×
Ad

ಭಾರತ್ ರಂಗ್ ಮಹೋತ್ಸವ್‌ದಲ್ಲಿ ತುಳು ನಾಟಕ ಪ್ರದರ್ಶನ

Update: 2024-02-08 21:25 IST

ಉಡುಪಿ, ಫೆ.8: ಹೊಸದಿಲ್ಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್‌ಎಸ್‌ಡಿ) ಆಯೋಜಿಸುವ ‘ಭಾರತ್ ರಂಗ್ ಮಹೋತ್ಸವ’ ದಲ್ಲಿ ತುಳು ನಾಟಕವೊಂದು ಪ್ರದರ್ಶನಗೊಳ್ಳಲಿದೆ. ಮಣಿಪಾಲದ ಸಂಗಮ ಕಲಾವಿದೆರ್ ತಂಡದ ತುಳು ನಾಟಕ ‘ಸೊರದಾಂತಿ ನಲಿಕೆ’ ಪ್ರತಿಷ್ಠಿತ ಅಂತಾರಾಷ್ಟ್ರೀಯ ರಂಗೋತ್ಸವದಲ್ಲಿ ಪ್ರದರ್ಶನಗೊಳ್ಳಲಿದೆ.

ನಾಟಕ ಅನುವಾದಕ ಸಂತೋಷ್ ಶೆಟ್ಟಿ ಹಿರಿಯಡ್ಕ ಅವರು ಇಂದು ಇಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿ ದರು. ಈ ರಂಗೋತ್ಸವದಲ್ಲಿ ನಾಟಕ ಪ್ರದರ್ಶಿಸಲು ಕರ್ನಾಟಕದ ನಾಲ್ಕು ತಂಡಗಳು ಮಾತ್ರ ಆಯ್ಕೆಯಾಗಿದ್ದು, ಇವುಗಳಲ್ಲಿ ಸಂಗಮ ಕಲಾವಿದೆರ್ ತಂಡವೂ ಒಂದಾಗಿದೆ ಎಂದವರು ತಿಳಿಸಿದರು.

ತಂಡದ ತುಳು ನಾಟಕದ ಪ್ರದರ್ಶನ ಫೆ.13ರಂದು ಹೊಸದಿಲ್ಲಿಯ ಮೇಘದೂತ ಸಭಾಂಗಣದಲ್ಲಿ ನಡೆಯಲಿದೆ. ‘ಸೊರದಾಂತಿ ನಲಿಕೆ’ ಆಸಿಫ್ ಕರೀಮ್ ಬೊಯ್ ಅವರ ಪ್ರಸಿದ್ಧ ಮನೋವೈಜ್ಞಾನಿಕ ನಾಟಕ ‘ದಿ ಡಂಬ್ ಡ್ಯಾನ್ಸರ್’ ನಾಟಕದ ಅನುವಾದವಾಗಿದೆ ಎಂದು ಸಂತೋಷ್ ಶೆಟ್ಟಿ ತಿಳಿಸಿದರು.

ವಿವೇಕ-ಅವಿವೇಕ, ವಾಸ್ತವ-ಭ್ರಮೆಗಳ ನಡುವೆ ನಡೆಯುವ ಸಂಘರ್ಷದ ಪ್ರತಿರೂಪ. ಮನುಷ್ಯನ ಭಾವನಾತ್ಮಕ ಲೋಕದಲ್ಲಿ ತರ್ಕಕ್ಕೆ ಸಿಗದ ಅನೇಕ ವಿಚಾರಗಳನ್ನು ಈ ನಾಟಕ ಚಿತ್ರೀಕರಿಸಲು ಪ್ರಯತ್ನಿಸುತ್ತದೆ. ನಾಟಕವನ್ನು ಕನ್ನಡಕ್ಕೆ ಕೆ.ಆರ್.ಓಂಕಾರ್ ಅನುವಾದಿಸಿದವರೆ, ತುಳು ಅನುವಾದ ಸಂತೋಷ ಶೆಟ್ಟಿ ಹಿರಿಯಡ್ಕ. ನಾಟಕದ ನಿರ್ದೇಶಕ ಭುವನ್ ಮಣಿಪಾಲ್.

ಸಂಗಮ ಕಲಾವಿದೆರ್ ತಂಡ ನಾಲ್ಕನೇ ಬಾರಿಗೆ ಎನ್‌ಎಸ್‌ಡಿಯ ರಂಗೋತ್ಸವದಲ್ಲಿ ಪಾಲ್ಗೊಳ್ಳುತ್ತಿದೆ. 2012ರಲ್ಲಿ ಕರ್ಣ ಭಾರ, 2018ರಲ್ಲಿ ವಾಲಿವಧೆ ತುಳು ನಾಟಕಗಳನ್ನು ಪ್ರದರ್ಶಿಸಿದ್ದರೆ, 2019ರಲ್ಲಿ ವೀ ಟೇಚ್ ಲೈಫ್ ಸರ್ ಕನ್ನಡ ನಾಟಕವನ್ನು ಅಲ್ಲಿ ಪ್ರದರ್ಶಿಸಿತ್ತು ಎಂದರು.

ತಮ್ಮ ತಂಡ ಪ್ರತಿ ವರ್ಷ ಹೊಸ ನಾಟಕದ ಪ್ರಯೋಗದಲ್ಲಿ ತನ್ನನ್ನು ತೊಡಗಿಸಿಕೊಳ್ಳುತ್ತದೆ. ತುಳುಕೂಟ ನಡೆಸುವ ಕೆಮ್ತೂರು ತುಳು ನಾಟಕ ಸ್ಪರ್ಧೆಯಲ್ಲಿ ಎಂಟು ಬಾರಿ ಪ್ರಥಮ ಬಹುಮಾನವನ್ನು ಸಂಗಮ ಕಲಾವಿದೆರ್ ಗೆದ್ದಕೊಂಡಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಂಗಮ ಕಲಾವಿದೆರ್‌ನ ಅಧ್ಯಕ್ಷ ರಾಘವೇಂದ್ರ ನಾಯಕ್ ಮಣಿಪಾಲ, ನಿರ್ದೇಶಕ ಭುವನ್ ಮಣಿಪಾಲ, ಶ್ರೇಯಸ್ ಕೋಟ್ಯಾನ್ ಹಾಗೂ ಶ್ರೀಪತಿ ಪೆರಂಪಳ್ಳಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News