×
Ad

ಮೊಂಟೆಪದವು ಗುಡ್ಡ ಕುಸಿತ ಪ್ರಕರಣ: ಧ್ವಂಸಗೊಂಡ ಮನೆಯಡಿಯಲ್ಲಿ ಸಿಲುಕಿರುವ ತಾಯಿ, ಇಬ್ಬರು ಮಕ್ಕಳು

Update: 2025-05-30 10:29 IST

ಕೊಣಾಜೆ: ಧಾರಾಕಾರ ಮಳೆಗೆ ಮಂಜನಾಡಿ ಗ್ರಾಮದ ಮೊಂಟೆಪದವು ಪಂಬದ ಹಿತ್ತಿಲು ಕೋಡಿ ಕೊಪ್ಪಲ ಎಂಬಲ್ಲಿ ಕಾಂತಪ್ಪ ಪೂಜಾರಿ ಎಂಬವರ ಮನೆಗೆ ಗುಡ್ಡ ಕುಸಿದು ಬಿದ್ದು ಸಂಭವಿಸಿದ ದುರಂತದಲ್ಲಿ ಒಬ್ಬರು ಮೃತಪಟ್ಟಿದ್ದರೆ, ಮೂವರು ಕುಸಿದ ಮಣ್ಣು, ಮನೆಯ ಅವಶೇಷಗಳಡಿ ಸಿಲುಕಿಕೊಂಡಿದ್ದಾರೆ.

ಸುಮಾರು ಮುಂಜಾನೆ ನಾಲ್ಕು ಗಂಟೆಗೆ ಸುಮಾರಿಗೆ ಈ ದುರಂತ ಸಂಭವಿಸಿದೆ. ಗುಡ್ಡ ಕುಸಿದು ಬಿದ್ದ ತೀವ್ರತೆಗೆ ಮನೆ ಸಂಪೂರ್ಣ ನೆಲಸಮಗೊಂಡಿದ್ದು, ಕಾಂತಪ್ಪ ಪೂಜಾರಿಯವರ ಪತ್ನಿ ಪ್ರೇಮಾ(58) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅವರ ಪುತ್ರ ಸೀತಾರಾಮರ ಪತ್ನಿ ಅಶ್ವಿನಿ ಹಾಗೂ ಇಬ್ಬರು ಪುಟ್ಟ ಮಕ್ಕಳು( 3 ಹಾಗೂ 2 ವರ್ಷದ ಮಕ್ಕಳು) ಕುಸಿದ ಮನೆಯೊಳಗೆ ಸಿಲುಕಿಕೊಂಡಿದ್ದಾರೆ. ಕಾಂತಪ್ಪ ಹಾಗೂ ಸೀತಾರಾಮರನ್ನು ರಕ್ಷಿಸಲಾಗಿದೆ. ಕಾಂತಪ್ಪರ ಕಾಲಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಅವಶೇಷಗಳಡಿ ಸಿಲುಕಿರುವ ತಾಯಿ, ಮಕ್ಕಳು

ಗುಡ್ಡ ಕುಸಿತದಿಂದ ಕುಸಿದುಬಿದ್ದಿರುವ ಮನೆಯ ಅವಶೇಷಗಳಡಿಯಲ್ಲಿ ಸೀತಾರಾಮ ಅವರ ಪತ್ನಿ ಅಶ್ವಿನಿ ಹಾಗೂ 3 ಹಾಗೂ 2 ವರ್ಷದ ಇಬ್ಬರು ಮಕ್ಕಳು ಸಿಲುಕಿಕೊಂಡಿದ್ದಾರೆ. ಇವರು ಗುಡ್ಡ ಕುಸಿದ ಮನೆಯ ಒಂದು ಭಾಗದ ಕೋಣೆಯಲ್ಲಿ ಮಲಗಿದ್ದರು ಎಂದು ತಿಳಿದುಬಂದಿದೆ.

ಮಗುವಿನ ಅಳು ಕೇಳುತ್ತಿದೆ

ಮನೆಯೊಳಗೆ ಸಿಲುಕಿರುವ ಅಶ್ವಿನಿ ಒಳಗಡೆಯಿಂದ ಕೊಂಚ ಮಾತನಾಡುತ್ತಿದ್ದರೆ, ಒಂದು ಮಗು ಅಳುವ ಶಬ್ದ ಕೇಳಿಸುತ್ತಿದೆ.

ಮುಂದುವರಿದ ರಕ್ಷಣಾ ಕಾರ್ಯ:

ಸುಮಾರು ಮುಂಜಾನೆ ನಾಲ್ಕು ಗಂಟೆಗೆ ಸುಮಾರಿಗೆ ಘಟನೆ ನಡೆದಿದ್ದು, ಕೂಡಲೇ ಸ್ಥಳೀಯರು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದರು. ಆದರೆ ಮನೆಯು ಸಂಪೂರ್ಣ ಕುಸಿದ ಪರಿಣಾಮ ರಕ್ಷಣಾ ಕಾರ್ಯ ಕಷ್ಟವಾಗಿತ್ತು. ಅಲ್ಲದೇ ಈ ಮನೆಗೆ ಸಮರ್ಪಕ ದಾರಿ ವ್ಯವಸ್ಥೆ ಇಲ್ಲದಿರುವುದು ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿ ಪರಿಣಮಿಸಿದೆ. ಮಳೆ ಕೂಡಾ ರಕ್ಷಣಾ ಕಾರ್ಯಾಚರಣೆಗೆ ತೊಡಕುಂಟು ಮಾಡುತ್ತಿದೆ.

 ಸದ್ಯ ಎನ್ ಡಿ ಆರ್ ಎಫ್, ಎಸ್ ಡಿಆರ್ ಪಿ, ಅಗ್ನಿಶಾಮಕ ದಳದ ಸಿಬ್ಬಂದಿ, ಪೊಲೀಸರು ಭರದ ರಕ್ಷಣಾ ಕಾರ್ಯ ಮುಂದುವರಿಸಿದ್ದು ತಾಯಿ ಹಾಗೂ ಇಬ್ಬರು ಮಕ್ಕಳ ರಕ್ಷಣೆಗೆ ಶ್ರಮಿಸುತ್ತಿದ್ದಾರೆ.

ಎಡಿಸಿ ಸಂತೋಷ್, ಸ್ಥಳಕ್ಕೆ ತಹಶಿಲ್ದಾರ್ ಪುಟ್ಟರಾಜು, ಡಿಸಿಪಿ ಸಿದ್ದಾರ್ಥ್ ಘೋಯಲ್, ಪ್ರಾಕೃತಿಕ ವಿಕೋಪದ ನಿರ್ವಹಣಾಧಿಕಾರಿ ವಿಜಯ್, ಕಾರ್ಯನಿರ್ವಹಣಾಧಿಕಾರಿ ಗುರುದತ್, ಮಂಜನಾಡಿ ಪಂಚಾಯತ್ ಅಧ್ಯಕ್ಷೆ ಸರೋಜಿನಿ, ನರಿಂಗಾನ ಪಂಚಾಯತ್ ಅಧ್ಯಕ್ಷ ನವಾಝ್ ನರಿಂಗಾನ, ಮುಖಂಡರಾದ ಐವನ್ ಡಿಸೋಜ, ಸತೀಶ್ ಕುಂಪಲ, ಸಂತೋಷ್ ಬೋಳಿಯಾರ್, ರಮೇಶ್ ಶೆಟ್ಟಿ ಬೋಳಿಯಾರ್ , ಎನ್.ಎಸ್.ಕರೀಂ ಮೊದಲಾದವರು ಸ್ಥಳದಲ್ಲಿದ್ದಾರೆ.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News