ಉಳ್ಳಾಲ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮೂಲಭೂತ ಸೌಕರ್ಯ ಒದಗಿಸುವಂತೆ ಒತ್ತಾಯಿಸಿ ಡಿವೈಎಫ್ಐ ಪ್ರತಿಭಟನೆ
ಉಳ್ಳಾಲ: ಸಾರ್ವಜನಿಕ ರಂಗದ ಆರೋಗ್ಯ ವ್ಯವಸ್ಥೆ ಯನ್ನು ದುರ್ಬಲ ಗೊಳಿಸಿ ಬಡವರಿಗೆ ತೊಂದರೆ ನೀಡಲಾಗುತ್ತಿದೆ. ಬಡವರಿಗೆ, ಕಾರ್ಮಿಕರಿಗೆ ಒಂದು ಆರೋಗ್ಯ ಕೇಂದ್ರ ಬೇಕು ಎಂಬುದು ನಮ್ಮ ಬೇಡಿಕೆ.ಆದರೆ ಉಳ್ಳಾಲದಲ್ಲಿ ಸಮುದಾಯ ಆರೋಗ್ಯ ಕೇಂದ್ರ ನಿರ್ಮಾಣ ಆದರೂ ಕೂಡಾ ಯಾವುದೇ ಬೆಳವಣಿಗೆ ಕಾಣುತ್ತಿಲ್ಲ.ಇದರ ಹಿಂದೆ ಖಾಸಗಿ ಯವರ ಪ್ರಭಾವ ಇದ್ದೇ ಇದೆ ಎಂದು ಡಿವೈಎಫ್ಐ ಜಿಲ್ಲಾ ಅಧ್ಯಕ್ಷ ಇಮ್ತಿಯಾಜ್ ಆರೋಪಿಸಿದರು.
ಅವರು ಉಳ್ಲಾಲ ತಾಲೂಕು ಡಿವೈಎಫ್ಐ ವತಿಯಿಂದ ಉಳ್ಲಾಲ ಸಮುದಾಯ ಆರೋಗ್ಯ ಕೇಂದ್ರಕ್ಕೆ ನುರಿತ ವೈದ್ಯರು, ಸಿಬ್ಬಂದಿ ಸಹಿತ ಮೂಲಭೂತ ಸೌಲಭ್ಯ ಒದಗಿಸಬೇಕು ಎಂದು ಒತ್ತಾಯಿಸಿ ಉಳ್ಲಾಲ ಸಮುದಾಯ ಆರೋಗ್ಯ ಕೇಂದ್ರದ ಮುಂಭಾಗದಲ್ಲಿ ಸೋಮವಾರ ನಡೆದ ಪ್ರತಿಭಟನೆ ಯಲ್ಲಿ ಮಾತನಾಡಿದರು.
ಈ ಹಿಂದೆ ತೊಕ್ಕೋಟ್ಟುವಿನಲ್ಲಿ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಉಳ್ಳಾಲ ಕೆ ಸಮುದಾಯ ಆರೋಗ್ಯ ಕೇಂದ್ರ ಬೇಕು ಎಂದು ಹೋರಾಟ ಮಾಡಿದ್ದೆವು.ಈಗ ಆರೋಗ್ಯ ಕೇಂದ್ರ ಸ್ಥಾಪನೆ ಆದರೂ ವ್ಯವಸ್ಥೆ ಸರಿಯಾಗಿಲ್ಲ. ಈ ಕೇಂದ್ರ ದಲ್ಲಿ 30 ಹಾಸಿಗೆ ವಿಭಾಗ ಇದೆ. ರೋಗಿಗಳಿಗೆ ಬಿಸಿ ನೀರು ನೀಡುವ ವ್ಯವಸ್ಥೆ ಇಲ್ಲ.ಸರಿಯಾದ ಔಷಧಿ ಇರುವುದಿಲ್ಲ.ಔಷಧಿ ಇದ್ದರೆ ವೈದ್ಯರು ಇಲ್ಲ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.ಬಾಣಂತಿ ಮಹಿಳೆಯರಿಗೆ ತಾಯಿ ಕಾರ್ಡ್ ವಿತರಣೆ ಮಾಡಲು ತೀರ್ವ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ. ಈ ಆರೋಗ್ಯ ಕೇಂದ್ರದಲ್ಲಿ ಮೂಲಭೂತ ಸೌಕರ್ಯ ಒದಗಿಸಿ ಬಡವರ ಆರೋಗ್ಯ ಕಾಪಾಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಪ್ರತಿಭಟನೆ ನಡೆಯುತ್ತಿದ್ದ ಸ್ಥಳಕ್ಕೆ ಆಗಮಿಸಿದ ತಾಲೂಕು ಆರೋಗ್ಯಾಧಿಕಾರಿ ಸುಜಯ್ ಅವರಿಗೆ ಮನವಿ ಅರ್ಪಿಸಿದ ಪ್ರತಿಭಟನಾ ನಿರತ ಡಿವೈಎಫ್ಐ ಮುಖಂಡರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಇರುವ ಮೂಲಭೂತ ಸಮಸ್ಯೆ ಗಳಿಗೆ ಶೀಘ್ರ ಪರಿಹಾರ ಒದಗಿಸುವ ಮಾಡಬೇಕು. ಸರ್ಕಾರದಿಂದ ಆಗಬೇಕಾಗದ ಕೆಲಸ ಗಳ ಬಗ್ಗೆ ಸರ್ಕಾರದ ಗಮನ ಸೆಳೆಯುತ್ತೇವೆ. ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ತಾಲೂಕು ಆರೋಗ್ಯಾಧಿಕಾರಿ ಸುಜಯ್ ಅವರು,ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನ ಸೆಳೇದು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು
ಪ್ರತಿಭಟನೆಯಲ್ಲಿಸಿಪಿಐಎಂ, ರೈತ ಸಂಘದ ಮುಖಂಡ ಕೃಷ್ಣಪ್ಪ ಸಾಲಿಯಾನ್, ಸಿಐಟಿಯು ಜಿಲ್ಲಾ ನಾಯಕಿ, ಪದ್ಮಾವತಿ, ಡಿವೈಎಫ್ಐ ಉಳ್ಳಾಲ ತಾಲೂಕು ಉಪಾಧ್ಯಕ್ಷ ರಝಾಕ್ ಮುಡಿಪು, ಜೊತೆ ಕಾರ್ಯದರ್ಶಿ ಅಮೀರ್ ಉಳ್ಳಾಲ ಬೈಲ್, ಜಿಲ್ಲಾ ಉಪಾಧ್ಯಕ್ಷ ರಫೀಕ್ ಹರೇಕಳ, ಮುಖಂಡರಾದ ಅಸ್ಬಾಕ್ ಅಲೇಕಳ, ಹರೇಕಳ ಗ್ರಾಮ ಸಮಿತಿ ಅಧ್ಯಕ್ಷ ಇಕ್ಬಾಲ್ ಕೆ.ಎಚ್, ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಸುಕುಮಾರ್ ತೊಕ್ಕೊಟ್ಟು,ಪದ್ಮಾವತಿ ಶೆಟ್ಟಿ,ಉಳ್ಳಾಲ ತಾಲೂಕು ಕಾರ್ಯದರ್ಶಿ ಜಯಂತ್ ನಾಯ್ಕ್,ಮುಖಂಡರಾದ ಕೆ.ಎಚ್. ಹಮೀದ್,ಇಬ್ರಾಹಿಂ ಮದಕ ,ಜನಾರ್ಧನ, ಮುನ್ನೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಮಹಾಬಲ ಟಿ ದೆಪ್ಪೇಲಿಮಾರ್, ಹರೇಕಳ ಗ್ರಾಮ ಪಂಚಾಯತ್ ಸದಸ್ಯರಾದ ಅಶ್ರಫ್ ಹರೇಕಳ, ಸಿಐಟಿಯು ತೊಕ್ಕೊಟ್ಟು ಆಟೋ ಚಾಲಕ ಸಂಘದ ಅಧ್ಯಕ್ಷರಾದ ದಯಾನಂದ ಉಪಸ್ಥಿತರಿದ್ದರು.
ಡಿವೈಎಫ್ಐ ಉಳ್ಳಾಲ ತಾಲೂಕು ಕಾರ್ಯದರ್ಶಿ ರಿಝ್ವಾನ್ ಹರೇಕಳ ಸ್ವಾಗತಿಸಿ ಜೊತೆ ಕಾರ್ಯದರ್ಶಿ ಸುನೀಲ್ ತೇವುಲ ಧನ್ಯವಾದ ನೀಡಿದರು.
ಕಾರ್ಯದರ್ಶಿ ಅಮೀರ್ ಉಳ್ಳಾಲ, ಅಶ್ಫಾಕ್ ಅಲೇಕಳ ಕಾರ್ಯಕ್ರಮ ನಿರೂಪಿಸಿದರು. ಉಳ್ಳಾಲ ಇನ್ಸ್ಪೆಕ್ಟರ್ ಬಾಲಕೃಷ್ಣ ನೇತೃತ್ವದಲ್ಲಿ ಪೊಲೀಸ್ ಭದ್ರತೆ ಒದಗಿಸಲಾಗಿತ್ತು.
ಸಮುದಾಯ ಆರೋಗ್ಯ ಕೇಂದ್ರ ವ್ಯವಸ್ಥೆ ಇದೆ ಸದಾಶಿವ ಉಳ್ಳಾಲ್
ಉಳ್ಳಾಲ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರ ಮಾದರಿ ಆರೋಗ್ಯ ಕೇಂದ್ರವಾಗಿ ಮಾರ್ಪಟ್ಟಿದ್ದು, ಎಲ್ಲಾ ಸೌಲಭ್ಯಗಳು ಇಲ್ಲಿ ರೋಗಿಗಳಿಗೆ ಲಭಿಸುತ್ತದೆ. ಇಂತಹ ಆರೋಗ್ಯ ಕೇಂದ್ರ ಸುರತ್ಕಲ್, ಮೂಡಬಿದಿರೆ ಯಾವುದೇ ಭಾಗದಲ್ಲೂ ಇಲ್ಲ. ಆಂಬುಲೆನ್ಸ್ ಹಾಗೂ ವೈದ್ಯರ ವ್ಯವಸ್ಥೆ ಕೂಡ ಇದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ಉಳ್ಳಾಲ್ ಹೇಳಿದರು.
ಅವರು ತೊಕ್ಕೋಟ್ಟು ವಿನಲ್ಲಿರುವ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಅಲ್ಲದೇ ಉಚಿತವಾಗಿ ವೈದ್ಯರ ಚಿಕಿತ್ಸೆ, ಔಷಧಿ ಜೊತೆಗೆ ಎಲ್ಲಾ ಸವಲತ್ತುಗಳು ಕೂಡಾ ಇವೆ.ಇಲ್ಲಿಗೆ ಪ್ರತಿದಿನ 200 ಕ್ಕೂ ಹೆಚ್ಚು ರೋಗಿಗಳು ಬರುತ್ತಾರೆ.ಬಂದ ರೋಗಿಗಳಿಗೆ ಚಿಕಿತ್ಸೆ ಕೂಡಾ ಲಭಿಸುತ್ತದೆ.ಇಲ್ಲಿಗೆ ಆಕ್ಸಿಜನ್ ಹಾಗೂ ಕುಡಿಯುವ ನೀರಿನ ಯೋಜನೆ ಗೆ ಕ್ರಮ ಕೈಗೊಳ್ಳಲಾಗಿದೆ. ಶಾಸಕರು ಕೂಡಾ ಈ ಸಮುದಾಯ ಕೇಂದ್ರ ದ ಅಭಿವೃದ್ಧಿ ಗೆ ಕೆಲವು ಯೋಜನೆಗಳನ್ನು ರೂಪಿಸಿದ್ದು, ಬಾಕಿ ಉಳಿದಿರುವ ಕಾರ್ಯಗಳನ್ನು ಸರ್ಕಾರ ಮಾಡಿಯೇ ಮಾಡುತ್ತದೆ. ರೋಗಿಗಳಿಗೆ ಶೀಘ್ರ ಸ್ಪಂದನ ಮಾಡುವ ಕಾರ್ಯ ದಲ್ಲೂ ಯಾವುದೇ ಕೊರತೆ ಆಗಿಲ್ಲ ಎಂದು ಹೇಳಿದರು.
ಸುದ್ದಿ ಗೋಷ್ಠಿ ಯಲ್ಲಿ ದೀಪಕ್ ಪಿಲಾರ್, ಸುರೇಖ, ಚಂದ್ರಿಕಾ ರೈ ವಿಶಾಲ್ ಕೊಲ್ಯ, ಪುರುಷೋತ್ತಮ ಶೆಟ್ಟಿ,ಆಳ್ವಿನ್ ಡಿಸೋಜ ಉಪಸ್ಥಿತರಿದ್ದರು.