ಕ್ರೈಸ್ತರಿಂದ ಸಂಭ್ರಮದ ಮೊಂತಿ ಹಬ್ಬ ಆಚರಣೆ
ಮಂಗಳೂರು, ಸೆ.8: ದ.ಕ., ಉಡುಪಿ ಹಾಗೂ ಕಾಸರಗೋಡು ಜಿಲ್ಲಾದ್ಯಂತ ಮೊಂತಿ (ಮೇರಿ ಮಾತೆ) ಹಬ್ಬವನ್ನು ಕ್ರೈಸ್ತರು ಇಂದು ಆಚರಿಸುತ್ತಿದ್ದಾರೆ.
ತೆನೆ ಹಬ್ಬವೆಂದೂ ಕರೆಯಲ್ಪಡುವ ಮೊಂತಿ ಫೆಸ್ಟ್ ಪ್ರಯುಕ್ತ ಚರ್ಚ್ಗಳಲ್ಲಿ ವಿಶೇಷ ಬಲಿಪೂಜೆ, ಹೊಸ ತೆನೆಯ ಆಶೀರ್ವಚನ, ವಿತರಣೆ, ಮೆರವಣಿಗೆ, ಪುಷ್ಪಾರ್ಚನೆಯ ಮೂಲಕ ಮೇರಿ ಮಾತೆಗೆ ನಮನ, ಧರ್ಮ ಗುರುಗಳಿಂದ ಹಬ್ಬದ ಸಂದೇಶ, ಹಬ್ಬದ ಶುಭಾಶಯ ವಿನಿಮಯ, ಸಿಹಿ ತಿಂಡಿ ಮತ್ತು ಕಬ್ಬು ವಿತರಣೆ ಹಾಗೂ ಬಳಿಕ ಮನೆಗಳಲ್ಲಿ ಹಬ್ಬದ ಭೋಜನವನ್ನು ಮಾಡಲಾಗುತ್ತದೆ. ಹಬ್ಬಕ್ಕೆ ಪೂರ್ವಭಾವಿಯಾಗಿ ಚರ್ಚ್ಗಳಲ್ಲಿ 9 ದಿನಗಳ ನವೇನಾ ಪ್ರಾರ್ಥನೆ ನಡೆದಿದೆ. ಶುಕ್ರವಾರ ಬೆಳಗ್ಗೆ ಚರ್ಚ್ಗಳಲ್ಲಿ ಬಲಿ ಪೂಜೆಯ ಬಳಿಕ ಭತ್ತದ ತೆನೆಯನ್ನು ವಿತರಿಸಲಾಯಿತು.
ಸ್ಥಳೀಯವಾಗಿ ಬೆಳೆಯುವ ತರಕಾರಿಯ ಪಲ್ಯ, ಸಾರು, ಸಿಹಿ ಪಾಯಸದಿಂದ ಕೂಡಿದ ಸಸ್ಯಾಹಾರಿ ಭೋಜನ ಕರಾವಳಿ ಕ್ರೈಸ್ತರ ಮನೆಗಳಲ್ಲಿ ಮೊಂತಿ ಹಬ್ಬದ ವಿಶೇಷವಾಗಿರುತ್ತದೆ.
ಮಂಗಳೂರಿನ ರೊಸಾರಿಯೊ ಚರ್ಚ್, ಬೋಂದೆಲ್ ಚರ್ಚ್, ಉರ್ವಾ ಚರ್ಚ್ ಸೇರಿದಂತೆ ವಿವಿಧ ಚರ್ಚ್ ಗಳಲ್ಲಿ ಬೆಳಗ್ಗೆ ವಿಶೇಷ ಬಲಿಪೂಜೆ ನೆರವೇರಿತು.