×
Ad

ಬೆಳ್ತಂಗಡಿ: ದನ ಮಾರಾಟ ಮಾಡಿದ್ದ ಮಹಿಳೆಯ ಮನೆ ಮುಟ್ಟುಗೋಲು ಪ್ರಕರಣದಲ್ಲಿ ಕಾನೂನು ವ್ಯಾಪ್ತಿ ಮೀರಿದ ಪೊಲೀಸರು!

ಪುತ್ತೂರು ಸಹಾಯಕ ಆಯುಕ್ತರ ಆದೇಶದಲ್ಲೇನಿದೆ?

Update: 2025-11-08 14:52 IST

ಸಾಂದರ್ಭಿಕ ಚಿತ್ರ

ಬೆಳ್ತಂಗಡಿ: ಕಸಾಯಿಖಾನೆಗೆ ಸಾಗಾಟ ಮಾಡುವವರಿಗೆ ಜಾನುವಾರುಗಳನ್ನು ಮಾರಾಟ ಮಾಡಿದ ಆರೋಪದಲ್ಲಿ ಧರ್ಮಸ್ಥಳ ಪೊಲೀಸರು ಮುಟ್ಟುಗೋಲು ಹಾಕಿದ್ದ ಪಟ್ರಮೆ ಗ್ರಾಮದ ಪಟ್ಟೂರು ನಿವಾಸಿ ಝೊಹರಾ ಎಂಬವರ ಮನೆಯನ್ನು ಬಿಡುಗಡೆ ಮಾಡಿ ಪುತ್ತೂರು ಸಹಾಯಕ ಆಯಕ್ತರು ಆದೇಶಿಸಿದ್ದು, ಈ ಆದೇಶದಲ್ಲಿ ಪೊಲೀಸರು ಪ್ರಕರಣದಲ್ಲಿ ಕಾನೂನು ಮೀರಿದ್ದಾರೆ ಎಂದು ಅವರು ಹೇಳಿದ್ದಾರೆ.

ಧರ್ಮಸ್ಥಳ ಠಾಣಾ ಉಪ ನಿರೀಕ್ಷಕರಿಗೆ ಈ ಕುರಿತು ಪುತ್ತೂರು ಸಹಾಯಕ ಆಯಕ್ತರು ಆದೇಶವನ್ನು ಹೊರಡಿಸಿದ್ದಾರೆ. ಆದೇಶದಲ್ಲಿ ಈ ಪ್ರಕರಣದಲ್ಲಿ ಪೊಲೀಸರು ಕಾನೂನು ವ್ಯಾಪ್ತಿಯನ್ನು ಮೀರಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಹೇಳಲಾಗಿದೆ.

ಪ್ರಕರಣದಲ್ಲಿ ನಿಯಮ ಉಲ್ಲಂಘನೆಯ ಲೋಪ ಎಸಗಿದ್ದಾರೆನ್ನಲಾದ ಪೊಲೀಸರ ವಿರುದ್ಧ ಕ್ರಮಕ್ಕೆ ಆಗ್ರಹ ಕೇಳಿ ಬಂದಿದೆ.

ಪುತ್ತೂರು ಸಹಾಯಕ ಆಯಕ್ತರ ಆದೇಶದಲ್ಲೇನಿದೆ?:

ಈಗಾಗಲೇ ಪರವಾನಗೆಯಿಲ್ಲದೆ ಜಾನುವಾರು ಸಾಗಾಟ ಮಾಡುತ್ತಿರುವ ಪ್ರಕರಣದಲ್ಲಿ ಕೃತ್ಯವನ್ನು ಎಸಗಿದ ವಾಹನ ಹಾಗೂ ಕರುಗಳನ್ನು ಜಪ್ತಿ ಮಾಡಿ ಸ್ವತ್ತುಪಟ್ಟಿಯನ್ನು ಸಲ್ಲಿಸಿದ್ದೀರಿ. ಇದರ ಜೊತೆಗೆ ಕೃತ್ಯ ಎಸಗಿದ 1ನೇ ಮತ್ತು 2ನೆ ಆರೋಪಿಯ 2 ಮನೆ ಹಾಗೂ ಸ್ವತ್ತುಗಳನ್ನು ಜಪ್ತಿ ಮಾಡಿ ಈ ಕಚೇರಿಗೆ ಸಲ್ಲಿಸಿರುತ್ತೀರಿ. ಇದಲ್ಲದೆ ಕೃತ್ಯ ನಡೆದ 4 ದಿನಗಳ ನಂತರ ಜಾನುವಾರುಗಳನ್ನು ಮಾರಾಟ ಮಾಡಿದವರು ಅಂದರೆ ಜೊಹರಾರವರು ಹಾಗೂ ಕುಟುಂಬದ 7 ಜನ ವಾಸಿಸುತ್ತಿದ್ದ ಮನೆಯನ್ನು ಏಕಾಏಕಿಯಾಗಿ ಜಪ್ತಿ ಮಾಡಿ ಅವರನ್ನು ವಾಸದ ಮನೆಯಿಂದ ಹೊರ ಹಾಕಿರುತ್ತೀರಿ ಎಂಬುದನ್ನು ಉಲ್ಲೇಖಿಸಲಾಗಿದೆ.

ಮನೆಯಲ್ಲಿ 16 ವಯಸ್ಸಿನ ಇಬ್ಬರು ಹೆಣ್ಣು ಮಕ್ಕಳು, ಹೈಸ್ಕೂಲಲ್ಲಿ ಓದುತ್ತಿರುವ ಓರ್ವ ಬಾಲಕ, ಹಿರಿಯ ವಯಸ್ಕ ಮಹಿಳೆ ಹಾಗೂ ಉಳಿದ ಕುಟುಂಬದ ಸದಸ್ಯರುಗಳು ವಾಸವಾಗಿದ್ದರು. ಸಾಯಂಕಾಲ 06 ಗಂಟೆಯಿಂದ 7:45ರವರೆಗೆ ಜಪ್ತಿ ಮಹಜರು ಪ್ರಕ್ರಿಯೆ ಮುಕ್ತಾಯಗೊಳಿಸಿರುದು ಮಹಜರಿನಿಂದ ತಿಳಿದು ಬಂದಿರುತ್ತದೆ. ತಾವು ಸಲ್ಲಿಸಿದ ವಿಡಿಯೋ ಚಿತ್ರಿಕರಣದ ತುಣಕನ್ನು ಪರಿಶೀಲಿಸಿದಾಗ ಜೊಹರಾರವರ ಮನೆಯಲ್ಲಿ ಕೃತ್ಯಕ್ಕೆ ಸಂಬಂಧಿಸಿದಂತೆ ಯಾವುದೇ ಸಾಕ್ಷ್ಯ ಕಂಡುಬಂದಿರುವುದಿಲ್ಲ ಎಂದು ಉಲ್ಲೇಖಿಸಿದ್ದಾರೆ.

ಈ ಪ್ರಕರಣದಲ್ಲಿ ತಾವುಗಳು ಕಾನೂನು ವ್ಯಾಪ್ತಿಯನ್ನು ಮೀರಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಆದ್ದರಿಂದ ಬೆಳ್ತಂಗಡಿ ತಾಲೂಕಿನ ಪಟ್ರಮೆ ಗ್ರಾಮದಲ್ಲಿರುವ ಜಪ್ತಿ ಮಾಡಿದ ಮನೆಯನ್ನು ಕೂಡಲೇ ಬಿಡುಗಡೆಗೊಳಿಸಬೇಕು ಮತ್ತು ಕೈಗೊಂಡ ಕ್ರಮದ ಬಗ್ಗೆ ವರದಿ ಸಲ್ಲಿಸಬೇಕು ಎಂದು ಹೇಳಿದೆ.

ಇದಲ್ಲದೆ ಈ ಪ್ರಕರಣದಲ್ಲಿ ಕೃತ್ಯ ಎಸಗಿದ 1 ಮತ್ತು 2 ನೇ ಆರೋಪಿಯವರ ಸ್ವತ್ತುಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯದ ವಿಚಾರಣೆ ಸಂದರ್ಭದಲ್ಲಿ ನಿರ್ಣಯ ಕೈಗೊಳ್ಳಲಾಗುವುದು ಎಂದು ತಿಳಿಸಿದೆ.

ಪ್ರಕರಣವೇನು?

ಅಕ್ರಮವಾಗಿ ಕಾರಿನಲ್ಲಿ ದನ ಸಾಗಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಿದ ಧರ್ಮಸ್ಥಳ ಪೊಲೀಸರು ಇಬ್ಬರನ್ನು ಬಂಧಿಸಿದ್ದರು. ನಂತರ ದನಗಳನ್ನು ವಧೆ ಮಾಡಲು ಉದ್ದೇಶಿಸಿದ್ದ ಆರೋಪಿಗಳ ಮನೆಯನ್ನು ಪೊಲೀಸರು ಜಪ್ತಿ ಮಾಡಿದ್ದರು.

ಆರೋಪಿಗಳಿಗೆ ಕರುಗಳನ್ನು ಮಾರಾಟ ಮಾಡಿದ್ದ ಪಟ್ರಮೆ ಗ್ರಾಮದ ಪಟ್ಟೂರು ನಿವಾಸಿ ಜೊಹರಾ ಅವರ ಮನೆಯನ್ನು ಏಕಾಏಕಿ ಜಪ್ತಿ ಮಾಡಿ ಹೆಣ್ಣು ಮಕ್ಕಳು ಸೇರಿದಂತೆ ಏಳು ಮಂದಿಯ ಕುಟುಂಬವನ್ನು ಮನೆಯಿಂದ ಹೊರ ಹಾಕಿದ್ದರು ಎಂದು ಆರೋಪಿಸಲಾಗಿತ್ತು. ಪೊಲೀಸರ ಈ ಕ್ರಮದ ವಿರುದ್ದ ಸಿಪಿಐಎಂ ಮುಖಂಡ ಬಿ.ಎಂ ಭಟ್ ಸಂತ್ರಸ್ತ ಕುಟುಂಬದ ಪರವಾಗಿ ಪುತ್ತೂರು ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿದ್ದರು. ಈ ಮನವಿಯನ್ನು ಪುರಸ್ಕರಿಸಿದ ಸಹಾಯಕ ಆಯುಕ್ತರು ಪೊಲೀಸರು ವ್ಯಾಪ್ತಿ ಮೀರಿ ಕ್ರಮ ಕೈಗೊಂಡಿದ್ದು, ಕೂಡಲೇ ಮನೆಯನ್ನು ಅವರಿಗೆ ಹಿಂತಿರುಗಿಸುವಂತೆ ಆದೇಶ ನೀಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News