ಮಂಗಳೂರು: ಅತಿಥಿ ಉಪನ್ಯಾಸಕ ಸಮಾವೇಶ
ಮಂಗಳೂರು: ದ.ಕ. ಮತ್ತು ಉಡುಪಿ ಜಿಲ್ಲಾ ಘಟಕದ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ನೇತೃತ್ವದಲ್ಲಿ ಅತಿಥಿ ಉಪನ್ಯಾಸಕರ ಸಮಾವೇಶವು ಶನಿವಾರ ನಗರದ ರಾಜ್ಯ ಸರಕಾರಿ ನೌಕರರ ಭವನದಲ್ಲಿ ನಡೆಯಿತು.
ಸಮಾವೇಶದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಕಾಲೇಜು ಶಿಕ್ಷಣ ಇಲಾಖೆಯ ನಿವೃತ್ತ ಹೆಚ್ಚುವರಿ ನಿರ್ದೇಶಕ ಪ್ರೊ. ರಾಜಶೇಖರ್ ಹೆಬ್ಬಾರ್ ಸಿ. ‘ಅತಿಥಿ ಉಪನ್ಯಾಸಕರು ಅನೆಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸಮಸ್ಯೆಗಳ ಪರಿಹಾರಕ್ಕೆ ಒಗ್ಗಟ್ಟಿನಿಂದ ಹೋರಾಟ ಮಾಡಬೇಕಿದೆ. ಅತಿಥಿ ಉಪನ್ಯಾಸಕರ ಶ್ರೇಯೋಭಿವೃದ್ಧಿಗೆ ನೀತಿ ನಿಯಮಗಳನ್ನು ಜಾರಿಗೆ ತರುವ ಅಗತ್ಯವಿದೆ ಎಂದರು.
ಅತಿಥಿ ಉಪನ್ಯಾಸಕರಿಗೆ ಸಮಸ್ಯೆ ತುಂಬಾ ಇರಬಹುದು. ಆದರೆ ವಿದ್ಯಾರ್ಥಿಗಳ ಓದಿನ ಮೇಲೆ ಅದು ಯಾವ ರೀತಿಯ ಪರಿಣಾಮ ಬೀರದಂತೆ ಎಚ್ಚರ ವಹಿಸಬೇಕು. ಗೆಲುವಿನ ಕಡೆ ಹೆಜ್ಜೆ ಹಾಕುವಾಗ ಸೋಲಿನ ಬಗ್ಗೆಯೂ ತಿಳಿದಿರಬೇಕು. ಆವಾಗ ಮಾತ್ರ ಗುರಿಯನ್ನು ಮುಟ್ಟಲು ಸಾಧ್ಯ ಎಂದು ಪ್ರೊ. ರಾಜಶೇಖರ ಹೆಬ್ಬಾರ್ ತಿಳಿಸಿದರು
ಅತಿಥಿ ಉಪನ್ಯಾಸಕ ಸಂಘದ ರಾಜ್ಯಾಧ್ಯಕ್ಷ ಡಾ. ಹನುಮಂತಗೌಡ ಆರ್. ಕಲ್ಮನಿ, ರಾಜ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ಡಾ. ಪೀಟರ್ ವಿನೋದ ಚಂದ, ಸಂಘದ ಜಿಲ್ಲಾ ಗೌರವಾಧ್ಯಕ್ಷ ಡಾ. ಎಸ್.ಆರ್ ಹರೀಶ್ ಆಚಾರ್ಯ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಾಧವ ಕೊಜಪ್ಪೆ, ಶಿವಮೊಗ್ಗ ಜಿಲ್ಲಾಧ್ಯಕ್ಷ ರಮೇಶ್ ಬರ್ಗೆ ಮತ್ತಿತರರು ಉಪಸ್ಥಿತರಿದ್ದರು.
ಅತಿಥಿ ಶಿಕ್ಷಕರು ವೆತನ ಹೆಚ್ಚಿಸುವಂತೆ ಕೋರಿ ನಡೆಸಿದ ಪಾದಯಾತ್ರೆ ಹೋರಾಟದಲ್ಲಿ ಭಾಗವಹಿಸಿದ ಶಿಕ್ಷಕರಿಗೆ ಸ್ಮರಣಿಕೆಗಳನ್ನು ನೀಡಲಾಯಿತು.
ಸಂಘದ ಮುಖಂಡರುಗಳಾದ ಮನಮೋಹನ್, ಧೀರಜ್ ಕುಮಾರ್ ಉಳ್ಳಾಲ್, ಕೃಷ್ಣ ಮುಗೇರ, ಡಾ. ಶಾಹಿದಾ ಜಹಾನ್, ಗೀತಾ, ನೋಬರ್ಟ್ ವಿಲಿಯಂ ಗೋವಿಯಸ್, ಗಾಯತ್ರಿ ಜಿ., ಪಂಜು ಪಾಲ್ಗೊಂಡಿದ್ದರು. ಶಕುಂತಳಾ ಕಾರ್ಯಕ್ರಮ ನಿರೂಪಿಸಿದರು.