×
Ad

ಮಾನವೀಯತೆಯ ಸಂದೇಶ ಸಾರಿದ ಸಾಂತ್ವನದ ಸಂಚಾರ : ವಿಶೇಷ ಚೇತನ ಮಕ್ಕಳೊಂದಿಗೆ 3ನೇ ವರ್ಷದ ಕಾರ್ಯಕ್ರಮ

ಕೋಸ್ಟಲ್ ಫ್ರೆಂಡ್ಸ್ ಮಂಗಳೂರು ಆಯೋಜನೆ

Update: 2025-12-07 19:19 IST

ಮಂಗಳೂರು, ಡಿ.7: ವಿಶೇಷ ಚೇತನ ಮಕ್ಕಳೊಂದಿಗೆ ಕೋಸ್ಟಲ್ ಫ್ರೆಂಡ್ಸ್ ಮಂಗಳೂರು ರವಿವಾರ ಆಯೋಜಿಸಿದ 3ನೇ ವರ್ಷದ ಸಾಂತ್ವನದ ಸಂಚಾರ ಕಾರ್ಯಕ್ರಮವು ಮಾನವೀಯತೆಯ ಸಂದೇಶಕ್ಕೆ ಸಾಕ್ಷಿಯಾಯಿತು.

ನಗರದ ಕುಂಟಿಕಾನದ ಹೊಟೇಲ್ ಬಿಎಂಎಸ್ ನಲ್ಲಿ ಸ್ಪೀಕರ್ ಯು.ಟಿ. ಖಾದರ್ ಸಾಂತ್ವನದ ಸಂಚಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಇದು ಮಾನವೀಯತೆಯನ್ನು ಸಾರುವ ಮತ್ತು ಪ್ರೀತಿಯನ್ನು ಹಂಚುವ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮದ ಮೂಲಕ ಕೋಸ್ಟಲ್ ಫ್ರೆಂಡ್ಸ್ ಸದಸ್ಯರು ಸಮಾಜದ ಕಣ್ಣು ತೆರೆಸುವ ಪ್ರಯತ್ನ ಮಾಡಿದ್ದಾರೆ. ಸಮಾಜಕ್ಕೆ ಒಳ್ಳೆಯ ಸಂದೇಶವನ್ನೂ ನೀಡಿದ್ದಾರೆ. ಇದು ಇತರ ಸಂಘಟನೆಗಳಿಗೆ ಮಾದರಿ ಕಾರ್ಯಕ್ರಮವಾಗಿದೆ ಎಂದರು.

ಹೆತ್ತವರ ಕನಸು ಮತ್ತು ಆಸೆಗಳನ್ನು ವಿಶೇಷ ಮಕ್ಕಳ ಶಿಕ್ಷಣ ಸಂಸ್ಥೆಗಳು ಪೂರೈಸುತ್ತಿದೆ. ವಿಶೇಷ ಮಕ್ಕಳಲ್ಲಿ ನವ ಚೈತನ್ಯ ಮೂಡಿಸಲು ಕೋಸ್ಟಲ್ಫ್ರೆಂಡ್ಸ್ ಸಂಸ್ಥೆಯು ವಿಶೇಷ ಮಕ್ಕಳ ಶಿಕ್ಷಣ ಸಂಸ್ಥೆಗಳ ಜೊತೆ ಕೈ ಜೋಡಿಸಿರುವುದು ಶ್ಲಾಘನೀಯ. ಮುಂದಿನ ವರ್ಷಗಳಲ್ಲಿ ಮತ್ತಷ್ಟು ವಿಭಿನ್ನವಾದ ಸಾಂತ್ವನದ ಸಂಚಾರ ಕಾರ್ಯಕ್ರಮಗಳು ನಡೆಯಲಿ ಎಂದು ಯು.ಟಿ.ಖಾದರ್ ಆಶಿಸಿದರು.

ಈ ಸಂದರ್ಭ ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ ಗಫೂರ್, ಸಿಎಫ್ಎಂ ಸ್ಥಾಪಕ ಸಿರಾಜ್ ಪರ್ಲಡ್ಕ, ಸಿಎಫ್ಎಂ ಅಧ್ಯಕ್ಷ ಷರೀಫ್ ಅಬ್ಬಾಸ್ ವಳಾಲು, ಪ್ರಧಾನ ಕಾರ್ಯದರ್ಶಿ ಶೌಕತ್ ಅಲಿ, ಕಾರ್ಯಕ್ರಮದ ಸಂಚಾಲಕ ಅಫ್ತಾಬ್ ಬಸ್ತಿಕಾರ್, ಮುನ್ನ ಕಮ್ಮರಡಿ, ಸಾನಿಧ್ಯ ಶಾಲೆಯ ಆಡಳಿತಾಧಿಕಾರಿ ವಸಂತ್ ಕುಮಾರ್, ಹಿದಾಯ ಶಾಲೆಯ ಶೇಖ್ ಝಹೀರ್, ಉದ್ಯಮಿ ಮರ್ಝೂಕ್, ನಗರ ಪಾಲಿಕೆಯ ಮಾಜಿ ಸದಸ್ಯ ಜಗದೀಶ್ ಶೆಟ್ಟಿ, ಚಿರಾಗ್ ಅರಿಗಾ, ಸಿರಾಜ್ ಮತ್ತಿತರರು ಉಪಸ್ಥಿತರಿದ್ದರು.

ಬೆಳಗ್ಗೆ ಉಪಹಾರದೊಂದಿಗೆ ಹುಲಿ ವೇಷ ಕುಣಿತ ಮತ್ತು ದಫ್ ವಿಶೇಷ ಮೆರಗು ನೀಡಿತು. ವಿಶೇಷ ಚೇತನ ಮಕ್ಕಳು ಹುಲಿ ನೃತ್ಯ ಮಾಡಿ ಸಂಭ್ರಮಿಸಿದರು. ಸುಮಾರು 100ರಷ್ಟು ವಿಶೇಷ ಚೇತನ ಮಕ್ಕಳು ಪಾಲ್ಗೊಂಡಿದ್ದ ಸಾಂತ್ವನದ ಸಂಚಾರದಲ್ಲಿ 50 ಮಂದಿ ಕೇರ್ಟೇಕರ್ಸ್ ಮತ್ತು 60 ಮಂದಿ ಕೋಸ್ಟಲ್ ಫ್ರೆಂಡ್ಸ್ ಸಂಸ್ಥೆಯ ಕಾರ್ಯಕರ್ತರು ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸಿದರು.

ಬಳಿಕ ಪಿಲಿಕುಳ ನಿಸರ್ಗಧಾಮದಲ್ಲಿ ಸಂಚರಿಸಿ ತಾರಾಯಣ ಮತ್ತು ಮೃಗಾಲಯ ವೀಕ್ಷಿಸಲಾಯಿತು. ನಂತರ ಜೆಪ್ಪುಪಾಲೇಮಾರ್ ಗಾರ್ಡನ್ ನಲ್ಲಿ ಸಂಚಾರ ಸಾಗಿತು. ಮದ್ಯಾಹ್ನದ ಊಟದ ಬಳಿಕ ಗಾರ್ಡನ್ ನಲ್ಲಿ ವಿವಿಧ ಮನರಂಜನಾ ಮತ್ತು ಸ್ಪರ್ಧಾ ಚಟುವಟಿಕೆಗಳಲ್ಲಿ ಭಾಗಿಯಾಗಿ ವಿಶೆಷ ಚೇತನ ಮಕ್ಕಳು ಸಂಭ್ರಮಿಸಿದರು. ಈ ಗಾರ್ಡನ್ ನಲ್ಲಿ ಮಕ್ಕಳಿಗೆ ಫಿಜಾ, ಪಾಪ್ಕಾರ್ನ್, ಟೀ ಪಾರ್ಟಿ, ಗೂಡಂಗಡಿ ತಿಂಡಿಯ ವ್ಯವಸ್ಥೆ ಕಲ್ಪಿಸಲಾಯಿತು. ಮಕ್ಕಳಿಗೆ ಅಗತ್ಯ ವಸ್ತುಗಳ ಕಿಟ್ ವಿತರಿಸಲಾಯಿತು. ಗಾರ್ಡನ್ನಲ್ಲಿ ವಿಶೇಷ ಚೇತನ ಮಕ್ಕಳು ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.

ಸಮಾರೋಪ ಕಾರ್ಯಕ್ರಮದಲ್ಲಿ ಪ್ರಮುಖರಾದ ನಾಸಿರ್ ಲಕ್ಕಿಸ್ಟಾರ್, ರಹೀಂ ಎಕ್ಸ್‌ಪರ್ಟೈಸ್, ಸೈದುದ್ದೀನ್ ಓಷಿಯನ್ ಸ್ಕೂಲ್, ಅರ್ಜುನ್ ಭಂಡಾರ್ಕರ್, ಇನ್‌ಸ್ಪೆಕ್ಟರ್ ಸಲೀಂ ಅಬ್ಬಾಸ್, ಸೈಫ್ ಸುಲ್ತಾನ್, ಎ.ಕೆ. ಕುಕ್ಕಿಲ, ಮಹಮ್ಮದಲಿ ಕಮ್ಮರಡಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News