×
Ad

ಮಡಿಯಾಲ ನಾರಾಯಣ ಭಟ್ ಹುಟ್ಟೂರು ಅಳಿಕೆಯಲ್ಲಿ ಉಚಿತ ಸನಿವಾಸ ಉನ್ನತ ಶಿಕ್ಷಣ ಕೇಂದ್ರ : ಸದ್ಗುರು ಶ್ರೀ ಮಧುಸೂದನ ಸಾಯಿ

Update: 2024-02-15 22:32 IST

ಮಂಗಳೂರು: ಅಳಿಕೆ ಮತ್ತು ಮುದ್ದೇನಹಳ್ಳಿಯ ಪ್ರಸಿದ್ಧ ಲೋಕ ಸೇವಾ ವಿದ್ಯಾಸಂಸ್ಥೆಗಳ ಸ್ಥಾಪಕರಾದ ದಿ. ಮಡಿಯಾಲ ನಾರಾಯಣ ಭಟ್ಟರ ಹೆಸರಿನಲ್ಲಿ ಅವರ ಜನ್ಮಸ್ಥಳವಾದ ಅಳಿಕೆ ಗ್ರಾಮದಲ್ಲಿ ಪೂರ್ಣ ಉಚಿತ ಸನಿವಾಸ ಉನ್ನತ ಶಿಕ್ಷಣ ಕೇಂದ್ರವನ್ನು ಆರಂಭಿಸುವುದಾಗಿ ಸದ್ಗುರು ಶ್ರೀ ಮಧುಸೂದನ ಸಾಯಿ ತಿಳಿಸಿದ್ದಾರೆ.

ವಿಟ್ಲ ಸಮೀಪದ ಮೈತ್ರೇಯಿ ಗುರುಕುಲಕ್ಕೆ ಗುರುವಾರದಂದು ಆಗಮಿಸಿ ಅಜೇಯ ಟ್ರಸ್ಟ್‌ನಿಂದ ನಿರ್ಮಿಸಲ್ಪಟ್ಟ ನೂತನ ಭವ್ಯ ವಿದ್ಯಾರ್ಥಿನಿ ನಿಲಯವನ್ನು ಉದ್ಘಾಟಿಸಿದ ಬಳಿಕ ಅವರು ಈ ವಿಚಾರ ಪ್ರಕಟಿಸಿದರು.

ಇಂತಹ ವಿಶ್ವವಿದ್ಯಾನಿಲಯ ಕೇಂದ್ರವನ್ನು ಸ್ಥಾಪಿಸಿ ದೇಶದ ಯುವ ಜನಾಂಗವನ್ನು ನಿಸ್ವಾರ್ಥ, ತ್ಯಾಗಶೀಲ ದೇಶ ಸೇವಕರನ್ನಾಗಿ ರೂಪಿಸಬೇಕೆಂಬುದು ನಾರಾಯಣ ಭಟ್ಟರ ಉಜ್ವಲ ಆಶಯವಾಗಿತ್ತು. ಇದುವೇ ಅವರ ಸಹೋದರಿ ದಿ. ದೇವಕಿ ಭಟ್ಟದ ಜೀವನದ ಅಂತಿಮ ಆಶಯವು ಆಗಿತ್ತು. ಇಂತಹ ಸಂಸ್ಥೆಯ ಸ್ಥಾಪನೆಗಾಗಿ, ದೇವಕಿ ಭಟ್ ಅವರು ದಾನವಾಗಿ ನೀಡಿರುವ ಅಳಿಕೆಯ ಅವರ ಸ್ವಂತ ಜಮೀನಿನಲ್ಲಿ ಶ್ರೀ ಸತ್ಯಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದ ಒಂದು ಉನ್ನತ ಶಿಕ್ಷಣ ಕೇಂದ್ರವನ್ನು ಪ್ರಾರಂಭಿಸುವ ತಮ್ಮ ಸಂಕಲ್ಪವನ್ನು ಹೊಂದಿರುವುದಾಗಿ ಅವರು ಹೇಳಿದರು.

ನಾರಾಯಣ ಭಟ್ಟರ ಜನ್ಮ ಶತಮಾನೋತ್ಸವ ಸಂದರ್ಭದಲ್ಲಿ, ನವೆಂಬರ್ 2026ರಲ್ಲಿ ಈ ಉನ್ನತ ಶಿಕ್ಷಣ ಸಂಸ್ಥೆಯು ಕಾರ್ಯೋನ್ಮುಖವಾಗಲಿದೆ. ಅದಕ್ಕೆ ಮೊದಲೇ ಸಂಸ್ಥೆಗೆ ಅಗತ್ಯವಾದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುವುದು.

ಅಳಿಕೆ ಗ್ರಾಮದಲ್ಲಿ ಈ ಮೊದಲೇ ಶ್ರೀ ಮಧುಸೂದನ ಸಾಯಿಯವರು ಲೋಕಸೇವಾ ವಿದ್ಯಾಸಂಸ್ಥೆಗಳ ಸುವರ್ಣ ಮಹೋತ್ಸವ ಸಂದರ್ಭದಲ್ಲಿ 45000 ಚದರ ಅಡಿಗಳ ಒಂದು ಭವ್ಯ ಪದವಿಪೂರ್ವ ಕಾಲೇಜು ಕಟ್ಟಡವನ್ನು ನಿರ್ಮಿಸಲಾ ಗಿತ್ತು. ನಾರಾಯಣ ಭಟ್ಟರು ಜನಿಸಿದ ಮಡಿಯಾಲದ ಮೂಲ ಗೃಹವನ್ನು ನವೀಕರಿಸಲಾಗಿದೆ.

ಕರ್ನಾಟಕ ರಾಜ್ಯದಲ್ಲಿ ಹತ್ತಾರು ಆದರ್ಶ ವಿದ್ಯಾ ನಿವೇಶನಗಳನ್ನು ಸ್ಥಾಪಿಸಬೇಕೆಂಬುದು ಮಡಿಯಾಲ ನಾರಾಯಣ ಭಟ್ಟರ ಕನಸಾಗಿತ್ತು. ಕರ್ನಾಟಕದ 19 ಜಿಲ್ಲೆಗಳಲ್ಲಿ ಅಲ್ಲದೆ ತೆಲಂಗಾಣ ಹಾಗೂ ತಮಿಳುನಾಡಿನಲ್ಲಿಯೂ ಒಂದೊಂದು ಆದರ್ಶ ವಿದ್ಯಾನಿವೇಶನಗಳನ್ನು ಈಗಾಗಲೇ ಸ್ಥಾಪಿಸಲಾಗಿದೆ. ಈ ವಿದ್ಯಾ ನಿವೇಶನಗಳಲ್ಲಿ ಎಲ್ಲಾ ವಿದ್ಯಾರ್ಥಿ- ವಿದ್ಯಾರ್ಥಿನಿ ಯರಿಗೂ ವಸತಿ, ಊಟೋಪಚಾರ, ವಸ್ತ್ರ ಸಹಿತ ಶಿಕ್ಷಣವನ್ನು ಸಂಪೂರ್ಣ ಉಚಿತವಾಗಿ ನೀಡಲಾಗುತ್ತದೆ ಎಂದರು.

ಐದು ವರ್ಷಗಳ ಹಿಂದೆ ತಾವು ಸ್ಥಾಪಿಸಿದ ಶ್ರೀ ಸತ್ಯಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದ ಆಶ್ರಯದಲ್ಲಿ ಇದೇ ವರ್ಷ ದೇಶದ ಮೊಟ್ಟ ಮೊ ದಲ ಸಂಪೂರ್ಣ ಉಚಿತ ವೈದ್ಯಕೀಯ ಶಿಕ್ಷಣ ಸಂಸ್ಥೆಯನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನ ಹಳ್ಳಿಯಲ್ಲಿ ಪ್ರಾರಂಭಿಸಲಾಗಿದೆ. ಭಾರತ ದೇಶದಲ್ಲಿ ಸಂಪೂರ್ಣ ಉಚಿತ ಸೇವೆಯ ಹನ್ನೆರಡು ಉನ್ನತ ಆಸ್ಪತ್ರೆಗಳನ್ನು ಹಾಗೂ ಫಿಜಿ, ಶ್ರೀಲಂಕಾ ಮತ್ತು ನೈಜೀರಿಯಾ ದೇಶಗಳಲ್ಲಿ ಒಂದೊಂದು ಆಸ್ಪತ್ರೆಯನ್ನು ಪ್ರಾರಂಭಿಸಲಾಗಿದೆ.

ಮಡಿಯಾಲ ನಾರಾಯಣ ಭಟ್ಟರ ನಿಕಟವರ್ತಿಗಳಾಗಿದ್ದ ಶ್ರೀ ಸತ್ಯಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾನಿಲಯದ ಕುಲಾಧಿಪತಿಗಳು ಮತ್ತು ಪ್ರಶಾಂತಿ ಬಾಲಮಂದಿರ ಟ್ರಸ್ಟ್ ನ ಅಧ್ಯಕ್ಷರಾದ ಬಿ. ಎನ್. ನರಸಿಂಹಮೂರ್ತಿ, ಶ್ರೀ ಸತ್ಯ ಸಾಯಿ ಲೋಕಸೇವಾ ಟ್ರಸ್ಟ್‌ನ ಧರ್ಮದರ್ಶಿಗಳಾದ ಸಂಜೀವ ಶೆಟ್ಟಿ ಹಾಗೂ ಮಹೇಂದ್ರ ಹೆಗ್ಗಡೆ, ನಿವೃತ್ತ ನ್ಯಾಯಾಧೀಶ ಎನ್. ಕುಮಾರ್, ಕೋಟೆಮನೆ ರಾಮಚಂದ್ರ ಭಟ್ಟರು, ಸೀತಾರಾಮ ಕೆದಿಲಾಯ, ಕಜಂಪಾಡಿ ಸುಬ್ರಮಣ್ಯ ಭಟ್ ಹಾಗೂ ಡಾ.ಕಲ್ಲಡ್ಕ ಪ್ರಭಾಕರ ಭಟ್ಟ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News