ಕಾಂಗ್ರೆಸ್ ಪದಾಧಿಕಾರಿ ಸ್ಥಾನಕ್ಕೆ ಮುರಳೀಧರ ರೈ ಮಠಂತಬೆಟ್ಟು ರಾಜೀನಾಮೆ
ಮುರಳೀಧರ ರೈ ಮಠಂತಬೆಟ್ಟು
ಪುತ್ತೂರು : ಬಂಟ್ವಾಳ ತಾಲೂಕಿನ ಕೊಳ್ತಮಜಲು ಅಬ್ದುಲ್ ರಹ್ಮಾನ್ ಕೊಲೆ ಪ್ರಕರಣವನ್ನು ಖಂಡಿಸಿ ಈಗಾಗಲೇ ಅಲ್ಪ ಸಂಖ್ಯಾತ ಸಮುದಾಯದ ಹಲವಾರು ಮುಖಂಡರುಗಳು ವಿವಿಧ ಹುದ್ದೆಗಳಿಗೆ ರಾಜೀನಾಮೆ ನೀಡುತ್ತಿದ್ದು, ಇದೀಗ ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಮುರಳೀಧರ ರೈ ಅವರು ತಮ್ಮ ಪದಾಧಿಕಾರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಅವರಿಗೆ ಗುರುವಾರ ಮುರಳೀಧರ ರೈ ಅವರು ತಮ್ಮ ರಾಜೀನಾಮೆ ಪತ್ರವನ್ನು ನೀಡಿದ್ದಾರೆ.
ಅವರು ತಮ್ಮ ರಾಜೀನಾಮೆ ಪತ್ರದಲ್ಲಿ ದ.ಕ.ಜಿಲ್ಲೆಯಲ್ಲಿ ಅಮಾಯಕರ ಜೀವಕ್ಕೆ ಬೆಲೆ ಕಟ್ಟಲಾಗದೆ ನಾವುಗಳು ನಿಸ್ತೇಜಿತರಾಗಿದ್ದೇವೆ. ಬಾಲ್ಯದಲ್ಲೇ ನಾನು ತೀರ್ಥರೂಪರಾದ ಆನಂತರೈಗಳ ಮಾರ್ಗದರ್ಶನದಲ್ಲಿ ನನ್ನನ್ನು ಬೆಳೆಸಿದ್ದು, ಕಲಿಸಿದ್ದು ಕಾಂಗ್ರೆಸ್ ಶಿಕ್ಷಣ. ಇದಕ್ಕೆ ಪ್ರತಿಗುಣವಾಗಿ ನಮ್ಮಲ್ಲಿ ಹಿಂದುಗಳು, ಮುಸಲ್ಮಾನರು, ಕ್ರಿಶ್ಚಿಯನ್‌ರು ಒಂದೇ ಹಡಗಿನ ನಾವಿಕರಂತೆ ಪ್ರಯಾಣ ಮಾಡುತ್ತಾ ಬಂದಿದ್ದೇವೆ. ಈ ನಮ್ಮ ಜಾತ್ಯಾತೀತ ಭಾರತದ ನಾವೆಯಲ್ಲಿ ತೇಲಾಡುತ್ತಾ, ಓಲಾಡುತ್ತಾ ನಮ್ಮ ದೇಶದ ಸಂವಿಂಧಾನಿಕ ತತ್ವದ ಸಮುದ್ರದಲ್ಲಿ ಚಲಿಸುತ್ತಾ ಮುಳುಗೇಳುಗಳನ್ನು ಸಹಿಸುತ್ತಾ ಸಾಗುತ್ತಿರುವುದು, ನಮ್ಮ ಕಾಂಗ್ರೆಸ್ ಪಕ್ಷದ ಭದ್ರವಾದ ಜಾತ್ಯಾತೀತ ತತ್ವಗಳ ಮೇಲೆ ನಂಬಿಕೆಯಿಟ್ಟು. ಇದೆಲ್ಲವು ಕಾಂಗ್ರೆಸ್ ಪಕ್ಷದ ನಾಯಕರಿಗೆ ತಿಳಿದಿರುವು ವಿಷಯ. ಆದರೆ, ತಡೆದು ತಡೆದು ಎಲ್ಲವನ್ನು ಸಹಿಸಿಕೊಂಡು ಹಲವಾರು ಕಾಲದಿಂದ ನಡೆಯುತ್ತಿರುವ ಕೋಮು ವೈಷಮ್ಯ ಬೀಜದಲ್ಲಿ ಸಹೋದರರಂತೆ ಬಾಳುತ್ತಿರುವ ಹಿಂದುಗಳಾಗಲಿ, ಮುಸಲ್ಮಾನರಾಗಲಿ, ಕ್ರಿಶ್ಚಿನಿಯರಾಗಲಿ ಇವತ್ತು ಕೊನೆಗೊಳ್ಳಬಹುದು. ನಾಳೆ ಕೊನೆಗೊಳ್ಳಬಹುದು ಎಂಬಿತ್ಯಾದಿ ನಿರೀಕ್ಷೆಗಳನ್ನು ಸುಳ್ಳು ಮಾಡಿ ನಡೆಯುತ್ತಿರುವಂತಹ ಘಟನೆಗಳು ನಮ್ಮನ್ನು ನಿಜಕ್ಕೂ ಭ್ರಮನಿರಸನ್ನಾಗಿ ಮಾಡುತ್ತಿವೆ ಎಂದು ತಿಳಿಸಿದ್ದಾರೆ.
ಬಿಜೆಪಿ ಸರಕಾರದ ಕಾಲದಲ್ಲಿ ನಡೆಯುತ್ತಿರುವ ಘಟನೆಗಳು ಅವರ ಸ್ವಾರ್ಥತೆಯನ್ನು ಸಕಾರಗೊಳಿಸುವ ಬದ್ಧತೆ ಎಂಬುದನ್ನು ಒಪ್ಪಿಕೊಳ್ಳೋಣ. ಆದರೆ ನಮ್ಮ ಸರಕಾರ ಜ್ಯಾತ್ಯಾತೀತ ವಾದವನ್ನು ಪುಷ್ಟಿಕರಣಗೊಳಿಸುವ ಬಗ್ಗೆ ಮೊದಲ ಆದ್ಯತೆಯನ್ನು ಕೊಡಬೇಕಾಗಿದೆ. ಇದು ತಮ್ಮ ಗಮನದಲ್ಲಿ ಇರಲಿ. ಈಗಿನ ಕೆಲವು ತಿಂಗಳುಗಳಿಂದ ನಡೆಯುವ ಕೆಲವು ಘಟನೆಗಳು ನಮಗೆ ಆಘಾತ ಉಂಟು ಮಾಡಿದ್ದು, ವೈಯಕ್ತಿಕವಾಗಿ ಭ್ರಮನಿರಸನವಾಗಿದೆ. ಅಲ್ಪಸಂಖ್ಯಾತರನ್ನು ಬಿಟ್ಟು ಕಾಂಗ್ರೆಸ್ ಇಲ್ಲ. ಕಾಂಗ್ರೆಸ್ಸನ್ನು ಬಿಟ್ಟು ಅಲ್ಪಸಂಖ್ಯಾತರಿಲ್ಲ ಎಂಬುವುದು ವಾಡಿಕೆ. ನಮ್ಮ ಭಾರತದ ಅಖಂಡತೆಯೇ ಇದರಲ್ಲಿ ಅಡಗಿದೆ. ಆದರೆ ನಾವು ಇಂದು ವಿಫಲರಾದೆವು ಎನ್ನುವ ಆಲೋಚನೆ ಬಂದಿದೆ. ಆದ್ದರಿಂದ ನಾನು ಈಗಿನಿಂದ ಪಕ್ಷದ ಪದಾಧಿಕಾರಿ ಹುದ್ದೆಯಿಂದ ನಿವೃತ್ತನಾಗಲು ಬಯಸುತ್ತೇನೆಂದು ಈ ಮೂಲಕ ವಿನಂತಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ಮುಸ್ಲಿಂ ಮುಖಂಡರ ನಿರ್ಧಾರಕ್ಕೆ ಬದ್ಧ :
ಈ ಬಗ್ಗೆ ವಾರ್ತಾಭಾರತಿಗೆ ಮಾಹಿತಿ ನೀಡಿದ ಮುರಳೀಧರ ರೈ ಮಠಂತಬೆಟ್ಟು ಅವರು, ಕಾಂಗ್ರೆಸ್ ಪಕ್ಷದಲ್ಲಿ ಎಲ್ಲರೂ ಒಟ್ಟಾಗಿ ಇರುವವರು. ಇಲ್ಲಿನ ಮುಸ್ಲಿಮರು ನಮ್ಮ ಸಹವರ್ತಿಗಳು. ನಾವು ಒಟ್ಟಾಗಿ ಕಾಂಗ್ರೆಸ್‌ಗೆ ಓಟು ಕೇಳುವುದಕ್ಕೆ ಹೋಗುತ್ತೇವೆ. ಒಟ್ಟಾಗಿ ಬದುಕುತ್ತೇವೆ. ನಿನ್ನೆಯ ಘಟನೆಯ ಬಗ್ಗೆ ನಾನು ಮುಸ್ಲಿಂ ಮುಖಂಡರ ಜೊತಗೆ ಚರ್ಚಿಸಿದ್ದೇನೆ. ಅವರ ನಿರ್ಧಾರ ನ್ಯಾಯಯುತವಾಗಿದೆ. ಅವರ ನಿರ್ಧಾರಕ್ಕೆ ನಾನೂ ಬದ್ಧನಾಗಿದ್ದೇನೆ. ಅದಕ್ಕಾಗಿ ಪಕ್ಷದ ಹುದ್ದೆಗೆ ರಾಜೀನಾಮೆ ನೀಡಿದ್ದೇನೆ ಎಂದು ತಿಳಿಸಿದ್ದಾರೆ.