MANGALURU | ಆರ್‌ಟಿಒ ಕಚೇರಿಗೆ ಬಾಂಬ್ ಬೆದರಿಕೆ ಕರೆ
►ಐದು ಕಡೆಗಳಲ್ಲಿ ಬಾಂಬ್ ಇಡುವುದಾಗಿ ಇ-ಮೇಲ್ ಸಂದೇಶ ► ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳದಿಂದ ತಪಾಸಣೆ
ಮಂಗಳೂರು, ಡಿ.15: ನಗರದ ನೆಹರೂ ಮೈದಾನದ ಬಳಿ ಇರುವ ಪ್ರಾದೇಶಿಕ ಸಾರಿಗೆ ಕಚೇರಿಗೆ (ಆರ್‌ಟಿಒ) ಸೋಮವಾರ ಬಾಂಬ್ ಬೆದರಿಕೆಯ ಇ-ಮೇಲ್ ಸಂದೇಶ ಬಂದಿರುವ ಬಗ್ಗೆ ವರದಿಯಾಗಿದೆ. ಮಾಹಿತಿ ತಿಳಿದ ತಕ್ಷಣ ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳವು ತೀವ್ರ ತಪಾಸಣೆ ನಡೆಸಿದ್ದು, ಬಳಿಕ ಇದೊಂದು ಹುಸಿ ಬಾಂಬ್ ಬೆದರಿಕೆ ಕರೆಯ ಸಂದೇಶ ಎಂಬುದು ಖಚಿತವಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪಾಕಿಸ್ತಾನ-ತಮಿಳುನಾಡು ಡಿಎಂಕೆ ಚುನಾವಣೆಗಾಗಿ ಗಮನವನ್ನು ಬೇರೆಡೆ ಸೆಳೆಯಲು ಬಯಸುತ್ತಿದೆ ಎಂಬ ಸಂದೇಶವನ್ನು arna_aswin_sekar@outlook.com ನಿಂದ ಕಳುಹಿಸಿ ಶೀಘ್ರವೇ ಮಂಗಳೂರು ಆರ್‌ಟಿಒ ಕಚೇರಿಯಲ್ಲಿ 5 ಬಾಂಬ್ ಗಳನ್ನು ಸ್ಫೋಟಿಸಲಾಗುವುದು. ಪಾಕಿಸ್ತಾನದ ಐಎಸ್ಐ ಸೆಲ್ ನ ತಮಿಳುನಾಡು ವಿಭಾಗ ಎಲ್ಟಿಟಿಇ ಮಾಜಿ ಸದಸ್ಯರೊಂದಿಗೆ ಸೇರಿಕೊಂಡು ಈ ರಿಮೋಟ್ ಬಾಂಬ್ ಸ್ಫೋಟ ಕಾರ್ಯಾಚರಣೆಯನ್ನು ನಡೆಸಲಿದೆ ಎಂದು ಇ-ಮೇಲ್ನಲ್ಲಿ ತಿಳಿಸಲಾಗಿದೆ ಎಂದು ತಿಳಿದು ಬಂದಿದೆ.
ಈ ಸಂದೇಶವನ್ನು ರವಿವಾರ ತಡರಾತ್ರಿ 1:19ಕ್ಕೆ ರವಾನಿಸಲಾಗಿದೆ. ಅದನ್ನು ಆರ್‌ಟಿಒ ಕಚೇರಿ ಅಧಿಕಾರಿಗಳು ಸೋಮವಾರ ಮಧ್ಯಾಹ್ನ 12:05ಕ್ಕೆ ಗಮನಿಸಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅದರಂತೆ ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳವು ತಪಾಸಣೆ ನಡೆಸಿದೆ. ಆದರೆ ಯಾವುದೇ ಕುರುಹು ಕಾಣಿಸಲಿಲ್ಲ. ಹಾಗಾಗಿ ಇದೊಂದು ಹುಸಿ ಬೆದರಿಕೆ ಸಂದೇಶ ಎಂದು ಅಧಿಕಾರಿಗಳು ಖಚಿತಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಮಂಗಳೂರು ಉಪ ಸಾರಿಗೆ ಆಯುಕ್ತ ಹಾಗೂ ಪ್ರಭಾರ ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ ಮುರುಗೇಂದ್ರ ಬಿ.ಶಿರೋಳ್ಕರ್ ದೂರು ನೀಡಿದ್ದು, ಅದರಂತೆ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರ್‌ಟಿಒಕಚೇರಿಗೆ ಬಾಂಬ್ ಇಡಲಾಗಿದೆ ಎಂಬ ಇ ಮೇಲ್ ಸಂದೇಶದ ಹಿನ್ನೆಲೆಯಲ್ಲಿ ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳಗಳು ತಪಾಸಣೆ ನಡೆಸಿದೆ. ಆದರೆ ಯಾವುದೇ ಸ್ಪೋಟಕಗಳು ಪತ್ತೆಯಾಗಿಲ್ಲ. ಇದೊಂದು ಹುಸಿ ಬೆದರಿಕೆ ಸಂದೇಶವಾಗಿದೆ
-ಸುಧೀರ್ ಕುಮಾರ್ ರೆಡ್ಡಿ, ಮಂಗಳೂರು ನಗರ, ಪೊಲೀಸ್ ಆಯುಕ್ತ