×
Ad

ಮಂಗಳೂರು| MEIF ಬೆಳ್ಳಿ ಮಹೋತ್ಸವದ ಅಂಗವಾಗಿ ʼಮಿಷನ್ M ಪವರ್'ಗೆ ಚಾಲನೆ

Update: 2025-10-19 16:56 IST

ಮಂಗಳೂರು : ಮುಸ್ಲಿಂ ಎಜುಕೇಷನಲ್ ಇನ್ಸ್ಟಿಟ್ಯೂಷನ್ಸ್ ಫೆಡರೇಶನ್ (MEIF) ಬೆಳ್ಳಿ ಮಹೋತ್ಸವ ಆಚರಣೆ ಅಂಗವಾಗಿ ಕೂಳೂರಿನ ಯೆನೆಪೋಯ ಕಾಲೇಜಿನಲ್ಲಿ ನಡೆದ ಫಲಾನುಭವಿ ವಿದ್ಯಾರ್ಥಿಗಳು ಮತ್ತು ದಾನಿಗಳ ಸಭೆಯಲ್ಲಿ ‘ಮಿಷನ್ M ಪವರ್’ ಎಂಬ ಹೊಸ ಯೋಜನೆಯನ್ನು ಪ್ರಾರಂಭಿಸಿದೆ.

ಈ ಕಾರ್ಯಕ್ರಮವು MEIF ಅಧ್ಯಕ್ಷ ಮೂಸಬ್ಬ ಪಿ ಬ್ಯಾರಿ ಅವರ ಸ್ವಾಗತ ಭಾಷಣದೊಂದಿಗೆ ಪ್ರಾರಂಭವಾಯಿತು. ಅವರು ಕಳೆದ 25 ವರ್ಷಗಳಲ್ಲಿ ಶಿಕ್ಷಣವನ್ನು ಉತ್ತೇಜಿಸುವ ಮತ್ತು ಸಮುದಾಯವನ್ನು ಸಬಲೀಕರಣಗೊಳಿಸುವ MEIF ಪ್ರಯಾಣದ ಬಗ್ಗೆ ವಿವರಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಯೆನಪೊಯ ವಿವಿ ಕುಲಪತಿ ಡಾ.ವೈ.ಅಬ್ದುಲ್ಲಾ ಕುಂಞಿ, 25 ವರ್ಷಗಳಿಂದ ಸಮುದಾಯ ಮತ್ತು ಸಮಾಜಕ್ಕೆ ಸಮರ್ಪಿತ ಸೇವೆಯನ್ನು ನೀಡಿದ್ದಕ್ಕೆ MEIF ಅನ್ನು ಅಭಿನಂದಿಸಿದರು.

MEIF ಕೇಂದ್ರ ಘಟಕದ ಗೌರವ ಅಧ್ಯಕ್ಷ ಉಮರ್ ಟೀಕೆ ಮಾತನಾಡಿ, ಶಿಕ್ಷಣದ ಮೂಲಕ ಸಮುದಾಯದ ಸಬಲೀಕರಣಗೊಳಿಸುವ ಮಹತ್ವದ ಬಗ್ಗೆ ಮಾತನಾಡಿದರು. ಅವರು MEIFನ ದೃಷ್ಟಿಕೋನ ಮತ್ತು ಧ್ಯೇಯವನ್ನು ವಿವರಿಸಿದರು. ಬಡ ವಿದ್ಯಾರ್ಥಿಗಳಿಗೆ ನಿರಂತರ ಬೆಂಬಲದ ಅಗತ್ಯದ ಬಗ್ಗೆ ಹೇಳಿದರು.

MEIF ಕೇಂದ್ರ ಘಟಕದ ಗೌರವ ಸಲಹೆಗಾರರಾದ ಸೈಯ್ಯದ್ ಬ್ಯಾರಿ ಅವರು ಬೆಳ್ಳಿ ಮಹೋತ್ಸವದ ಲೋಗೋವನ್ನು ಬಿಡುಗಡೆ ಮಾಡಿ ಸ್ಪೂರ್ತಿದಾಯಕ ಮಾತುಗಳನ್ನಾಡಿದರು.

ಸಹಿಷ್ಣುತೆ, ದೃಢತೆ, ಪರಿಶ್ರಮ ಮತ್ತು ಅಲ್ಲಾಹನ ಭಯವು ಯಶಸ್ಸಿನ ನಿಜವಾದ ಹಾದಿಯಾಗಿದೆ. ಯಶಸ್ಸನ್ನು ಸಾಧಿಸಿದ ನಂತರ ನೀವು ಸಮಾಜಕ್ಕೆ ಹೇಗೆ ಕೊಡುಗೆ ನೀಡುತ್ತೀರಿ ಎಂಬುದು ಮುಖ್ಯ ಎಂದು ಹೇಳಿದರು. ವೈಯಕ್ತಿಕ ಲಾಭಗಳನ್ನು ಮೀರಿ ಯೋಚಿಸಿ ಸಾಮಾಜಿಕ ಜವಾಬ್ದಾರಿಗಳನ್ನು ಮೆರೆಯುವಂತೆ ಸೈಯ್ಯದ್ ಬ್ಯಾರಿ ಅವರು ಯುವಕರನ್ನು ಒತ್ತಾಯಿಸಿದರು.

ಮಾದಕ ವ್ಯಸನಗಳ ಬಳಕೆ ಹೆಚ್ಚುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ ಅವರು ವಿದ್ಯಾರ್ಥಿಗಳು ಮಾದಕ ವ್ಯಸನದ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರಬೇಕು ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಕರ್ನಾಟಕ ಅಲೈಡ್ ಮತ್ತು ಹೆಲ್ತ್ಕೇರ್ ಕೌನ್ಸಿಲ್ ಅಧ್ಯಕ್ಷ ಡಾ.ಇಫ್ತಿಕಾರ್ ಅಲಿ ಫರೀದ್, ನಿಮ್ಮನ್ನು ಬೆಂಬಲಿಸಿದ ಕಾಲೇಜುಗಳಿಗೆ ಮಾದರಿಯಾಗಿರಿ, ವಿದ್ಯಾರ್ಥಿಗಳು ಮಾದಕ ವ್ಯಸನಗಳಿಂದ ದೂರವಿರಬೇಕು ಮತ್ತು ಜೀವನದಲ್ಲಿ ಯಶಸ್ವಿಯಾದಾಗ ತಮ್ಮ ಸಂಸ್ಥೆಗಳ ಬಗ್ಗೆ ಹೆಮ್ಮೆಯಿಂದ ಮಾತನಾಡಬೇಕು ಎಂದು ಒತ್ತಾಯಿಸಿದರು.

ಕಾರ್ಯಕ್ರಮದಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಎ. ಗಫೂರ್ ಮತ್ತು ಕರ್ನಾಟಕ ಕನಿಷ್ಠ ವೇತನ ಮಂಡಳಿ ಆಯೋಗದ ಅಧ್ಯಕ್ಷರಾದ ಟಿ.ಎಂ. ಶಾಹಿದ್ ತೆಕ್ಕಿಲ್ ಅವರನ್ನು ಸನ್ಮಾನಿಸಲಾಯಿತು.

‘ಮಿಷನ್ M ಪವರ್’ ಯೋಜನೆಯ ಭವಿಷ್ಯದ ಯೋಜನೆಗಳ ಬಗ್ಗೆ ಚರ್ಚಿಸಲಾಯಿತು. MEIF ಕೇಂದ್ರ ಘಟಕದ ಪ್ರಧಾನ ಕಾರ್ಯದರ್ಶಿ ರಿಯಾಝ್‌ ಅಹ್ಮದ್ ಕೆ.ಬಿ. ಧನ್ಯವಾದ ಅರ್ಪಿಸಿದರು. ಬೆಳ್ಳಿ ಮಹೋತ್ಸವ ಸಮಿತಿಯ ಸಂಚಾಲಕ ಬಿ.ಎ.ಇಕ್ಬಾಲ್ ಕಾರ್ಯಕ್ರಮವನ್ನು ಸಂಯೋಜಿಸಿದರು.

ಈ ವೇಳೆ ಯೆನಪೋಯ ಪಿ.ಯು.ಕಾಲೇಜಿನ ನಿರ್ದೇಶಕ ಅಬ್ದುಲ್ಲಾ ಜಾವೀದ್, ಯೆನಪೋಯ ಶಾಲಾ ನಿರ್ದೇಶಕಿ ಮಿಶ್ರಿಯಾ ಜಾವೀದ್, ಬೆಂಗಳೂರು ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದ ಉಪಾಧ್ಯಕ್ಷ ಸಲ್ಮಾನ್ ಅಹ್ಮದ್, ಇಂದಿರಾ ಎಜ್ಯುಕೇಷನ್ ಟ್ರಸ್ಟ್ ಪ್ರತಿನಿಧಿಗಳು, ಶಿವಮೊಗ್ಗದ ಗ್ಲೋಬಲ್ ಇನ್ಸ್ಟಿಟ್ಯೂಟ್ ಆಫ್ ಪ್ಯಾರಾ-ಮೆಡಿಕಲ್ ಸೈನ್ಸಸ್‌ನ ಡಾ. ಇರ್ಫಾನ್ ಅಹ್ಮದ್, ಮಂಗಳಾ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್‌ನ ಡಾ.ಗಣಪತಿ ಪಿ, ಮನ್ಶಾರ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್‌ನ ಸಯ್ಯದ್ ಉಮರ್ ಅಸ್ಸಾಕ್ವಾಫ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

 

 

 

 

 

 

 

 

 

 

 

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News