×
Ad

ಕರಾಟೆ ಕಾರ್ನಿವಲ್: ʼನೋಬಲ್ ವರ್ಲ್ಡ್ ರೆಕಾರ್ಡ್ʼ ದಾಖಲಿಸಿದ ಮೂಡುಬಿದಿರೆಯ ಮಹಮ್ಮದ್ ನದೀಂ

Update: 2024-01-16 17:11 IST

ಮೂಡುಬಿದಿರೆ: 540 ಹಂಚುಗಳನ್ನು 1 ನಿಮಿಷ 57 ಸೆಕೆಂಡುಗಳಲ್ಲಿ ಎರಡೂ ಕೈಗಳಿಂದ ಪುಡಿಗಟ್ಟುವ ಮೂಲಕ ಕರಾಟೆ ಪಟು ಮಹಮ್ಮದ್ ನದೀಂ ʼನೋಬಲ್ ವರ್ಲ್ಡ್ ರೆಕಾರ್ಡ್ʼ ಮಾಡಿದ್ದಾರೆ.

ʼನೋಬಲ್ ವರ್ಲ್ಡ್ ರೆಕಾರ್ಡ್ʼ ಸಂಸ್ಥೆಯು ವಿವಿಧ ಕ್ಷೇತ್ರಗಳಲ್ಲಿ ನಡೆಯುವ ಸ್ಪರ್ಧೆಗಳ ಫಲಿತಾಂಶಗಳನ್ನು ದಾಖಲೀಕರಿಸಿ ʼನೋಬಲ್ ವರ್ಲ್ಡ್ ರೆಕಾರ್ಡ್ʼ ಪ್ರಶಸ್ತಿಗೆ ಆಯ್ಕೆ ಮಾಡುವ ಸಂಸ್ಥೆಯಾಗಿದೆ.

ಇಲ್ಲಿನ ಸಮಾಜ ಮಂದಿರದಲ್ಲಿ ಶನಿವಾರ ಶೋರಿನ್ ರಿಯು ಕರಾಟೆ ಅಸೋಸಿಯೇಷನ್ ಸಹಭಾಗಿತ್ವದಲ್ಲಿ ನಡೆದ ಕರಾಟೆ ಕಾರ್ನಿವಲ್‌ನಲ್ಲಿ ಮಹಮ್ಮದ್ ನದೀಂ ಈ ಸಾಧನೆ ಮಾಡಿದ್ದಾರೆ.

ಕೈಯಲ್ಲಿ ಮೊಟ್ಟೆಯನ್ನು ಹಿಡಿದು 58 ಸೆಕೆಂಡುಗಳಲ್ಲಿ 156 ಹೆಂಚುಗಳನ್ನು ಒಡೆಯುವ ಮೂಲಕ ಪ್ರಖ್ಯಾತ್ ಹೊಸ ದಾಖಲೆ ಸ್ಥಾಪಿಸಿದರೆ, ಅನುಷಾ ಅರುಣ್ 11 ನಿಮಿಷ 11 ಸೆಕೆಂಡುಗಳಲ್ಲಿ 1 ಕೀ.ಮೀ ಸೈಡ್ ಕಿಕ್ ನೀಡುವ ಮೂಲಕ ಹೊಸ ದಾಖಲೆ ಬರೆದರು.

ಸರ್ಫರಾಝ್ 25 ನಿಮಿಷ 45 ಸೆಕೆಂಡುಗಳಲ್ಲಿ 2 ಕಿ.ಮೀ ದೂರ ಫ್ರೆಂಟ್‌ ಕಿಕ್ ನೀಡುವ ಮೂಲಕ ಹಳೆಯ ದಾಖಲೆಯನ್ನು ಮುರಿದರು. ಉಳ್ಳಾಲದ ಮಹಮ್ಮದ್ ಅಷ್ಪಾಕ್ 1 ನಿಮಿಷದಲ್ಲಿ 408 ಹೆಂಚುಗಳನ್ನು ದೇಹದಲ್ಲಿ ಒಡೆಸಿಕೊಂಡು ವಿಶ್ವ ದಾಖಲೆ ಸ್ಥಾಪಿಸಿದರು.

ಅಬೂಬಕ್ಕರ್ ಶಾಹಿನ್ 2 ಕೆಜಿ ಡಂಬಳನ್ನು ಹಿಡಿದು 1 ನಿಮಿಷಕ್ಕೆ 307 ಪಂಚ್ ಮಾಡುವ ಮೂಲಕ ಹೊಸ ವಿಶ್ವ ದಾಖಲೆ ಬರೆದರು. ಶಾಹಾನ್ ಮಹಮ್ಮದ್ ಪಂಚಿಂಗ್ ಬ್ಯಾಗ್ ಗೆ 1 ನಿಮಿಷಕ್ಕೆ 392 ಪಂಚ್ ಅನ್ನು ಒಡೆಯುವ ಮೂಲಕ ವಿಶ್ವ ದಾಖಲೆ ಮಾಡಿದರು.

ಪ್ರೆಸ್ಟೇಜ್ ಇಂಟರ್‌ನ್ಯಾಷನಲ್ ಸ್ಕೂಲ್‌ನ ಶಫೀನ್ ಮುಸ್ತಾಫ್ 2.30 ಗಂಟೆಗಳ ಕಾಲ ನೀರಿನಲ್ಲಿ ತೇಲಿ ಆಂದ್ರಪ್ರದೇಶದ ವಿದ್ಯಾರ್ಥಿಯೊಬ್ಬನ ಹೆಸರಲ್ಲಿದ್ದ 2.20 ಗಂಟೆಗಳ ಹಳೆಯ ದಾಖಲೆಯನ್ನು ಅಳಿಸಿದರು. ಮಹಮದ್ ಆರಿಷ್ 1 ನಿಮಿಷಕ್ಕೆ 167 ನಾನ್ ಸ್ಟಾಪ್ ಫ್ರಂಟ್ ಕಿಕ್ ಹೊಡೆದು ವಿಶ್ವ ದಾಖಲೆ ಬರೆದರು.

ಮಂಗಳೂರಿನ ಇಲಾಫ ಅಬ್ದುಲ್ ಖಾದಿರ್ 1 ನಿಮಿಷಕ್ಕೆ 387 ಪಂಚ್ ಮಾಡಿ ವಿಶ್ವ ದಾಖಲೆ ಬರೆದರು. ಆಯುಷ್ ಕುಮಾರ್ ಪಂಚಿಂಗ್ ಬ್ಯಾಗ್ ಗೆ 1 ನಿಮಿಷಕ್ಕೆ 189 ಕಿಕ್ ಮಾಡುವ ಮೂಲಕ ವಿಶ್ವ ದಾಖಲೆ ಮಾಡಿದರು.

ಕರಾಟೆಪಟುಗಳ ಗುಂಪು ದಾಖಲೆಯಲ್ಲಿ 1 ರಿಂದ 10ನೇ ತರಗತಿಯವರೆಗಿನ 270 ಕ್ರೀಡಾಪಟುಗಳು ಏಕಕಾಲದಲ್ಲಿ ಹಣೆಯಿಂದ ಹೆಂಚು ಒಡೆಯುವುದು, ಮುಷ್ಠಿ ಪ್ರಹಾರ, ಕೈಯಲ್ಲಿ ಪಂಚ್ ಸಹಿತ ಕರಾಟೆಯ ವಿವಿಧ ರೂಪಗಳನ್ನ ಪ್ರದರ್ಶಿಸಿ ಗುಂಪು ದಾಖಲೆಯನ್ನು ತಮ್ಮದಾಗಿಸಿಕೊಂಡರು.

ಈ ದಾಖಲೆಯನ್ನು ʼನೋಬಲ್ ವರ್ಲ್ಡ್ ರೆಕಾರ್ಡ್ʼ ಕರ್ನಾಟಕದ ನಿರ್ದೇಶಕರಾದ ಹಂಶಿ ಕೃಷ್ಣ ಮೂರ್ತಿಯವರು ಪರಿಶೀಲಿಸಿ ದೃಢ ಪಡಿಸಿದರು. ಶೊರಿನ್ ರಿಯೊ ಅಸೋಸಿಯೇಶನ್ ನ ಅಧ್ಯಕ್ಷರಾದ ಅಬುಲ್ ಅಲ್ ಅವರು ರೆಕಾರ್ಡ್ ಮಾಡಿದವರನ್ನು ಸನ್ಮಾನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News