ಹನಿಟ್ರ್ಯಾಪ್: ಕೇರಳ ಮೂಲದ ಉದ್ಯಮಿಗೆ ಲಕ್ಷಾಂತರ ರೂ. ವಂಚನೆ; ಆರೋಪ
ವಿಟ್ಲ ಠಾಣೆಯಲ್ಲಿ FIR ದಾಖಲಾಗಿ ವಾರ ಕಳೆದರೂ ಆರೋಪಿಗಳ ಬಂಧನ ಆಗಿಲ್ಲ: ವಕೀಲರ ಆರೋಪ
ಮಂಗಳೂರು, ಅ.17: ರಾಜ್ಯದಲ್ಲಿ ಹನಿಟ್ರ್ಯಾಪ್ ತಂಡಗಳು ಸಕ್ರಿಯವಾಗಿದ್ದು, ಅಸಹಾಯಕ ಹೆಣ್ಣು ಮಕ್ಕಳನ್ನು ಮುಂದಿಟ್ಟು ಉದ್ಯಮಿಗಳಿಗೆ ಬಲೆ ಬೀಸುವ ಕಾರ್ಯಗಳು ಅವ್ಯಾಹತವಾಗಿ ನಡೆಯುತ್ತಿದೆ. ಮರ್ಯಾದೆಗೆ ಅಂಜಿ ಬಹಳಷ್ಟು ಮಂದಿ ಲಕ್ಷಾಂತರ ರೂ. ನೀಡಿ ಮೋಸ ಹೋಗುತ್ತಿದ್ದಾರೆ. ಇಂತಹ ಸಂತ್ರಸ್ತರು ಮುಂದೆ ಬಂದಲ್ಲಿ ಅವರಿಗೆ ಉಚಿತವಾಗಿ ಕಾನೂನು ನೆರವು ನೀಡಲು ಸಿದ್ಧ ಎಂದು ಬೆಂಗಳೂರಿನ ನ್ಯಾಯವಾದಿ ಸೌದಾ ಹೇಳಿದ್ದಾರೆ.
ಮಂಗಳೂರಿನಲ್ಲಿ ಶುಕ್ರವಾರ ಕರೆದ ಸುದ್ದಿಗೋಷ್ಠಿಯಲ್ಲಿ ಅವರು, ಕೇರಳ ಮೂಲದ ಗಲ್ಫ್ ಉದ್ಯಮಿಯೊಬ್ಬರಿಗೆ ಬಂಟ್ವಾಳದ ಹನಿಟ್ರ್ಯಾಪ್ ತಂಡವೊಂದು ಮೋಸ ಮಾಡಿ 44.80 ಲಕ್ಷ ರೂ.ಗಳನ್ನು ವಂಚಿಸಿರುವ ಪ್ರಕರಣದ ವಿವರ ನೀಡಿದರು.
ಕೇರಳ ನಿವಾಸಿ, 53ರ ಹರೆಯದ ಮುಹಮ್ಮದ್ ಅಶ್ರಫ್ ತಾವರಕಡನ್ ಎಂಬವರು ಸೌದಿಯಲ್ಲಿ ಉದ್ಯೋಗದಲ್ಲಿದ್ದು, ಅವರಿಗೆ ಬಶೀರ್ ಕಡಂಬು, ಸಫಿಯಾ ಮಾಣಿ ಮತ್ತು ಇತರ ಆರೋಪಿಗಳು ಸೆ.24ರಂದು ಮಂಗಳೂರಿಗೆ ಕರೆಸಿ ಹೆಣ್ಣು ತೋರಿಸುವ ನೆಪದಲ್ಲಿ ಫೋಟೋ ವಿಡಿಯೋ ಮಾಡಿಸಿ ಬಳಿಕ ಹಣಕ್ಕಾಗಿ ಬೆದರಿಕೆ ಒಡ್ಡಿದ್ದಾರೆ. ವಿವಾಹಿತರಾಗಿರುವ ಅಶ್ರಫ್ ವೀಡಿಯೋ ಬಹಿರಂಗವಾಗುತ್ತದೆ ಎಂಬ ಭಯದಿಂದ 44.80 ಲಕ್ಷ ರೂ.ಗಳನ್ನು ಆರೋಪಿಗಳ ವಿವಿಧ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಿದ್ದಾರೆ. ಈ ಮಧ್ಯೆ ಅಶ್ರಫ್ ಅವರ ಪತ್ನಿಗೂ ಬೇರೆಯವರ ಅಶ್ಲೀಲ ವೀಡಿಯೋವೊಂದನ್ನು ಕಳುಹಿಸಿ ಹಣ ನೀಡದಿದ್ದರೆ ನಿಮ್ಮ ಪತಿಯ ಇಂತಹ ವೀಡಿಯೋ ಬಹಿರಂಗಪಡಿಸುವುದಾಗಿ ಬೆದರಿಸಿದ್ದಾರೆ. ಇದರಿಂದ ಕಳೆದ ವಾರ ವಿಟ್ಲ ಪೊಲೀಸ್ ಠಾಣೆಗೆ ಆಗಮಿಸಿ ಅಶ್ರಫ್ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆದರೆ ಒಂದು ವಾರ ಆದರೂ ಆರೋಪಿಗಳ ಬಂಧನವಾಗಿಲ್ಲ. ಪ್ರಕರಣ ದಾಖಲಿಸಲು ಪೊಲೀಸ್ ಠಾಣೆಯಲ್ಲಿ ಸಾಕಷ್ಟು ತೊಂದರೆಯಾಗಿತ್ತು. ಬಳಿಕ ಹಿರಿಯ ಪೊಲೀಸ್ ಅಧಿಕಾರಿಗಳ ಮುತುವರ್ಜಿಯಲ್ಲಿ ಪ್ರಕರಣ ದಾಖಲಾಗಿದೆ. ಇದೀಗ ಸಂತ್ರಸ್ತ ಅಶ್ರಫ್ ರಿಗೆ ನ್ಯಾಯ ದೊರೆಯಬೇಕಿದೆ ಎಂದು ಸೌದಾ ಹೇಳಿದರು.
ಆರೋಪಿ ಸಫಿಯಾ ಎಂಬವರು 2010ರಿಂದಲೂ ಹನಿಟ್ರ್ಯಾಪ್ ನಂತಹ ಕೃತ್ಯಗಳಲ್ಲಿ ಭಾಗಿಯಾಗಿರುವುದು ಕಂಡುಬಂದಿದೆ. ಇಂತಹ ಹಲವು ತಂಡಗಳು ಸಕ್ರಿಯವಾಗಿದ್ದು, ಉದ್ಯಮಿಗಳನ್ನು ತಮ್ಮ ಬಲೆಗೆ ಹಾಕಿಕೊಂಡು ಹಣ ದೋಚುವ ಕಾರ್ಯ ನಡೆಸುತ್ತಿವೆ. ಈ ಬಗ್ಗೆ ರಾಜ್ಯ ಸರಕಾರ ಕಠಿಣ ಕಾನೂನು ಜಾರಿಗೊಳಿಸಬೇಕು ಎಂದು ಸೌದಾ ಒತ್ತಾಯಿಸಿದರು.
ಪ್ರಕರಣಕ್ಕೆ ಸಂಬಂಧಿಸಿ ಕೆಲ ಸಮುದಾಯದ ನಾಯಕರು ಮುಂದೆ ಬಂದು ತಡೆಯಲು ಪ್ರಯತ್ನಿಸಿದ್ದಾರೆ. ಈ ಬಗ್ಗೆಯೂ ಪೊಲೀಸರಿಗೆ ಮಾಹಿತಿ ನೀಡಲಾಗಿದೆ ಎಂದವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಂತ್ರಸ್ತ ಮುಹಮ್ಮದ್ ಅಶ್ರಫ್, ಅಬ್ದುಲ್ ರಝಾಕ್ ಉಪಸ್ಥಿತರಿದ್ದರು.