ಪಣಂಬೂರು ಬೀಚ್‌ನಲ್ಲಿ ಗೂಂಡಾಗಿರಿ: ನಾಲ್ವರ ಬಂಧನ
ಮಂಗಳೂರು: ಪಣಂಬೂರು ಬೀಚ್‌ನಲ್ಲಿ ರವಿವಾರ ಯುವತಿ ಮತ್ತು ಯುವಕನ ಮೇಲೆ ಹಲ್ಲೆಗೆ ಯತ್ನಿಸಿದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಟ್ವಾಳ ಪಿಲಾತಬೆಟ್ಟುವಿನ ಪ್ರಶಾಂತ್ ಭಂಡಾರಿ (38 ), ಬೆಳ್ತಂಗಡಿ ಕರಾಯ ಗ್ರಾಮದ ಉಮೇಶ್. ಪಿ (23), ಬೆಳ್ತಂಗಡಿ ಪುತ್ತಿಲದ ಸುಧೀರ್ (26) ಮತ್ತು ಮಚ್ಚಿನ ಗ್ರಾಮದ ಕೀರ್ತನ್ ಪೂಜಾರಿ (20) ಬಂಧಿತ ಆರೋಪಿಗಳು.
ನೊಂದ ಯುವತಿ ನೀಡಿರುವ ದೂರಿನಂತೆ ಇವರ ವಿರುದ್ಧ ಪಣಂಬೂರು ಪೊಲೀಸ್ ಠಾಣೆಯಲ್ಲಿ 14/2024 ಕಲಂ:143,341,504 ಜೊತೆ 149 ಐಪಿಸಿ ರಂತೆ ಪ್ರಕರಣ ದಾಖಲಾಗಿದೆ.
ಬೆಂಗಳೂರಿನಲ್ಲಿ ಕೆಲಸದಲ್ಲಿರುವ 28 ಹರೆಯದ ಯುವತಿ ತನಗೆ ಪರಿಚಯವಿದ್ದ ಯವಕನಿಗೆ ಸಾಹಿತ್ಯ ಕ್ಷೇತ್ರದಲ್ಲಿ ಪ್ರಶಸ್ತಿ ದೊರೆತಿರುವುದರಿಂದ ಆತನನ್ನು ಅಭಿನಂದಿಸಲು ಫೆ.4ರಂದು ಸಂಜೆ 4:30ರ ಹೊತ್ತಿಗೆ ಪಣಂಬೂರು ಬೀಚಿಗೆ ಬಂದಿದ್ದರು ಎನ್ನಲಾಗಿದೆ. ಆಗ ಯುವಕರ ಗುಂಪು ಇವರನ್ನು ಅಡ್ಡಗಟ್ಟಿ , ಬೈದು, ಹಲ್ಲೆಗೆ ಯತ್ನಿಸಿದ್ದಾರೆ. ಅಲ್ಲದೆ ಕೆಲವರು ವಿಡಿಯೋ ಮಾಡಿ ಕಿರುಕುಳ ನೀಡಿದ್ದಾರೆ ಎನ್ನಲಾಗಿದೆ.
ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿ, ಯುವಕ ಮತ್ತು ಯುವತಿಯ ಮೇಲೆ ಗೂಂಡಾಗಿರಿಗೆ ಯತ್ನಿಸಿದ ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ .
ಬಂಧಿತ ಆರೋಪಿಗಳಿಗೆ ಸೂಕ್ತ ಕ್ರಮದ ಬಳಿಕ 41(ಎ) ರಂತೆ ನೋಟೀಸ್ ನೀಡಿ ವಿಚಾರಣೆಗೆ ಕರೆದಾಗ ಠಾಣೆಗೆ ಬರುವಂತೆ ಸೂಚಿಸಿ ಕಳುಹಿಸಿಕೊಡಲಾಯಿತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪಣಂಬೂರು ಬೀಚ್, ತಣ್ಣೀರುಬಾವಿ ಬೀಚ್ ಮತ್ತು ಟ್ರೀ ಪಾರ್ಕ್ ಗಳಿಗೆ ಪ್ರತಿ ನಿತ್ಯ ಹೆಚ್ಚುವರಿ ಸಿಬ್ಬಂದಿಗಳನ್ನು ನಿಯೋಜಿಸಿ ಇಂಥಹ ಘಟನೆಗಳು ಮರುಕಳಿಸದಂತೆ ತಡೆಯಲು ನಿಗಾ ವಹಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.