ಮಂಗಳೂರು: ಪೊಲೀಸರ ನಿಂದನೆ ಆರೋಪ ಪ್ರಕರಣ; ಆರೋಪಿಗಳನ್ನು ದೋಷಮುಕ್ತಗೊಳಿಸಿದ ನ್ಯಾಯಾಲಯ
Update: 2024-02-14 12:37 IST
Photo: freepik
ಮಂಗಳೂರು: ನಗರದ ಹೊರ ವಲಯದ ಅಡ್ಯಾರ್ ಕಣ್ಣೂರಿನಲ್ಲಿ 4 ವರ್ಷಗಳ ಹಿಂದೆ ನಡೆದ ಎನ್‌ಆರ್‌ಸಿ, ಸಿಎಎ ಪ್ರತಿಭಟನೆ ವೇಳೆ ಬಸ್ಸೊಂದರ ಮೇಲೆ ಕುಳಿತು ರಾಷ್ಟ್ರೀಯ, ರಾಜ್ಯ ನಾಯಕರ ವಿರುದ್ಧ, ಪೊಲೀಸರ ವಿರುದ್ಧ ಘೋಷಣೆಗಳನ್ನು ಕೂಗಿದ ಆರೋಪ ಪ್ರಕರಣದ ಆರೋಪಿಗಳನ್ನು ಮಂಗಳೂರಿನ ಏಳನೇ ಜೆಎಂಎಫ್ ಸಿ ನ್ಯಾಯಾಲಯ ದೋಷಮುಕ್ತಗೊಳಿಸಿ ತೀರ್ಪು ನೀಡಿದೆ.
ಆರೋಪಿಗಳಾದ ಉಸ್ಮಾನ್ ಮತ್ತು ಸಿರಾಜ್ ಎಂಬವರ ವಿರುದ್ಧ ಕಂಕನಾಡಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಇದರ ತನಿಖೆ ಕೈಗೊಂಡ ಮಂಗಳೂರಿನ ಏಳನೇ ಜೆಎಂಎಫ್‌ಸಿ ನ್ಯಾಯಾಲಯ, ಆರೋಪಿಗಳ ವಿರುದ್ಧ ದೋಷಾರೋಪವನ್ನು ಸಾಬೀತುಪಡಿಸಲು ಪ್ರಾಸಿಕ್ಯೂಶನ್ ವಿಫಲವಾಗಿದೆ ಎಂದು ಹೇಳಿ ದೋಷ ಮುಕ್ತಗೊಳಿಸಿ ತೀರ್ಪು ನೀಡಿದೆ.
ಆರೋಪಿಗಳ ಪರ ಮಂಗಳೂರಿನ ಲೆಕ್ಸ್ ಜೂರಿಸ್ ಲಾ ಚೇಂಬರ್‌ನ ವಕೀಲರಾದ ಉಮರ್ ಫಾರೂಕ್ ಮುಲ್ಕಿ, ಐ.ಎಂ.ಇಜಾಝ್ ಅಹ್ಮದ್ ಉಳ್ಳಾಲ, ಹೈದರಲಿ ಕಿನ್ನಿಗೋಳಿ, ತೌಸಿಫ್ ಸಚ್ಚರಿಪೇಟೆ ವಾದಿಸಿದ್ದರು.