2047ರೊಳಗೆ ದಕ್ಷಿಣ ಭಾರತದ ಸಮಗ್ರ ಅಭಿವೃದ್ಧಿಗಾಗಿ ಸಿಐಐ ನಿಂದ ಒಂಭತ್ತು ಅಂಶಗಳ ಕಾರ್ಯಕ್ರಮ
ಮಂಗಳೂರು: ಭಾರತೀಯ ಕೈಗಾರಿಕಾ ಒಕ್ಕೂಟ (ಸಿಐಐ)ದ ರಾಷ್ಟ್ರೀಯ ಧ್ಯೇಯಕ್ಕೆ ಅನುಗುಣವಾಗಿ ಸಿಐಐ ಸದರ್ನ್ ರಿಜನ್ (ಸಿಐಐಎಸ್‌ಆರ್) ಈ ವರ್ಷ ದಕ್ಷಿಣದ ರಾಜ್ಯಗಳ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುವುದರ ಮೇಲೆ ಗಮನವನ್ನು ಕೇಂದ್ರೀಕರಿಸಲಿದೆ ಮತ್ತು 2023-24ನೇ ಸಾಲಿಗಾಗಿ ಸ್ಪರ್ಧಾತ್ಮಕತೆ, ಸುಸ್ಥಿರತೆ, ವಿಶ್ವಾಸ ಮತ್ತು ಜಾಗತೀಕರಣದ ಮೂಲಕ 2047ರ ವೇಳೆಗೆ ದಕ್ಷಿಣ ಭಾರತದ ಪರಿವರ್ತನೆಗಾಗಿ ಒಂಭತ್ತು ಅಂಶಗಳ ಕ್ರಿಯಾ ಯೋಜನೆಯೊಂದನ್ನು ರೂಪಿಸಿದೆ ಎಂದು ಸಿಐಐಎಸ್‌ಆರ್‌ನ ಅಧ್ಯಕ್ಷ ಕಮಲ್ ಬಾಲಿ ಅವರು ಹೇಳಿದರು. ವೋಲ್ವೊ ಗ್ರೂಪ್ ಇಂಡಿಯಾದ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕರೂ ಆಗಿರುವ ಬಾಲಿ ಶನಿವಾರ ಇಲ್ಲಿ ಸಿಐಐ ಮಂಗಳೂರು ಕಚೇರಿಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ದಕ್ಷಿಣ ಭಾರತದ ದ್ವಿತೀಯ ದರ್ಜೆ ನಗರಗಳಲ್ಲಿ ತನ್ನ ಸೇವೆಗಳನ್ನು ವಿಸ್ತರಿಸುವ ತನ್ನ ಉದ್ದೇಶದ ಅಂಗವಾಗಿ ಸಿಐಐ ಸದರ್ನ ರಿಜನ್ ಮಂಗಳೂರಿನಲ್ಲಿ ನೂತನ ಕಚೇರಿಯನ್ನು ಆರಂಭಿಸಿದೆ. ಮಂಗಳೂರು ಕಚೇರಿಯ ಉದ್ಘಾಟನೆಯೊಂದಿಗೆ ಕರ್ನಾಟಕದಲ್ಲಿ ಮೂರು ಸೇರಿದಂತೆ ದಕ್ಷಿಣ ಭಾರತದಲ್ಲಿ ಸಿಐಐ ಕಚೇರಿಗಳ ಸಂಖ್ಯೆ 17ಕ್ಕೇರಿದೆ.
ಸಿಐಐಎಸ್‌ಆರ್ ಪ್ರಾದೇಶಿಕ ನಿರ್ದೇಶಕ ಎನ್‌ಎಂಪಿ ಜಯೇಶ,ಸಿಐಐ ಕರ್ನಾಟಕ ಅಧ್ಯಕ್ಷ ವಿಜಯಕೃಷ್ಣನ್ ವೆಂಕಟೇಶನ್,ಸಿಐಐ ಮಂಗಳೂರು ಜಿಲ್ಲೆ ಅಧ್ಯಕ್ಷ ಪ್ರವೀಣಕುಮಾರ ಕಲ್ಭಾವಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.