×
Ad

ಸಂತ ಜೆರೋಸಾ ಶಾಲೆ: ಮಂಗಳೂರಿನ ಸಮಾನ ಮನಸ್ಕ ಸಂಘಟನೆಗಳ ನಿಯೋಗ ಭೇಟಿ

Update: 2024-02-14 20:12 IST

ಮಂಗಳೂರು: ಸಂತ ಜೆರೋಸಾ ಶಾಲೆಯಲ್ಲಿ ಶಾಸಕ ವೇದವ್ಯಾಸ ಕಾಮತ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯ ಹಿನ್ನಲೆಯಲ್ಲಿ ಮಂಗಳೂರಿನ ಸಮಾನ ಮನಸ್ಕ ಸಂಘಟನೆಗಳು, ಪ್ರಮುಖ ನಾಗರಿಕ ಪ್ರತಿನಿಧಿಗಳ ನಿಯೋಗವು ಇಂದು ಶಾಲೆಗೆ ಭೇಟಿ ನೀಡಿ ಆಡಳಿತ ಮಂಡಳಿಯೊಂದಿಗೆ ಚರ್ಚಿಸಿತು.

ಮತೀಯ ದ್ವೇಷಕ್ಕೆ ಗುರಿಯಾದ ಶಾಲೆಯ ಶಿಕ್ಷಕ ವೃಂದ ಮತ್ತು ಆಡಳಿತ ಮಂಡಳಿಗೆ ನೈತಿಕ ಬೆಂಬಲ ವ್ಯಕ್ತಪಡಿಸಿತು. ಶಾಸಕರಾದ ವೇದವ್ಯಾಸ ಕಾಮತ್, ಭರತ್ ಶೆಟ್ಟಿಯ ಪಕ್ಷಪಾತದ, ಮತೀಯ ತಾರತಮ್ಯದ, ದುರುದ್ದೇಶಪೂರ್ವಕ ನಡೆಯನ್ನು ಖಂಡಿಸಿತು.

ಶಿಕ್ಷಕಿ ಧರ್ಮನಿಂದನೆ ಮಾಡಿದ್ದಾರೆ ಎಂದು ಅಪರಿಚಿತ ಮಹಿಳೆ ಹರಿಯಬಿಟ್ಟ ವಾಯ್ಸ್ ರೆಕಾರ್ಡ್‌ನ್ನು ಮುಂದಿಟ್ಟು ಶಿಕ್ಷಕಿಯ ಮೇಲೆ ಆರೋಪ ಮಾಡಲಾಗಿದೆ. ಆ ಬಳಿಕ ಇಬ್ಬರು ಶಾಸಕರ ಬೆಂಬಲಿತ ಕೋಮು ಶಕ್ತಿಗಳ ಪಿತೂರಿ ಈ ಘಟನೆಯ ಹಿಂದಿರುವುದು ಎದ್ದು ಕಾಣುವಂತಿದೆ. ಆರೋಪಿಸಿದ ಮಹಿಳೆಯ ಮನೆಯ ಮಕ್ಕಳು ಈ ಶಾಲೆಯಲ್ಲಿ ಕಲಿಯುತ್ತಿರುವುದು ನಿಜವೇ? ಎಂಬುದು ತನಿಖೆಯಿಂದ ಬಹಿರಂಗಗೊಳ್ಳಬೇಕಿದೆ. ಅಲ್ಲದೆ ಶಾಸಕರು ಮಧ್ಯಪ್ರವೇಶಿಸಿ ನಿಯಮ ಪ್ರಕಾರ ಕ್ರಮ ಜರಗುವಂತೆ ವ್ಯವಸ್ಥೆ ಮಾಡಬೇಕಿತ್ತು. ಆದರೆ, ಶಾಸಕರು ಪ್ರಚೋದನೆ ನೀಡಿ ಸಂಘಪರಿವಾರದ ಪ್ರತಿನಿಧಿಗಳಂತೆ ವರ್ತಿಸಿದ್ದಾರೆ. ಶಾಸಕರ ತಾಳಕ್ಕೆ ತಕ್ಕಂತೆ ಡಿಡಿಪಿಐ ಕೂಡ ಕುಣಿದಿದ್ದಾರೆ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.

ಶಾಸಕರ ನಡೆ ಅಪಾಯಕಾರಿಯಾಗಿದ್ದು, ಅವರ ಮೇಲೆ ದಾಂಧಲೆ, ಗೂಂಡಾಗಿರಿ, ಬೆದರಿಕೆಯ ಜೊತೆಗೆ ಕೋಮುಗಲಭೆಗೆ ಪ್ರಚೋದನೆ ನೀಡಿದ ಆರೋಪದಡಿ ಪ್ರಕರಣ ದಾಖಲಿಸಿ ತನಿಖೆ ನಡೆಸಬೇಕು. ಅಲ್ಲದೆ ಡಿಡಿಪಿಐಯನ್ನು ಈ ಪ್ರಕರಣದ ತನಿಖಾ ಪ್ರಕ್ರಿಯೆಯ ಜವಾಬ್ದಾರಿಯಿಂದ ಹೊರಗಿಡಬೇಕು ಮತ್ತವರ ಮೇಲೆ ಕ್ರಮ ಜರುಗಿಸಬೇಕು ಎಂದು ಸಮಿತಿ ಆಗ್ರಹಿಸಿದೆ.

ಪ್ರಕರಣದ ಸತ್ಯಾಸತ್ಯತೆ ಹೊರತರಲು ನಿವೃತ್ತ ಐಎಎಸ್ ಅಥವಾ ಐಪಿಎಸ್, ನ್ಯಾಯವಾದಿಗಳ ನೇತೃತ್ವದ ಸತ್ಯ ಶೋಧನಾ ಸಮಿತಿಯನ್ನು ಸರಕಾರ ರಚಿಸಬೇಕು ಎಂದು ಮನವಿ ಮಾಡಿದೆ.

ಶಾಸಕರುಗಳ ಮೇಲೆ ಸಭಾಧ್ಯಕ್ಷರು ಕ್ರಮಕೈಗೊಳ್ಳಬೇಕು, ಶಾಸಕರಿಗೆ ಶಾಸನ ಸಭೆಯ ಸದಸ್ಯ ಜವಾಬ್ದಾರಿ ಕುರಿತು ವಿಶೇಷ ತರಬೇತಿಗೆ ಕ್ರಮ ಕೈಗೊಳ್ಳಲು ಸ್ಪೀಕರ್ ಯುಟಿ ಖಾದರ್‌ಗೆ ಮನವಿ ನೀಡಲು ಸಮಿತಿ ನಿರ್ಧರಿಸಿದೆ ಎಂದು ನಿಯೋಗ ತಿಳಿಸಿದೆ.

ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಸಾಮಾಜಿಕ ಕಾರ್ಯಕರ್ತರಾದ ಎಂಜಿ ಹೆಗ್ಡೆ, ಮಂಜುಳಾ ನಾಯಕ್, ನ್ಯಾಯವಾದಿಗಳಾದ ಯಶವಂತ ಮರೋಳಿ, ದಿನೇಶ್ ಹೆಗ್ಡೆ ಉಳೆಪಾಡಿ, ಕಾಂಗ್ರೆಸ್ ಮುಖಂಡ ಪಿವಿ ಮೋಹನ್, ಮಾಜಿ ಮೇಯರ್ ಕೆ.ಅಶ್ರಫ್, ಮಾಜಿ ಉಪಮೇಯರ್ ಮುಹಮ್ಮದ್ ಕುಂಜತ್ತಬೈಲ್, ಹಿರಿಯ ಕಾರ್ಮಿಕ ನೇತಾರರಾದ ಬಾಲ ಕೃಷ್ಣ ಶೆಟ್ಟಿ, ಸಿಪಿಎಂ ಮುಖಂಡ ಸುನಿಲ್ ಕುಮಾರ್ ಬಜಾಲ್, ಜನವಾದಿ ಮಹಿಳಾ ಸಂಘಟನೆಯ ಜಯಂತಿ ಬಿ.ಶೆಟ್ಟಿ, ಭಾರತಿ ಬೋಳಾರ, ವಿವಿಧ ಸಂಘಟನೆಗಳ ಸ್ಟಾನಿ ಅಳ್ವಾರಿಸ್, ಎರಿಕ್ ಲೋಬೊ, ಅನಿಲ್ ಲೋಬೊ, ಸಮರ್ಥ್ ಭಟ್, ಯೋಗಿಶ್ ನಾಯಕ್, ನೆಲ್ಸನ್ ರೋಚ್, ಡಿವೈಎಫ್‌ಐ ಜಿಲ್ಲಾ ಮುಖಂಡರಾದ ಬಿಕೆ ಇಮ್ತಿಯಾಝ್, ಸಂತೋಷ್ ಬಜಾಲ್, ಯೋಗಿತಾ, ನಿವೃತ್ತ ಪ್ರಾಧ್ಯಾಪಕರಾದ ಡಾ. ಶಿವರಾಮ ಶೆಟ್ಟಿ, ಡಾ. ವಸಂತ ಕುಮಾರ್ ನಿಯೋಗದಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News