೋದ ಬಾಲಕ ನಾಪತ್ತೆ
ಬೆಳ್ತಂಗಡಿ: ಧನು ಪೂಜೆಗೆ ಹೋದ 9ನೇ ತರಗತಿ ವಿದ್ಯಾರ್ಥಿಯೊಬ್ಬ ನಾಪತ್ತೆಯಾದ ಘಟನೆ ಜ.14ರಂದು ಬುಧವಾರ ಬೆಳಿಗ್ಗೆ ಬೆಳ್ತಂಗಡಿ ತಾಲ್ಲೂಕಿನ ಕುವೆಟ್ಟು ಗ್ರಾಮದ ಸಂಬೋಳ್ಯ ಸಮೀಪದ ಬರಮೇಲು ಪ್ರದೇಶದಲ್ಲಿ ನಡೆದಿದೆ.
ನಾಪತ್ತೆಯಾದ ಬಾಲಕನು ಕುವೆಟ್ಟು ಗ್ರಾಮದ ಬರಮೇಲು ನಿವಾಸಿ ಸುಮಂತ್ (16) ಎಂದು ಗುರುತಿಸಲಾಗಿದೆ. ಗೇರುಕಟ್ಟೆ ಸರ್ಕಾರಿ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿಯಾಗಿರುವ ಸುಮಂತ್, ಇಂದು ಮುಂಜಾನೆ ಸುಮಾರು 5 ಗಂಟೆ ವೇಳೆಗೆ ಸಮೀಪದ ಕಳಿಯ ಗ್ರಾಮದ ನಾಳದ ದೇವಸ್ಥಾನಕ್ಕೆ ಧನು ಪೂಜೆಗೆ ತೆರಳಿದ್ದ.
ಈ ಮಧ್ಯೆ ಮನೆ ಸಮೀಪದ ತೋಟದ ಕೆರೆಯ ಬದಿಯಲ್ಲಿ ರಕ್ತದ ಕಲೆಗಳು ಕಂಡುಬಂದಿದ್ದು, ಈ ಪ್ರದೇಶ ಅರಣ್ಯಕ್ಕೆ ಹೊಂದಿಕೊಂಡಿರುವುದರಿಂದ ಯಾವುದೋ ಕಾಡುಪ್ರಾಣಿ ಬಾಲಕನ ಮೇಲೆ ದಾಳಿ ಮಾಡಿರಬಹುದೆಂಬ ಅನುಮಾನವನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.
ಘಟನಾ ಸ್ಥಳಕ್ಕೆ ಬೆಳ್ತಂಗಡಿ ಪೊಲೀಸರು, ಬೆಳ್ತಂಗಡಿ ವಲಯ ಅರಣ್ಯಾಧಿಕಾರಿಗಳು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬಾಲಕನಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.