ಅಪೂರ್ಣಾವಸ್ಥೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆ ಧರ್ಮಶಾಸ್ತ್ರಕ್ಕೆ ಮಾಡುವ ಅಪಚಾರ: ಹಿಂದೂ ಮಹಾಸಭಾ
ಮಂಗಳೂರು, ಜ. 18: ಕೇಂದ್ರ ಸರಕಾರವು ಲೋಕಸಭೆ ಚುನಾವಣಾ ದೃಷ್ಟಿಯಿಂದ ಪ್ರಭು ಶ್ರೀರಾಮನ ಮಂದಿರವನ್ನು ಅಪೂರ್ಣವಸ್ಥೆಯಲ್ಲಿ ಉದ್ಘಾಟನೆ ಮಾಡುವುದು ಧರ್ಮಶಾಸಕ್ಕೆ ಮಾಡುವ ಅಪಚಾರ. ಶ್ರೀರಾಮನನ್ನು ಚುನಾವಣಾ ಸರಕನ್ನಾಗಿ ಮಾಡಿದ್ದೆ ಆದಲ್ಲಿ ಭಾರತೀಯ ಜನತಾ ಪಕ್ಷದ ನೇತೃತ್ವದ ಕೇಂದ್ರ ಸರಕಾರಕ್ಕೆ ಪ್ರಭು ಶ್ರೀರಾಮನ ಶಾಪ ತಗಲುಲಿದೆ ಎಂದು ಹಿಂದೂ ಮಹಾಸಭಾ ಕರ್ನಾಟಕದ ಸಂಸ್ಥಾಪಕ ರಾಜೇಶ್ ಪವಿತ್ರನ್ ಹೇಳಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರದ ಈ ನಡೆಯನ್ನು ಹಿಂದೂ ಮಹಾಸಭಾ ಖಂಡಿಸುತ್ತದೆ. ಹಿಂದೂ ಮಹಾಸಭಾ ಶ್ರೀರಾಮನ ವಿಚಾರವನ್ನು ಎಂದಿಗೂ ರಾಜಕೀಯವಾಗಿ ಬಳಸಿಕೊಂಡಿಲ್ಲ. ಅಯೋಧ್ಯೆಯಲ್ಲಿ ಶ್ರೀ ರಾಮಚಂದ್ರರ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ಮೂಲ ವಕಾಲತ್ತುದಾರರಾದ ಹಿಂದೂ ಮಹಾಸಭಾ ಹಾಗೂ ನಿರ್ಮೂಯಿ ಅಖಾಡಕ್ಕೆ ಆಮಂತ್ರಣ ನೀಡದಿರುವುದು ಕೇಂದ್ರ ಸರಕಾರದ ಸ್ವಾರ್ಥದ ರಾಜಕಾರಣಕ್ಕೆ ಸಾಕ್ಷಿಯಾಗಿದೆ ಎಂದರು.
ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣಪ್ರತಿಷ್ಠೆ ಕಾರ್ಯಕ್ರಮವನ್ನು ಸಂಭ್ರಮಿಸುವ ಸಲುವಾಗಿ ಜ.22ರಂದು ಮಂಗಳೂರಿನ ಪಿವಿಎಸ್ ವೃತ್ತದ ಬಳಿ ಇರುವ ಲಕ್ಷ್ಮೀ ನಾರಾಯಣ ದೇವಸ್ಥಾನದ ವಠಾರದಲ್ಲಿ ರಾಮ ಮಹೋತ್ಸವವನ್ನು ಆಚರಿಸಲಾಗುವುದು. ಮಂದಿರದ ಪುನರ್ ನಿರ್ಮಾಣಕ್ಕೆ ತ್ಯಾಗ ಬಲಿದಾನ ಮಾಡಿದವರನ್ನು ನೆನಪು ಮಾಡುವ ದೃಷ್ಟಿಯಿಂದ ಕರಸೇವಕರನ್ನು ಗೌರವಿಸಿ, ಸಮ್ಮಾನಿಸುವ ಕಾರ್ಯಕ್ರಮ ಕೂಡ ನಡೆಯಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಹಿಂದೂ ಮಹಾಸಭಾ ಕರ್ನಾಟಕದ ರಾಜ್ಯಾಧ್ಯಕ್ಷ ಡಾ.ಎಲ್.ಕೆ. ಸುವರ್ಣ, ರಾಜ್ಯ ಖಜಾಂಚಿ ಲೋಕೇಶ್ ಉಳ್ಳಾಲ್, ಸಂಘಟನೆಯ ಪ್ರಮುಖರಾದ ಇಮಾಂಶು ಶರ್ಮ, ಪ್ರವೀಣ್ ಚಂದ್ರರಾವ್ ಉಪಸ್ಥಿತರಿದ್ದರು.