×
Ad

ಮಂಗಳೂರು | ಹಾಜಿ ಕಾರ್ಕಳ ಶೇಖ್ ಸಾಬು ಸಾಹೇಬ್ ಮೆಮೋರಿಯಲ್ ಟ್ರಸ್ಟ್‌ನಿಂದ ಸಾಮೂಹಿಕ ವಿವಾಹ

Update: 2025-02-09 13:01 IST

ಮಂಗಳೂರು : ಹಾಜಿ ಕಾರ್ಕಳ ಶೇಖ್ ಸಾಬು ಸಾಹೇಬ್ ಮೆಮೋರಿಯಲ್ ಟ್ರಸ್ಟ್ (ರಿ) ಬರ್ಕೆ ಮಂಗಳೂರು ಇದರ ವತಿಯಿಂದ 9 ಜೋಡಿಗಳ ವಿವಾಹವು ನಗರದ ಬೋಳಾರ ಶಾದಿ ಮಹಲ್‌ನಲ್ಲಿ ರವಿವಾರ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್‌ನ ಅಧ್ಯಕ್ಷ, ಮಾಜಿ ವಿಧಾನ ಪರಿಷತ್ ಸದಸ್ಯ, ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಆಯೋಗದ ಮಾಜಿ ಅಧ್ಯಕ್ಷ ಅಲ್ಹಾಜ್ ಕೆ.ಎಸ್. ಮುಹಮ್ಮದ್ ಮಸೂದ್ ಮಾತನಾಡಿ, ಇದು ನನ್ನ ಸಹೋದರ, ಉದ್ಯಮಿ, ದುಬೈಯ ನ್ಯಾಶ್ ಗ್ರೂಫ್ ಆಫ್ ಕಂಪನಿಯ ಚೆಯರ್‌ಮನ್ ಅಲ್ಹಾಜ್ ಕೆ.ಎಸ್. ನಿಸಾರ್ ಅಹ್ಮದ್ ಕಾರ್ಕಳ ಅವರ ವಿಶೇಷ ಮುತುವರ್ಜಿಯಿಂದ ನಡೆಯುವ ಮದುವೆಯ ಕಾರ್ಯಕ್ರಮವಾಗಿದೆ. ಕಾರಣಾಂತರದಿಂದ ಅವರಿಗೆ ಇಂದು ಈ ಶುಭ ಸಂದರ್ಭದಲ್ಲಿ ಹಾಜರಾಗಲು ಸಾಧ್ಯವಾಗಲಿಲ್ಲ. ಅವರು ನವ ದಂಪತಿಗಳಿಗೆ ವಿಶೇಷವಾಗಿ ಶುಭ ಹಾರೈಸಿದ್ದಾರೆ. ಎಲ್ಲಾ ನವ ವಧುವರರಿಗೆ ಟ್ರಸ್ಟ್ ಹಾಗೂ ವೈಯಕ್ತಿಕವಾಗಿ ತಾನು ಶುಭಕೋರುವೆ ಎಂದರು.

ದ.ಕ. ಜಿಲ್ಲಾ ಖಾಝಿ ಅಲ್ಹಾಜ್ ತ್ವಾಖ ಅಹ್ಮದ್ ಮುಸ್ಲಿಯಾರ್ ಹಾಗೂ ಕುದ್ರೋಳಿ ಜಾಮಿಯಾ ಮಸೀದಿಯ ಖಾಝಿ ಮೌಲಾನಾ ಶೇಖ್ ಮುತ್ತಹರ್ ಹುಸೇನ್ ಕಾಸ್ಮಿ ನಿಖಾಹ್‌ನ ನೇತೃತ್ವ ವಹಿಸಿದ್ದರು.

ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಯೆನೆಪೋಯ ವಿವಿಯ ಕುಲಾಧಿಪತಿ ಹಾಜಿ ಯೆನೆಪೋಯ ಅಬ್ದುಲ್ಲಾ ಕುಂಞಿ, ತನ್ನ ತಂದೆಯ ಹೆಸರಿನಲ್ಲಿ ಹಾಜಿ ಮುಹಮ್ಮದ್ ಮಸೂದ್ ಅವರ ನೇತೃತ್ವದಲ್ಲಿ ನಡೆಯುವ ಈ ಸರಳ ವಿವಾಹ ಕಾರ್ಯಕ್ರಮವು ಸಮುದಾಯಕ್ಕೆ ನೀಡುವ ಬಹುದೊಡ್ಡ ಸೇವೆಯಾಗಿದೆ. ಸಮುದಾಯದ ಇತರ ಸಂಘಟನೆಗಳಿಗೆ ಇದು ಮಾದರಿಯಾಗಿದೆ. ಇಂದಿಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಒಂಭತ್ತು ನವ ಜೋಡಿಯ ಬದುಕು ಹಸನಾಗಲಿ ಎಂದು ಹಾರೈಸಿದರು.

ವೇದಿಕೆಯಲ್ಲಿ ಟ್ರಸ್ಟಿಗಳಾದ ಹಾಜಿ ಕೆ.ಎಸ್. ಫಝಲುರ್ರಹ್ಮಾನ್, ಮುಹಮ್ಮದ್ ಆಸಿಫ್ ಮಸೂದ್, ಮುಡಾ ಮಾಜಿ ಅಧ್ಯಕ್ಷ ಹಾಜಿ ಇಬ್ರಾಹಿಂ ಕೋಡಿಜಾಲ್, ಶಾದಿಮಹಲ್ ಅಧ್ಯಕ್ಷ ಮಕ್ಬೂಲ್ ಅಹ್ಮದ್, ಮಾಜಿ ಮೇಯರ್ ಕೆ. ಅಶ್ರಫ್, ಸಿ.ಮಹ್ಮೂದ್ ಹಾಜಿ, ಶಾಹುಲ್ ಹಮೀದ್ ತಂಳ್, ಡಿ.ಎಂ. ಅಸ್ಲಂ, ರಿಯಾಝ್ ಫೈಝಿ ಮತ್ತಿತರರು ಉಪಸ್ಥಿತರಿದ್ದರು.

ಟ್ರಸ್ಟಿ ಹಾಜಿ ಕೆ.ಎಸ್. ಇಮ್ತಿಯಾಝ್ ಅಹ್ಮದ್ ಕಾರ್ಕಳ ಟ್ರಸ್ಟ್‌ನ ಧ್ಯೇಯ ಉದ್ದೇಶಗಳ ಬಗ್ಗೆ ಮಾಹಿತಿ ನೀಡಿದರು. ಟ್ರಸ್ಟಿನ ಪ್ರಧಾನ ಕಾರ್ಯದರ್ಶಿ ಡಾ. ಮುಹಮ್ಮದ್ ಆರೀಫ್ ಮಸೂದ್ ಸ್ವಾಗತಿಸಿದರು. ಮೌಲಾನ ಝುಬೇರ್ ಕಿರಾಅತ್ ಪಠಿಸಿದರು. ಮುಸ್ಲಿಂ ಸೆಂಟ್ರಲ್ ಕಮಿಟಿಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹನೀಫ್ ಮಂಗಳೂರು ಕಾರ್ಯಕ್ರಮ ನಿರೂಪಿಸಿದರು.

ಮಂಗಳೂರು ತಾಲೂಕಿನ ಬಜಾಲ್‌ನ ಜೆ.ಮುಹಮ್ಮದ್ ಶರೀಫ್‌ರ ಪುತ್ರ ಶಾಹಿದ್ ಮತ್ತು ಜೋಕಟ್ಟೆಯ ಸೈಯದ್‌ರ ಪುತ್ರಿ ಫಾತಿಮತ್ ಫರ್ಝಾನ, ಕಾರ್ಕಳದ ಸೈಯದ್ ಖಲೀಲ್ ಅಹ್ಮದ್‌ರ ಪುತ್ರ ಸೈಯದ್ ಅನ್ವರ್ ಅಹ್ಮದ್ ಮತ್ತು ಗೋವಾದ ಮರ್ಹೂಂ ಖುತುಬುದ್ದೀನ್‌ರ ಪುತ್ರಿ ಮಲ್ಲಿಕ, ಹಳೆಯಂಗಡಿ ಇಂದಿರಾ ನಗರದ ಮೆಹಬೂಬ್ ಸಾಹೇಬ್‌ರ ಪುತ್ರ ಮುಹಮ್ಮದ್ ಸುಹೆಲ್ ಮತ್ತು ಮುಲ್ಕಿ ಕಾರ್ನಾಡಿನ ಮರ್ಹೂಂ ಅಬ್ದುಲ್ ರಹ್ಮಾನ್‌ರ ಪುತ್ರಿ ಶಮೀರಾ ಬಾನು, ಬೆಳ್ತಂಗಡಿ ತಾಲೂಕಿನ ಕುಕ್ಕೇಡಿಯ ಆದಂರ ಪುತ್ರ ಅಬ್ದುಲ್ ನಾಸಿರ್ ಮತ್ತು ಮೂಲರಪಟ್ಣದ ಆರ್ಲ ಅರಳದ ಹೈದರ್‌ರ ಪುತ್ರಿ ಸುಮಯ್ಯ, ಬೆಳ್ತಂಗಡಿ ತಾಲೂಕಿನ ಮುಹಮ್ಮದ್ ಶರೀಫ್‌ರ ಪುತ್ರ ಮುಹಮ್ಮದ್ ಇಕ್ಬಾಲ್ ಮತ್ತು ಬೆಳ್ತಂಗಡಿ ತಾಲೂಕಿನ ಯಾಕೂಬ್‌ರ ಪುತ್ರಿ ರಮೀಝಾ ಬಾನು, ಚಿಕ್ಕಮಗಳೂರಿನ ಇಂದಾವರದ ಅಸ್ಲಂ ಪಾಷಾರ ಪುತ್ರ ಮುಹಮ್ಮದ್ ಶರೀಫ್ ಮತ್ತು ಬಂಟ್ವಾಳ ತಾಲೂಕಿನ ಬಡಗ ಕಜೆಕಾರುವಿನ ಮರ್ಹೂಂ ಮುಹಮ್ಮದ್ ಇಕ್ಬಾಲ್‌ರ ಪುತ್ರಿ ಹಾಜಿರಾ ಬೀಬಿ, ಬೆಳ್ತಂಗಡಿ ತಾಲೂಕಿನ ಪಡಂಗಡಿಯ ಇಬ್ರಾಹೀಂ ಬ್ಯಾರಿಯ ಪುತ್ರ ಮುಹಮ್ಮದ್ ಆಸೀಫ್ ಮತ್ತು ಪಟ್ರಮೆಯ ಅಝೀದ್‌ರ ಪುತ್ರಿ ಅಸ್‌ಮಿನಾ, ಕೇರಳ ಕಣ್ಣೂರಿನ ಹಂಝ ಪಿ.ಕೆ. ಅವರ ಪುತ್ರ ಶಫೀರ್ ಪಿ.ಕೆ. ಮತ್ತು ಉಜಿರೆ ಮಚಾರ್‌ನ ರಝಾಕ್‌ರ ಪುತ್ರಿ ಮುನೀರಾ, ಮಂಜೇಶ್ವರದ ಮುಹಮ್ಮದ್‌ರ ಪುತ್ರ ಅಶ್ರಫ್ ಕೆ.ಎಂ. ಮತ್ತು ನಾವೂರಿನ ಮರ್ಹೂಂ ಅಬೂಬಕರ್‌ರ ಪುತ್ರಿ ಆತಿಕಾ ದಾಂಪತ್ಯ ಜೀವನಕ್ಕೆ ಪದಾರ್ಪಣೆಗೈದರು.

ಕಾರ್ಕಳದ ಶೇಖ್ ಸಾಬು ಸಾಹೇಬ್ ಅವರ ಸ್ಮರಣಾರ್ಥ ಸ್ಥಾಪಿಸಲಾದ ಹಾಜಿ ಕಾರ್ಕಳ ಶೇಖ್ ಶಾಬು ಸಾಹೇಬ್ ಮೆಮೋರಿಯಲ್ ಟ್ರಸ್ಟ್ ಅವರ ಹಿರಿಯ ಪುತ್ರ ಅಲ್ಹಾಜ್ ಕೆ.ಎಸ್.ಮುಹಮ್ಮದ್ ಮಸೂದ್‌ರ ಅಧ್ಯಕ್ಷತೆಯಲ್ಲಿ ಕಾರ್ಯಾಚರಿಸುತ್ತಿವೆ. ಆರ್ಥಿಕವಾಗಿ ಹಿಂದುಳಿದವರ ಸಬಲೀಕರಣಕ್ಕಾಗಿ ಈ ಟ್ರಸ್ಟ್ ಪ್ರಯತ್ನಿಸುತ್ತಿವೆ. ಮಹಿಳೆಯರ, ಅನಾಥ ಮಕ್ಕಳ ಸಂರಕ್ಷಣೆ ಮಾಡುವುದು, ಅರ್ಹ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವುದು, ಕ್ರೀಡೆ ಮತ್ತಿತರ ಸಾಮಾಜಿಕ ಚಟುವಟಿಕೆಗೆ ಪ್ರೋತ್ಸಾಹ ನೀಡುವುದು, ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ವಿದ್ಯಾರ್ಥಿ ನಿಲಯ ಸ್ಥಾಪಿಸುವುದು, ವಸತಿ ಕಲ್ಪಿಸುವುದು, ಸ್ವ ಉದ್ಯೋಗ ಮತ್ತು ವೃತ್ತಿಪರ ಕೋರ್ಸ್‌ಗಳ ಬಗ್ಗೆ ಶಿಬಿರ ಏರ್ಪಡಿಸುವುದು, ಉಚಿತ ವೈದ್ಯಕೀಯ ಶಿಬಿರ ಏರ್ಪಡಿಸುವುದು, ದೈಹಿಕ ಮತ್ತು ಮಾನಸಿಕ ಅಸ್ವಸ್ಥರಿಗೆ ಸಹಾಯ ಮಾಡುವುದು, ಹಿರಿಯ ನಾಗರಿಕರಿಗೆ ನೆರವು ನೀಡುವುದು, ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡುವುದು, ವಿಕಲಚೇತನರಿಗೆ ನೆರವು ನೀಡುವುದು ಟ್ರಸ್ಟ್‌ನ ಧ್ಯೇಯ ಉದ್ದೇಶವಾಗಿದೆ.

ಈಗಾಗಲೇ ಟ್ರಸ್ಟ್ ವತಿಯಿಂದ ಕುಟುಂಬದ ಆಸರೆ ಇಲ್ಲದಂತಹ ಹಿರಿಯ ಮಹಿಳೆಯರಿಗೆ ಕುದ್ರೋಳಿಯಲ್ಲಿ ‘ದಾರುಸ್ಸಫಕತ್’ ಎಂಬ ಹೆಸರಿನ ಕಟ್ಟಡದಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತಿವೆ. ಟ್ರಸ್ಟ್ ವತಿಯಿಂದ 2023ರಲ್ಲಿ 11 ಜೋಡಿ, 2024ರಲ್ಲಿ 7 ಜೋಡಿಯ ಮದುವೆ ಮಾಡಿಕೊಡಲಾಗಿತ್ತು. 2025ರಲ್ಲಿ (ಇಂದು ) 9 ಜೋಡಿಯ ಮದುವೆ ಮಾಡಲಾಗಿದೆ.

 


 

 

 

 

 

 

 

 

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News