ಸಿಲಿಕಾನ್ ಬೀಚ್ ಸಿಟಿಯಾಗಿ ಮಂಗಳೂರು ಅಭಿವೃದ್ಧಿ; ಪೂರಕ ವ್ಯವಸ್ಥೆಗೆ ಅಗತ್ಯ ಕ್ರಮ: ಸಚಿವ ಪ್ರಿಯಾಂಕ್ ಖರ್ಗೆ
ಮಂಗಳೂರು: ಕರ್ನಾಟಕದ ಒಟ್ಟು ಜಿಡಿಪಿಯಲ್ಲಿ ಶೇ. 40ರಷ್ಟು ಪಾಲು ಬೆಂಗಳೂರಿನದ್ದಾಗಿದ್ದರೆ, ಮುಂದಿನ ಸ್ಥಾನ ಮಂಗಳೂರಿನದ್ದಾಗಿದೆ. ಸದ್ಯ ಮಂಗಳೂರಿನ ಜಿಡಿಪಿ ಪಾಲು ಶೇ. 5.4ರಷ್ಟಿದೆ. ಇಲ್ಲಿ ನವೋದ್ಯಮ ಪೂರಕ ಆರ್ಥಿಕ ಚಟುವಟಿಕೆಗಳಿಗೆ ಅಧಿಕ ಸಾಮರ್ಥ್ಯವಿದ್ದು, ಮಂಗಳೂರನ್ನು ಸಿಲಿಕಾನ್ ಬೀಚ್ ಸಿಟಿಯಾಗಿ ಮಾರ್ಪಡಿಸುವಲ್ಲಿ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಕ್ರಮ ವಹಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಐಟಿ -ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಜಿಲ್ಲಾ ಪಂಚಾಯತ್‌ನ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು.
ರಾಜ್ಯದ ಜಿಡಿಪಿಯಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನದಲ್ಲಿರುವ ಎರಡು ನಗರಗಳ ಅಂತರ ಸಾಕಷ್ಟಿದೆ. ಇನ್ನು ಕಲಬುರ್ಗಿಯಲ್ಲಿ ಜಿಡಿಪಿ ಪ್ರಮಾಣ ಶೇ.1.9ರಷ್ಟಿದೆ. ಸದ್ಯ ಐಟಿ- ಬಿಟಿ ಕಂಪನಿಗಳು ಬೆಂಗಳೂರು ಕೇಂದ್ರೀಕೃತ ವಾಗಿದ್ದು, ಅದರಿಂದ ಹೊರಗೆ ಖಾಸಗಿ ಸಂಸ್ಥೆಗಳ ಬಂಡವಾಳ ಹೂಡಿಕೆಗೆ ಉತ್ತೇಜನ ನೀಡಿ ನವೋದ್ಯಮ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಕಲಬುರ್ಗಿಯಲ್ಲಿ ಕೃಷಿ ತಂತ್ರಜ್ಞಾನಕ್ಕೆ ಒತ್ತು ನೀಡಿದರೆ, ಮಂಗಳೂರು ಕ್ಲಸ್ಟರ್‌ನಲ್ಲಿ ಸಾಗರೋದ್ಯಮಕ್ಕೆ ಉತ್ತೇಜನಕ್ಕೆ ಒತ್ತು ನೀಡುವ ಮೂಲಕ ಸ್ಥಳೀಯ ಆರ್ಥಿಕತೆಗೆ ಪೂರಕವಾದ ಚಟುವಟಿಕೆಗಳನ್ನು ಪ್ರೋತ್ಸಾಹಿಸಲಾಗುವುದು ಎಂದವರು ಹೇಳಿದರು.
ರಾಜ್ಯದಲ್ಲಿ ಮಾಹಿತಿ ತಂತ್ರಜ್ಞಾನದಡಿ ಇಂತಹ ನವೋದ್ಯಮಗಳಿಗೆ ಪೂರಕವಾಗಿ ರಾಜ್ಯದ ಆರು ಕ್ಲಸ್ಟರ್‌ಗಳಿಗೆ ಸಂಶೋಧನೆ ಮತ್ತು ಸ್ಟಾರ್ಟ್ ಅಪ್ ಒಳಗೊಂಡ ಯೋಜನೆಗಳಿಗೆ 1000 ಕೋಟಿ ರೂ. ಘೋಷಿಸಲಾಗಿದೆ. ಮಂಗಳೂರು- ಉಡುಪಿ- ಮಣಿಪಾಲವನ್ನು ಒಳಗೊಂಡ ಒಂದು ಕ್ಲಸ್ಟರ್ ಸೇರಿದಂತೆ ರಾಜ್ಯದ ಒಟ್ಟು ಆರು ಕ್ಲಸ್ಟರ್‌ಗಳಲ್ಲಿ ಈ ಯೋಜನೆ ಜಾರಿಗೊಳ್ಳಲಿದ್ದು, ಈಗಾಗಲೇ 250 ಕೋಟಿ ರೂ. ಬಿಡುಗಡೆಯಾಗಿದೆ. ಮುಂದಿನ ತಿಂಗಳು ಇಲ್ಲಿನ ಶಿಕ್ಷಣ ಹಾಗೂ ಕೈಗಾರಿಕಾ ಉದ್ಯಮಿಗಳು ಸಮಾಲೋಚನೆ ನಡೆಸಿ ಸ್ಥಳೀಯ ಅಗತ್ಯತೆಗಳ ಬಗ್ಗೆ ಪಟ್ಟಿ ಒದಗಿಸಿದರೆ, ಸರಕಾರದಿಂದ ಮಾಡಲಾಗುವ ಕ್ರಮಗಳ ಬಗ್ಗೆ ತಿಳಿಸಲಾಗುವುದು ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಸಮುದ್ರ ಜೀವಿ, ಜಲಚರ ಸಾಕಾಣಿಕೆಗೆ ಪೂರಕವಾದ ಸಮಸ್ಯೆಗಳನ್ನು ಇಲ್ಲಿನ ನವೋದ್ಯಮಗಳ ಮುಂದಿರಿಸಿ ಮುಂದಿರಿಸಿ ಅವುಗಳಿಗೆ ಪರಿಹಾರ ಕಂಡುಕೊಳ್ಳುವ ಕಂಪನಿಗಳಿಗೆ ಪ್ರೋತ್ಸಾಹ ನೀಡುವ ಯೋಜನೆಯನ್ನೂ ಸರಕಾರ ಹಮ್ಮಿಕೊಂಡಿದೆ. ಈ ಭಾಗದಲ್ಲಿ ಕಳೆದ ವರ್ಷ 3500 ಕೋಟಿ ರೂ.ಗಳ ಐಟಿ ಸೇವೆಗಳ ರಫ್ತು ನಡೆದಿದೆ. ಇದನ್ನು ದ್ವಿಗುಣಗೊಳಿಸುವ ಆಲೋಚನೆ ಇದೆ. ಇಲ್ಲಿನ ಮಾನವ ಸಂಪನ್ಮೂಲವನ್ನು ಇಲ್ಲೇ ಉಳಿಸುವ ನಿಟ್ಟಿನಲ್ಲಿ ಪೂರಕವಾದ ನವೋದ್ಯಮಗಳಿಗೆ ಪ್ರೋತ್ಸಾಹ ನೀಡಲಾಗುವುದು. ರಾಜ್ಯದ 400 ನವೋದ್ಯಮಗಳ ಪೈಕಿ 81 ಮಂಗಳೂರು -ಉಡುಪಿ- ಮಣಿಪಾಲ ಭಾಗದಲ್ಲಿವೆ. ಅವುಗಳಲ್ಲಿ 30 ನವೋದ್ಯಮಗಳು ಮಹಿಳಾ ಕೇಂದ್ರೀಕೃತ ಸ್ಟಾರ್ಟ್‌ಅಪ್‌ಗಳು ಎಂದವರು ಹೇಳಿದರು.
ಜಿ.ಪಂ. ಸಿಇಒ ನರ್ವಾಡೆ ವಿನಾಯಕ್ ಕರ್ಬಾರಿ, ಸಚಿವರ ಆಪ್ತ ಕಾರ್ಯದರ್ಶಿ ಭಿಮಾಶಂಕರ್ ಉಪಸ್ಥಿತರಿದ್ದರು.
ಅಮೆರಿಕದಲ್ಲಿ ತೆರಿಗೆ ನೀತಿಯಿಂದ ವಾಪಾಸುವ ಸ್ಥಳೀಯರಿಗೆ ಅವಕಾಶ ಕಲ್ಪಿಸಲಾಗುವುದೇ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ಪ್ರಿಯಾಂಕ್ ಖರ್ಗೆ, ಅಮೆರಿಕ ರಾಷ್ಟ್ರ ನೀತಿ ನಮ್ಮ ಹಿಡಿತದಲ್ಲಿಲ್ಲ. ನಮ್ಮ ಪ್ರಧಾನ ಮಂತ್ರಿ ಈ ನಿಟ್ಟಿನಲ್ಲಿ ಏನು ಮಾಡುತ್ತಿದ್ದಾರೆ. ಆಪ್ತ ಸ್ನೇಹಿತರು, ಆಪ್ತ ಮಿತ್ರ ನಮಸ್ತೇ ಟ್ರಂಪ್ ಎಂದು ಹೇಳಿ ಕಾರ್ಯಕ್ರಮ ಮಾಡಿ ಅಬ್ ಕಿ ಬಾರ್ ಟ್ರಂಪ್ ಸರಾರ ಎಂದು ಘೋಷಣೆ ಮಾಡಿದ್ದರು. ಈಗ ಶೇ. 50ರಷ್ಟು ತೆರಿಗೆ ನಮ್ಮವರ ಮೇಲೆ ಬಿದ್ದಿದೆ. ಹೊರ ಗುತ್ತಿಗೆ ಮೇಲೂ ತೆರಿಗೆ ಹಾಕಲು ಎಚ್1ಬಿ ವಿಸಾಕ್ಕೂ ತೆರಿಗೆಯನ್ನು ಅನ್ವಯ ಮಾಡಲು ಹೊರಟಿದ್ದಾರೆ. ಅವರ ದೇಶಕ್ಕೆ ಒಳ್ಳೆಯದಾಗುವ ಕ್ರಮ ಅವರು ಕೈಗೊಳ್ಳುತ್ತಿದ್ದಾರೆ. ನಮ್ಮ ಪ್ರಧಾನಿ ಏನು ಮಾಡುತ್ತಿದ್ದಾರೆ. ಚೀನಾದಂತಹ ರಾಷ್ಟ್ರಗಳು ಮರಳಿ ಬರುವವರಿಗೆ ಹೇಗೆ ಉದ್ಯೋಗ ಕಲ್ಪಿಸಬೇಕು. ಸಂಶೋಧನೆಯನ್ನು ಹೇಗೆ ಬಳಸಬೇಕು ಎಂಬ ಬಗ್ಗೆ ಕಾರ್ಯಕ್ರಮ ರೂಪಿಸಿವೆ. ಇಲ್ಲಿ ಕೇಂದ್ರ ಸರಕಾರಕ್ಕೆ ಸಲಹೆ ನೀಡಿದರೂ ತೆಗೆದುಕೊಳ್ಳುವವರಿಲ್ಲ. ಸ್ಥಳೀಯ ಆರ್ಥಿಕ ನವೋದ್ಯಮಗಳಿಗೆ ಬೇರೆ ರಾಜ್ಯಗಳಿಗಿಂತ ರಾಜ್ಯದ ವಾತಾವರಣ ಉತ್ತಮವಾಗಿದೆ. ಕೇಂದ್ರ ಸರಕಾರವೂ ನೆರವು ಒದಗಿಸಬೇಕು ಎಂದವರು ಹೇಳಿದರು.