ಕೊಣಾಜೆ | ಮುದುಂಗಾರುಕಟ್ಟೆ ಬಸ್ ನಿಲ್ದಾಣದಲ್ಲಿ ಯುವಕನ ಮೃತದೇಹ ಪತ್ತೆ
Update: 2025-10-14 16:01 IST
ಕೊಣಾಜೆ : ಬಾಳೆಪುಣಿ ಗ್ರಾಮದ ಮುದುಂಗಾರುಕಟ್ಟೆ ಎಂಬಲ್ಲಿ ಮಂಗಳವಾರ ಮಧ್ಯಾಹ್ನ ಯುವಕನೊರ್ವನ ಮೃತದೇಹ ಪತ್ತೆಯಾಗಿದೆ.
ಮೃತ ಯುವಕನನ್ನು ಮುದುಂಗಾರುಕಟ್ಟೆಯ ಸಮೀಪದ ಪಾತೂರಿನ ಮುಹಮ್ಮದ್ ನಿಯಾಫ್ ( 28) ಎಂದು ಗುರುತಿಸಲಾಗಿದೆ.
ಮಂಗಳವಾರ ಮಧ್ಯಾಹ್ನ ವ್ಯಕ್ತಿಯೊಬ್ಬರು ದ್ವಿಚಕ್ರವಾಹನವನ್ನು ನಿರ್ಜನ ಪ್ರದೇಶದ ಬಸ್ ನಿಲ್ದಾಣದ ಬಳಿ ಇಡಲು ಹೋದಾಗ ಮೃತದೇಹ ಪತ್ತೆಯಾಗಿದ್ದು, ನಿಯಾಫ್ ಬಾವಿಯ ರಿಂಗ್ ತಯಾರಿಕೆ ಹಾಗೂ ಇತರ ಕೂಲಿ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದ ಎನ್ನಲಾಗಿದೆ.
ಸಾವಿಗೆ ಕಾರಣ ಇನ್ನಷ್ಟೇ ತಿಳಿದು ಬರಬೇಕಿದೆ. ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.