ಮಂಗಳೂರು| ನಿಟ್ಟೆ ಸಮೂಹ ಸಂಸ್ಥೆಗಳ ಸ್ಥಾಪಕಾಧ್ಯಕ್ಷ ವಿನಯ ಹೆಗ್ಡೆಗೆ ಶ್ರದ್ಧಾಂಜಲಿ
ಮಂಗಳೂರು, ಜ.13: ಪ್ರಾಮಾಣಿಕತೆ, ನಿಷ್ಠೆಯನ್ನು ಜೀವನಪಥವನ್ನೆಲ್ಲಾ ಪಾಲಿಸಿಕೊಂಡು ಬಂದ ಡಾ. ಎನ್. ವಿನಯ ಹೆಗ್ಡೆ ಎಲ್ಲರೊಂದಿಗೆ ಆತ್ಮೀಯರಾಗಿದ್ದರು. ಅವರು ಸದಾ ಸಾಧನೆಯ ಹಾದಿಯಲ್ಲಿ ಮುನ್ನಡೆದವರು ಎಂದು ನೆನಪಿಸಿಕೊಂಡವರು ಅವರ ಕಿರಿಯ ಸೋದರ, ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ ಹೆಗ್ಡೆ.
ಅಗಲಿದ ನಿಟ್ಟೆ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ, ನಿಟ್ಟೆ ಪರಿಗಣಿತ ವಿ.ವಿ.ಯ ಕುಲಾಧಿಪತಿ, ಶಿಕ್ಷಣ ತಜ್ಞ ಹಾಗೂ ಕೈಗಾರಿಕೋದ್ಯಮಿ ವಿನಯ ಹೆಗ್ಡೆ ಅವರಿಗೆ ನಗರದ ಟಿಎಂಎ ಪೈ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ನುಡಿನಮನ ಸಮಾರಂಭದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ವಿನಯರ ಪರಿಶ್ರಮ ಅವರನ್ನು ಎತ್ತರಕ್ಕೆ ಬೆಳೆಸಿದುದಾಗಿ, ಲೆಮಿನಾ ಸಂಸ್ಥೆ ಸ್ಥಾಪಿಸಿ ಯಶಸ್ವಿಯಾದದ್ದು, ಕೆ.ಎಸ್. ಹೆಗ್ಡೆ ವೈದ್ಯಕೀಯ ಅಕಾಡೆಮಿ ಸ್ಥಾಪಿಸಿ ಸಮಾಜಕ್ಕೆ ಕೊಡುಗೆ ನೀಡಿರುವುದನ್ನು ಮೆಚ್ಚಿಕೊಂಡರು ಎಂದು ಅವರು ಹೇಳಿದರು.
ನಿಟ್ಟೆ ವಿವಿಯ ಸಹಕುಲಾಧಿಪತಿ ಡಾ. ಶಾಂತಾರಾಮ ಶೆಟ್ಟಿ ಮಾತನಾಡಿ, ವಿನಯ ಹೆಗ್ಡೆ ಕನಸುಗಾರರಾಗಿದ್ದು, ಕನಸನ್ನು ನನಸಾಗಿಸಲು ಶ್ರಮಿಸಿದವರಾಗಿದ್ದಾರೆ. ಅವರ ಸಾಧನೆಯ ಹಿಂದೆ ಅವಿರತ ಶ್ರಮವಿದ್ದು, ಇದು ಇತರರಿಗೆ ಪ್ರೇರಣೆಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕರ್ನಾಟಕ ವಿಧಾನಸಭಾ ಅಧ್ಯಕ್ಷ ಯು.ಟಿ. ಖಾದರ್, ಶಾಸಕರು, ಮಾಜಿ ಮುಖ್ಯಮಂತ್ರಿಗಳು, ಮಾಜಿ ಸಚಿವರು, ಸಂಸದರರು ಹಾಗೂ ಶ್ರದ್ಧಾಂಜಲಿ ಅರ್ಪಿಸಿದ ಅನೇಕ ಗಣ್ಯರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಎ.ಜೆ. ಸಮೂಹ ಸಂಸ್ಥೆಗಳ ಅಧ್ಯಕ್ಷ ಎ.ಜೆ. ಶೆಟ್ಟಿ, ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಯೆನೆಪೋಯ ಪರಿಗಣಿತ ವಿಶ್ವ ವಿದ್ಯಾ ನಿಲಯದ ಕುಲಾಧಿಪತಿ ಯೆನೆಪೋಯ ಅಬ್ದುಲ್ಲಾ ಕುಂಞ್, ಇಂಡಿಯನ್ ರೆಡ್ ಕ್ರಾಸ್ ಘಟಕದ ಸಭಾಪತಿ ಸಿ.ಎ. ಶಾಂತಾರಾಮ ಶೆಟ್ಟಿ, ಕ್ಯಾ. ಗಣೇಶ್ ಕಾರ್ನಿಕ್, ನಿಟ್ಟೆ ಗುತ್ತು ಕುಟುಂಬದ ಸದಸ್ಯರು – ಕ್ಯಾ. ಪ್ರಸನ್ನ ಹೆಗ್ಡೆ, ನಿರ್ಮಲಾ ಅಡ್ಯಂತಾಯ್, ಅಶಾ ಅಜಿಲ್, ಸುಜಾತಾ ವಿನಯ ಹೆಗ್ಡೆ, ಅಶ್ವಿತ, ರೋಹಿತ್ ಪೂಂಜ, ವಿಶಾಲ್ ರೂಪಾ ಹೆಗ್ಡೆ, ಆವಿಷ್ಕಾ, ವೀರೆನ್, ವೈಷ್ಣವಿ – ಮತ್ತು ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಮುಖಂಡರು ಬೃಹತ್ ಸಂಖ್ಯೆಯಲ್ಲಿ ಭಾಗವಹಿಸಿ ಪುಷ್ಪನಮನ ಸಲ್ಲಿಸಿದರು.
ರಾಜ್ಯದ ಮಾಜಿ ಮುಖ್ಯಮಂತ್ರಿಗಳು, ಹಿರಿಯ ಸಚಿವರು, ಮಾಜಿ ಸಚಿವರು, ಶಾಸಕರು, ಮಾಜಿ ಶಾಸಕರು, ಉದ್ಯಮಿಗಳು, ಶಿಕ್ಷಣ ತಜ್ಞರು ಸೇರಿದಂತೆ ಗಣ್ಯರು ಗೌರವ ನಮನ ಸಲ್ಲಿಸಿದರು. ವಿನಯ ಹೆಗ್ಡೆಯವರ ಸಹಸ್ರಾರು ಆಪ್ತರ, ಅಭಿಮಾನಿಗಳು, ಕುಟುಂಬ ವರ್ಗದವರು ಮತ್ತು ನಿಟ್ಟೆ ಸಂಸ್ಥೆಗಳ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗವು ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.