×
Ad

ಮಾಧ್ಯಮಗಳು ಸಮಾಜದಲ್ಲಿ ಸೌಹಾರ್ದತೆ, ಒಳಗೊಳ್ಳುವಿಕೆ, ರಚನಾತ್ಮಕ ವಾತಾವರಣ ನಿರ್ಮಿಸಬೇಕು: ಡಾ.ರೊನಾಲ್ಡ್ ಕೊಲಾಸೊ

ದಾಯ್ಜಿವರ್ಲ್ಡ್ ಡಾಟ್ ಕಾಮ್ ಸಂಸ್ಥೆಯ ರಜತ ವರ್ಷಾಚರಣೆ

Update: 2026-02-14 22:25 IST

ಮಂಗಳೂರು: ಮಾಧ್ಯಮಗಳು ಕೇವಲ ಸುದ್ದಿಯನ್ನು ನೀಡುವ ಸಾಧನವಾಗದೆ, ಸಮಾಜದಲ್ಲಿ ಸೌಹಾರ್ದತೆ, ಒಳಗೊಳ್ಳುವಿಕೆ ಮತ್ತು ರಚನಾತ್ಮಕ ವಾತಾವರಣವನ್ನು ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದು ಖ್ಯಾತ ಎನ್‌ಆರ್‌ಐ ಉದ್ಯಮಿ, ಕೊಡುಗೈದಾನಿ ಡಾ.ರೊನಾಲ್ಡ್ ಕೊಲಾಸೊ ಹೇಳಿದ್ದಾರೆ.

ನಗರದ ಮಿಲಾಗ್ರಿಸ್ ಜ್ಯುಬುಲಿ ಹಾಲ್‌ನಲ್ಲಿ ಶನಿವಾರ ನಡೆದ ಡಿಜಿಟಲ್ ಮಾಧ್ಯಮ ದಾಯ್ಜಿವರ್ಲ್ಡ್ ಡಾಟ್ ಕಾಮ್ ಸಂಸ್ಥೆಯ ರಜತ ವರ್ಷಾಚರಣೆಯ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.


ಮಾಧ್ಯಮಗಳು ವಿಭಜನೆ ಮಾಡುವ ನಿರೂಪಣೆಗಳಿಗಿಂತ ದೇಶದ ಅಭಿವೃದ್ಧಿ ಮತ್ತು ಸಾಮರಸ್ಯಕ್ಕೆ ಒತ್ತು ನೀಡುವುದು ಇಂದಿನ ಅಗತ್ಯವಾಗಿದೆ. ವಿಶೇಷವಾಗಿ ದಾಯ್ಜಿವರ್ಲ್ಡ್ ಮಾಧ್ಯಮವು ಸ್ಥಳೀಯ ಸುದ್ದಿಯಿಂದ ಹಿಡಿದು ಜಾಗತಿಕ ಸುದ್ದಿ ತನಕ ಪ್ರತಿಯೊಂದರಲ್ಲೂ ತನ್ನದೇ ಆದ ವಿಶಿಷ್ಟ ಛಾಪನ್ನು ಮೂಡಿಸಿವೆ ಎಂದು ಡಾ . ಕೊಲಾಸೊ ಶ್ಲಾಘಿಸಿದರು.

ಸಮಾಜದ ಕನ್ನಡಿಯಾದ ಮಾಧ್ಯಮಗಳು ಕೇವಲ ಘಟನೆಗಳನ್ನು ವರದಿ ಮಾಡುವುದಕ್ಕೆ ಸೀಮಿತವಾಗಬಾರದು. ಅವುಗಳು ಸರಕಾರ ಮತ್ತು ಸಮಾಜಕ್ಕೆ ಸರಿಯಾದ ದಾರಿಯನ್ನು ತೋರಿಸುವ ದಿಕ್ಸೂಚಿಯಾಗಬೇಕು ಎಂದು ಡಾ . ಕೊಲಾಸೊ ಹೇಳಿದರು.


ಯಾವುದೇ ದೇಶ ಆರ್ಥಿಕ ಅಭಿವೃದ್ಧಿ ಅಲ್ಲಿನ ಶಾಂತಿ ಮತ್ತು ಸೌಹಾರ್ದತೆಯ ಮೇಲೆ ಅವಲಂಬಿತವಾಗಿರುತ್ತದೆ. ಮಾಧ್ಯಮಗಳು ಸೌಹಾರ್ದತೆಗೆ ಒತ್ತು ನೀಡಬೇಕು ಎಂದು ಡಾ . ಕೊಲಾಸೊ ನುಡಿದರು.

ದಾಯ್ಜಿವರ್ಲ್ಡ್ ಮಾಧ್ಯಮವು ಕೇವಲ ಸುದ್ದಿಯ ಉದ್ದ ಮತ್ತು ಆಳವನ್ನು ಅಳೆಯದೆ, ಅದರ ಹಿಂದಿರುವ ಸತ್ಯಾಸತ್ಯತೆ ಮತ್ತು ಸಮಾನತೆಯ ಮೌಲ್ಯಗಳನ್ನು ಎತ್ತಿ ಹಿಡಿಯುತ್ತಿದೆ ಎಂದು ಡಾ . ಕೊಲಾಸೊ ಶ್ಲಾಘಿಸಿದರು.

ದಾಯ್ಜಿವರ್ಲ್ಡ್‌ನ ಪ್ರಯತ್ನ ಕೇವಲ ಮಾಹಿತಿಯನ್ನು ನೀಡುವುದಕ್ಕೆ ಸೀಮಿತವಾಗಿಲ್ಲ ಸಮಾಜದ ಏಳಿಗೆಗಾಗಿ ಶ್ರಮಿಸುತ್ತಿದೆ. ಜನರ ಹೃದಯಗಳನ್ನು ಮತ್ತು ಮಾನವೀಯತೆಯನ್ನು ಬೆಸೆಯುವ ಶಕ್ತಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಸಂಕಷ್ಟದಲ್ಲಿರುವವರಿಗೆ ನೆರವಾಗುತ್ತಿದೆ ಎಂದು ಅವರು ಬಣ್ಣಿಸಿದರು.


ಮುಖ್ಯ ಅತಿಥಿ ಬೆಂಗಳೂರು ಎಂಆರ್‌ಜಿ ಗ್ರೂಪ್‌ನ ಅಧ್ಯಕ್ಷ ಡಾ.ಪ್ರಕಾಶ್ ಶೆಟ್ಟಿ ಮಾತನಾಡಿ ದಾಯ್ಜಿವರ್ಲ್ಡ್ ಡಾಟ್ ಕಾಮ್ ಸಂಸ್ಥೆಯ 25 ವರ್ಷಗಳ ಸಾಧನೆ ದೊಡ್ಡದು. ಅದರ ಹಿಂದೆ ಪ್ರಯತ್ನ, ಶ್ರಮ, ತ್ಯಾಗ ಇದೆ. ದೇಶ ವಿದೇಶಗಳಿಗೆ ಅದರ ಕೀರ್ತಿ ಮುಟ್ಟಿದೆ ಎಂದು ಹೇಳಿದರು.


ಯೆನೆಪೊಯ ಡೀಮ್ಡ್ ವಿವಿ ಕುಲಪತಿ ಡಾ.ಯೆನೆಪೊಯ ಅಬ್ದುಲ್ಲಾ ಕುಂಞಿ ಅವರು ಮಾಧ್ಯಮಗಳು ಪ್ರಜಾಪ್ರಭುತ್ವದ ಆಧಾರಸ್ತಂಭವಾಗಿದೆ. ದಾಯ್ಜಿವರ್ಲ್ಡ್ ಡಾಟ್ ಕಾಮ್ ಸಮಾಜದಲ್ಲಿ ಸೌಹಾರ್ದತೆ, ಒಗ್ಗಟ್ಟು, ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. 25 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ತನ್ನದೆ ಆದ ಛಾಪನ್ನು ಮೂಡಿಸುತ್ತಿದೆ ಎಂದರು.


ಅಬುಧಾಬಿಯ ಹಿಸ್ನಾ ಇಂಟರ್‌ನ್ಯಾಷನಲ್‌ನ ವ್ಯವಸ್ಥಾಪಕ ನಿರ್ದೇಶಕ ರೊನಾಲ್ಡ್ ಪಿಂಟೊ ಮತ್ತು ರೋಹನ್ ಕಾರ್ಪೊರೇಷನ್‌ನ ಡಾ.ರೋಹನ್ ಮೊಂತೇರೊ ಗಣ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

ದಾಯ್ಜಿ ವರ್ಲ್ಡ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ವಾಲ್ಟರ್ ಡಿಸೋಜ ನಂದಳಿಕೆ ಸ್ವಾಗತಿಸಿದರು. ನಿರ್ದೇಶಕ ಮೆಲ್ವಿನ್ ರೋಡ್ರಿಗಸ್ ವಂದಿಸಿದರು. ರೀನಾ ಕ್ಯಾಸ್ಟಲಿನೊ ಕಾರ್ಯಕ್ರಮ ನಿರೂಪಿಸಿದರು.


ಸಮಾರಂಭದ ವಿಶೇಷ ಆಕರ್ಷಣೆಯಾಗಿ ‘ಹಿಸ್ನಾ ಮಿಸ್ ದಾಯ್ಜಿವರ್ಲ್ಡ್’ ಸ್ಪರ್ಧೆ , ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.




 














Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News