×
Ad

ಧರ್ಮಸ್ಥಳ ದೂರು | ದೇವಾಲಯದ ಮಾಹಿತಿ ಕೇಂದ್ರದ ಸೂಚನೆಯ ಮೇರೆಗೆ ನೂರಕ್ಕೂ ಹೆಚ್ಚು ಶವಗಳನ್ನು ಹೂತಿದ್ದೇನೆ; ʼಇಂಡಿಯಾ ಟುಡೇʼ ಸಂದರ್ಶನದಲ್ಲಿ ದೂರದಾರ ಹೇಳಿಕೆ

"2012 ರಲ್ಲಿ ಸೌಜನ್ಯ ಕೊಲೆ ನಡೆದಾಗಲೂ ನನಗೆ ಕರೆ ಬಂದಿತ್ತು"

Update: 2025-08-14 17:03 IST

ಬೆಂಗಳೂರು: ಧರ್ಮಸ್ಥಳದಲ್ಲಿ ದೇವಾಲಯದ ಸೂಚನೆಯ ಮೇರೆಗೆ 100 ಕ್ಕೂ ಹೆಚ್ಚು ಅಪರಿಚಿತ ಶವಗಳನ್ನು ಹೂತಿರುವುದಾಗಿ ಧರ್ಮಸ್ಥಳ ದೂರು ಪ್ರಕರಣಕ್ಕೆ ಸಂಬಂಧಿಸಿದಂತೆ ದೂರದಾರ ಸಾಕ್ಷಿಯು ʼಇಂಡಿಯಾ ಟುಡೇʼ ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಹೇಳಿದ್ದಾರೆ.

ಧರ್ಮಸ್ಥಳದಲ್ಲಿ ಸಾಮೂಹಿಕವಾಗಿ ಹೂತು ಹಾಕಿದ್ದಲಾಗಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡಕ್ಕೆ (SIT) ಹೊರತು ಪಡಿಸಿ, ಮಾಧ್ಯಮಗಳಿಗೆ ನೀಡಿದ ಮೊದಲ ಸಂದರ್ಶನ ಇದಾಗಿದೆ.

ಮಾಜಿ ನೈರ್ಮಲ್ಯ ಕಾರ್ಯಕರ್ತನಾಗಿರುವ ದೂರುದಾರ ಸಾಕ್ಷಿಯ ಪ್ರಕಾರ, ಯಾವುದೇ ಅಧಿಕೃತ ದಾಖಲೆ ಅಥವಾ ಮೇಲ್ವಿಚಾರಣೆ ಇಲ್ಲದೆ, ಕಾಡು, ಹಳೆಯ ರಸ್ತೆ ಬದಿಗಳು, ನೇತ್ರಾವತಿ ಸ್ನಾನಘಟ್ಟದ ಬಳಿ ಶವಗಳನ್ನು ಸಮಾಧಿ ಮಾಡಲಾಗುತ್ತಿತ್ತು. ಸ್ಥಳೀಯ ಪಂಚಾಯತ್ ನಿಂದ ಶವಸಂಸ್ಕಾರಕ್ಕೆ ಯಾವುದೇ ಆದೇಶ ಬಂದಿರಲಿಲ್ಲ. ಎಲ್ಲಾ ನಿರ್ದೇಶನಗಳೂ ದೇವಾಲಯದ ಮಾಹಿತಿ ಕೇಂದ್ರದಿಂದಲೇ ಬರುತ್ತಿದ್ದವು ಎಂದು ಅವರು India Today ಗೆ ತಿಳಿಸಿದ್ದಾರೆ.

ಮೃತದೇಹಗಳನ್ನು ಹೂತುಹಾಕುತ್ತಿದ್ದರು ಎನ್ನಲಾದ ತಂಡದಲ್ಲಿದ್ದ ನಾಲ್ವರು ಇನ್ನಿತರ ಸದಸ್ಯರ ಹೆಸರುಗಳನ್ನು ಹೇಳಿದ್ದು, “ಬಾಹುಬಲಿ ಬೆಟ್ಟಗಳಲ್ಲಿ ಒಬ್ಬ ಮಹಿಳೆಯನ್ನು ಹಾಗೂ ನೇತ್ರಾವತಿ ಸ್ನಾನಘಾಟ್‌ನಲ್ಲಿ 70 ಶವಗಳನ್ನು ಸಮಾಧಿ ಮಾಡಿದ್ದೇವೆ. 'ಸ್ಪಾಟ್ 13' ಎನ್ನುವ ಸ್ಥಳದಲ್ಲೇ 70-80 ಶವಗಳು ಇವೆ” ಎಂದು ಹೇಳಿದ್ದಾರೆ.

ಹಿಂಸೆಯ ಹಾಗೂ ಲೈಂಗಿಕ ದೌರ್ಜನ್ಯದ ಲಕ್ಷಣಗಳಿದ್ದ ಮೃತದೇಹಗಳೂ ಕಂಡುಬಂದಿದ್ದು, ವೈದ್ಯಕೀಯ ತಜ್ಞರು ಮಾತ್ರ ಇದನ್ನು ದೃಢೀಕರಿಸಬಹುದು ಎಂದು ಅವರು ಹೇಳಿದ್ದಾರೆ. 100 ಮೃತದೇಹಗಳಲ್ಲಿ ಸುಮಾರು 90 ಮಹಿಳೆಯರದ್ದಾಗಿದ್ದವು ಎಂದು ಅವರು ಹೇಳಿಕೊಂಡಿದ್ದಾರೆ.

ಕಾಲಕ್ರಮೇಣ ಅರಣ್ಯ ದಟ್ಟವಾಗಿರುವುದು, ಮಣ್ಣಿನ ಬದಲಾವಣೆ ಹಾಗೂ ನಿರ್ಮಾಣ ಕಾರ್ಯಗಳಿಂದ ಅನೇಕ ಸಮಾಧಿ ಸ್ಥಳಗಳ ಗುರುತು ಮಾಯವಾಗಿದೆ ಎಂದ ಅವರು, “ನಾನು ನನ್ನ ನೆನಪಿನ ಆಧಾರದ ಮೇಲೆ ಸ್ಥಳಗಳನ್ನು ತೋರಿಸುತ್ತಿದ್ದೇನೆ, ಆದರೆ ನಿಖರವಾಗಿ ಪತ್ತೆಹಚ್ಚಲು JCB ಮೂಲಕ ವಿಶಾಲವಾಗಿ ಅಗೆಯಬೇಕು” ಎಂದು ಹೇಳಿದ್ದಾರೆ.

ಅವರು ತನಿಖಾ ತಂಡದ ಮೇಲೆ ನಂಬಿಕೆ ಹೊಂದಿದ್ದರೂ, ತಮ್ಮ ಮಾತುಗಳನ್ನು ಸಂಪೂರ್ಣವಾಗಿ ಸ್ವೀಕರಿಸದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “SIT ನನ್ನೊಂದಿಗೆ ಇದ್ದ ಇತರರನ್ನು ಕೂಡ ಕರೆಯಲಿ. ಎಲ್ಲರೂ ಸತ್ಯ ಹೇಳಿದರೆ ಪ್ರಕ್ರಿಯೆ ವೇಗವಾಗುತ್ತದೆ” ಎಂದು ಮನವಿ ಮಾಡಿದ್ದಾರೆ.

ದೂರುದಾರ ಸಾಕ್ಷಿಯು 2012ರ ಸೌಜನ್ಯ ಕೊಲೆ ಪ್ರಕರಣದ ಸಂದರ್ಭದಲ್ಲಿಯೂ ಕರೆ ಬಂದಿತ್ತು ಎಂದು ಹೇಳಿದ್ದಾರೆ. ಎರಡು ದಶಕಗಳ ಬಳಿಕ ನನಗೆ ಪಾಪ ಪ್ರಜ್ಞೆ ಕಾಡಿದ್ದರಿಂದ ನನ್ನ ನೆಮ್ಮದಿಗಾಗಿ ಧರ್ಮಸ್ಥಳಕ್ಕೆ ಮರಳಿರುವುದಾಗಿ ಅವರು ಹೇಳಿದ್ದಾರೆ.

“ಶವಗಳನ್ನು ಎಲ್ಲಿ ಹೂಳಲಾಗಿದೆ ಎಂಬುದನ್ನು ತೋರಿಸುವುದೇ ನನ್ನ ಉದ್ದೇಶ, ದೇವಾಲಯವನ್ನು ದೂಷಿಸುವುದು ಅಲ್ಲ” ಎಂದು ಅವರು ಉಲ್ಲೇಖಿಸಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News