ಗದಗ : ರಸ್ತೆಯಲ್ಲಿ ಸತ್ತು ಬಿದ್ದ ಕತ್ತೆಕಿರುಬವನ್ನು ತಪ್ಪಿಸಲು ಯತ್ನಿಸಿದ ಪೊಲೀಸ್ ಜೀಪ್ ಪಲ್ಟಿ; ಬೆಟಗೇರಿ ಎಎಸ್ಐ ಮೃತ್ಯು
ಗದಗ : ರಸ್ತೆಯಲ್ಲಿ ಸತ್ತು ಬಿದ್ದಿದ್ದ ಕತ್ತೆಕಿರುಬವನ್ನು ತಪ್ಪಿಸಲು ಹೋಗಿ ರಸ್ತೆ ಬದಿ ಕಂದಕಕ್ಕೆ ಬಿದ್ದು ಪೊಲೀಸ್ ಜೀಪ್ ಪಲ್ಟಿಯಾಗಿದ್ದು, ಅಪಘಾತದಲ್ಲಿ ಗಾಯಗೊಂಡಿದ್ದ ಬೆಟಗೇರಿ ಠಾಣೆ ಎಎಸ್ಐ ಮೃತಪಟ್ಟ ಘಟನೆ ಗದಗ ತಾಲೂಕಿನ ಸೊರಟೂರ ಗ್ರಾಮದ ಬಳಿ ನಡೆದಿರುವ ಬಗ್ಗೆ ವರದಿಯಾಗಿದೆ.
ಬೇಟಗೇರಿ ಠಾಣೆ ಎಎಸ್ಐ ಕಾಸಿಂ ಸಾಬ್ ಹರಿವಾಣ ಮೃತ ಪೊಲೀಸ್ ಅಧಿಕಾರಿ. ಲಕ್ಷ್ಮೇಶ್ವರ ದಿಂದ ಕರ್ತವ್ಯ ಮುಗಿಸಿ ಗದಗ ಕಡೆ ಪೊಲೀಸ್ ಜೀಪ್ ಬರುತ್ತಿದ್ದಾಗ ಘಟನೆ ನಡೆದಿದೆ. ಘಟನೆಯಲ್ಲಿ ಕಾಸಿಂ ಸಾಬ್ ಹರಿವಾಣ ಅವರಿಗೆ ಗಂಭೀರ ಗಾಯವಾಗಿದ್ದು ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಿಸದೆ ಇಂದು ಬೆಳಗಿನ ಜಾವ ಆಸ್ಪತ್ರೆಯಲ್ಲೇ ನಿಧನರಾಗಿದ್ದಾರೆ. ಇನ್ನಿಬ್ಬರು ಗಾಯಾಳುಗಳಾದ ವೈರ್‌ಲೆಸ್ ವಿಭಾಗದ ಪೋಲೀಸ್ ಇನ್ಸ್ಪೆಕ್ಟರ್ ಉಮೇಶಗೌಡ ಪಾಟೀಲ್, ಚಾಲಕ ಓಂ ನಾಥ್ ಗೆ ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮೃತ ಕಾಸಿಂ ಸಾಬ್ ಅವರು ಪತ್ನಿ, ಒರ್ವ ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಗದಗ ತಾಲೂಕಿನ ಹುಲಕೋಟಿ ಗ್ರಾಮದಲ್ಲಿ ಅವರ ಅಂತ್ಯಕ್ರಿಯೆಗೆ ಕುಟುಂಬದವರಿಂದ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಕಪ್ಪತ್ತಗುಡ್ಡ ವನ್ಯಜೀವಿಗಳ ತಾಣ. ಇಲ್ಲಿನ ಪ್ರಾಣಿಗಳಿಗೆ ಸಂರಕ್ಷಣೆ ಇಲ್ಲದಂತಾಗಿದೆ ಎನ್ನುವ ಆರೋಪ ಪರಿಸರ ಪ್ರೇಮಿಗಳಿಂದ ಕೇಳಿಬರುತ್ತಲೇ ಇದೆ. ಆಹಾರ ಅರಸಿ ಕಾಡು ಬಿಟ್ಟು ನಾಡಿಗೆ ಬರುತ್ತಿರುವ ಕಾಡು ಪ್ರಾಣಿಗಳು ಸಂಕಷ್ಟ ಎದುರಿಸುವಂತಾಗಿದೆ. ಕತ್ತೆಕಿರುಬವೊಂದು ರಸ್ತೆ ಮಧ್ಯೆ ಸಾವಿಗೀಡಾದ ಘಟನೆ ಇದಕ್ಕೆ ತಾಜಾ ಉದಾಹರಣೆಯಾಗಿದೆ.