×
Ad

ವಕೀಲರ ತಂಡದಿಂದ ಎಸ್ಪಿ ಕಚೇರಿ ಭೇಟಿ: ಎಸ್ಪಿ ಅನುಪಸ್ಥಿತಿ; ನಿಯೋಗ ವಾಪಸ್

Update: 2025-06-27 14:27 IST

ಮಂಗಳೂರು, ಜೂ. 27: ಬೆಂಗಳೂರಿನ ವಕೀಲರಾದ ಓಜಸ್ವಿ ಗೌಡ ಮತ್ತು ಸಚಿನ್ ಎಸ್. ದೇಶಪಾಂಡೆ ಅವರನ್ನೊಳಗೊಂಡ ನ್ಯಾಯವಾದಿಗಳ ನಿಯೋಗವು ಶುಕ್ರವಾರ ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಭೇಟಿ ನೀಡಿದೆ. ಈ ಸಂದರ್ಭ ಎಸ್ಪಿಯವರು ಕಚೇರಿಯಲ್ಲಿ ಇಲ್ಲದ ಕಾರಣ ನಿಯೋಗ ಹಿಂದಿರುಗಿದೆ.

ಕಾರ್ಯಕ್ರಮವೊಂದರ ನಿಮಿತ್ತ ಎಸ್ಪಿ ಡಾ. ಅರುಣ್ ಕುಮಾರ್ ರವರು ಬೆಂಗಳೂರಿಗೆ ತೆರಳಿದ್ದ ಕಾರಣ, ನ್ಯಾಯವಾದಿಗಳ ನಿಯೋಗ ಎಸ್ಪಿ ಕಚೇರಿಯಿಂದ ಹಿಂದಿರುಗಿದೆ.

ದ.ಕ. ಜಿಲ್ಲೆಯ ಬೆಳ್ತಂಗಡಿಯಲ್ಲಿ ಈ ಹಿಂದಿನ ಪ್ರಮುಖ ಪ್ರಕರಣಗಳ ಕುರಿತಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಜತೆ ಚರ್ಚಿಸುವ ಸಲುವಾಗಿ ನ್ಯಾಯವಾದಿಗಳ ನಿಯೋಗ ಮಧ್ಯಾಹ್ನ 12ಕ್ಕೆ ಎಸ್ಪಿ ಕಚೇರಿಗೆ ಭೇಟಿ ನೀಡುತ್ತಿರುವುದಾಗಿ ವಕೀಲರಾದ ಓಜಸ್ವಿ ಗೌಡ ಮತ್ತು ಸಚಿನ್ ದೇಶಪಾಂಡೆಯವರು ಪ್ರಕಟನೆಯಲ್ಲಿ ತಿಳಿಸಿದ್ದರು.

ಅದರಂತೆ ನಿಯೋಗ ಭೇಟಿಯ ವೇಳೆ ಎಸ್ಪಿ ಕಚೇರಿಯಲ್ಲಿ ಉಪಸ್ಥಿತರಿದ್ದ ಪತ್ರಕರ್ತರು ಮಾತನಾಡಿಸಲೆತ್ನಿಸಿದಾಗ, ‘ಎಸ್ಪಿಯವರಿಗೆ ಧರ್ಮಸ್ಥಳ ಗ್ರಾಮದಲ್ಲಿ ನಡೆದಿರುವ ಕೆಲ ಪ್ರಕರಣಗಳ ಬಗ್ಗೆ ಮಾಹಿತಿ ನೀಡಲು ಬಂದಿದ್ದೆವು. ನಾವು ಈಗಾಗಲೇ ಹೇಳಿಕೊಂಡಿರುವ ವಿಚಾರ ಸತ್ಯಾಂಶದಿಂದ ಕೂಡಿದೆ. ಆ ಮಾಹಿತಿಯನ್ನು ಎಸ್ಪಿಯವರಿಗೆ ನೀಡಲು ಬಂದಿದ್ದೆವು. ಅವರು ಇವತ್ತು ಕಚೇರಿಯಲ್ಲಿ ಇಲ್ಲ ಎಂಬ ವಿಚಾರ ಬಂದ ಮೇಲೆ ತಿಳಿಯಿತು. ಅವರನ್ನು ಭೇಟಿಯಾಗಿ ಅವರಲ್ಲೇ ವಿಷಯ ಹೇಳಬೇಕು’ ಎಂದು ನಿಯೋಗದ ಪ್ರಮುಖರಾದ ನ್ಯಾಯವಾದಿ ಓಜಸ್ವಿ ಗೌಡ ತಿಳಿಸಿದರು.

ಕೆಲ ದಿನಗಳ ಹಿಂದೆ ಧರ್ಮಸ್ಥಳ ಗ್ರಾಮದಲ್ಲಿ ನಡೆದಿರುವ ಹಲವು ಅಪರಾಧ ಪ್ರಕರಣಗಳ ಬಗ್ಗೆ ವ್ಯಕ್ತಿಯೊಬ್ಬ ಧರ್ಮಸ್ಥಳ ಠಾಣೆಗೆ ಬಂದು ಮಾಹಿತಿ ನೀಡುವುದಾಗಿ ತಮ್ಮಲ್ಲಿ ಹೇಳಿರುವುದಾಗಿ ಬೆಂಗಳೂರಿನ ವಕೀಲರಾದ ಓಜಸ್ವಿ ಗೌಡ ಮತ್ತು ಸಚಿನ್ ಎಸ್. ದೇಶಪಾಂಡೆ ಹೆಸರಿನಲ್ಲಿರುವ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News