×
Ad

ಮುಸ್ಲಿಂ ಬಾಂಧವ್ಯ ವೇದಿಕೆ ವತಿಯಿಂದ ಡಾ. ಮೋಹನ್‌ ಆಳ್ವರಿಗೆ 'ಸೌಹಾರ್ದ ಸಿರಿ' ಪ್ರಶಸ್ತಿ ಪ್ರದಾನ

Update: 2025-02-13 21:35 IST

ಮೂಡುಬಿದಿರೆ: ಮುಸ್ಲಿಂ ಬಾಂಧವ್ಯ ವೇದಿಕೆ ಕರ್ನಾಟಕ ಇದರ ವತಿಯಿಂದ 'ಸೌಹಾರ್ದ ಸಿರಿ' ಪ್ರಶಸ್ತಿಯನ್ನು ಮೂಡುಬಿದರೆ ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಡಾ. ಎಂ. ಮೋಹನ್‌ ಆಳ್ವ ಆವರಿಗೆ ಆಳ್ವಾಸ್‌ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಗುರುವಾರ ಪ್ರದಾನಿಸಲಾಯಿತು.

ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ಡಾ. ಎಂ. ಮೋಹನ್‌ ಆಳ್ವ ಅವರು, ರಾಜಕೀಯ ಪಕ್ಷಗಳು ಓಟು, ಅಧಿಕಾರಕ್ಕಾಗಿ ನಮ್ಮ ನಡುವೆ ಜಾತಿ, ಧರ್ಮದ ಕಂದಗಳನ್ನು ಸೃಷ್ಠಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದೆ. ಇನ್ನೊಂದೆಡೆ ಸಾಮಾಜಿಕ ಮಾಧ್ಯಮಗಳು ದೇಶದಲ್ಲಿ ಧ್ವೇಷ ಹರಡುವ ಕೆಲಸ ಮಾಡುತ್ತಿದೆ. ದೇಶ ಮುನ್ನಡೆಸಬೇಕಾಗಿರುವ ಯುವ ಸಮೂಹ ಇಂತವರನ್ನು ಗಮನಿಸುತ್ತಿರಬೇಕು. ಸಮಾನ ಮಸನ್ಕರೆಲ್ಲರೂ ಸೇರಿಕೊಂಡು ಸೌಹಾರ್ದ ಸಮೃದ್ಧ ಭಾರತ ದೇಶವನ್ನು ಕಟ್ಟಲು ಶ್ರಮಿಸಬೇಕಿದೆ ಎಂದರು.


ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ನಿವೃತ್ತ ನ್ಯಾ. ನಬಿರಸೂಲ್ ಮಹಮದಾಪುರ್ ಅವರು, ಮುಸ್ಲಿಂ ಬಾಂಧವ್ಯ ವೇದಿಕೆ ಸಮಾಜದ ಒಲಿತು ಬಯಸುವ ಸೌಹಾರ್ದ ಮನಸ್ಸುಗಳನ್ನು ಉಗ್ಗೂಡಿಸುವ ಕೆಲಸದಲ್ಲಿ ಮುಂದಾಗಿರುವುದು ಶ್ಲಾಘನೀಯ. ಇಂತಹಾ ಸೌಹಾರ್ದ ಹೆಚ್ಚಿಸುವ ಕಾರ್ಯಕ್ರಮಗಳು ಇನ್ನಷ್ಟು ನಡೆಯ ಬೇಕಿದೆ. ಬುದ್ಧಿವಂತರೂ ಉತ್ತಮ ಮನಸ್ಸಿನವರೂ ಆಗಿರುವ ಮಂಗಳೂರಿನಲ್ಲಿ ಯಾವ ಕಾರಣಕ್ಕಾಗಿ ಧರ್ಮ ಘರ್ಷಣೆಗಳು ನಡೆಯುತ್ತಿರುತ್ತವೆ ಎಂಬುವುದೇ ಯಕ್ಷ ಪ್ರಶ್ನೆ. ಜಿಲ್ಲೆ ದೇಶದಲ್ಲಿ ಧರ್ಮ ಘರ್ಷಣೆಗೆ ಅವಕಾಶ ನೀಡದೆ ಮಾನವ ಧರ್ಮದ ಪ್ರತಿಷ್ಠಾಪನೆಗೆ ಎಲ್ಲರೂ ಮುಂದಾಗಬೇಕು ಎಂದು ಅವರು ಕರೆ ನೀಡಿದರು.

ಸಮಾರಂಭದಲ್ಲಿ ಮುಸ್ಲಿಂ ಬಾಂಧವ್ಯ ವೇದಿಕೆ ಕರ್ನಾಟಕ ಇದರ ಸದಸ್ಯರಾಗಿರುವ ಯುವ ಬರಹಗಾರ ಮುಹಮ್ಮದ್ ರಿಯಾಝ್ ಕಾರ್ಕಳ ಅವರು ರಚಿಸಿರುವ "ತುಳುನಾಡಿನ ಕೋಮು ಸಾಮರಸ್ಯ ಪರಂಪರೆ" ಕೃತಿಯನ್ನು ಗಣ್ಯರು ಲೋಕಾರ್ಪಣೆಗೊಳಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಮುಸ್ಲಿಂ ಬಾಂಧವ್ಯ ವೇದಿಕೆ ಕರ್ನಾಟಕ ಇದರ ಅಧ್ಯಕ್ಷರಾಗಿರುವ ಸುಹೈಲ್ ಅಹಮದ್ ಮರೂರ್ ವಹಿಸಿದ್ದರು. ಪೌರಾಣಿಕ ಅರ್ಥಧಾರಿ ಜಬ್ಬಾರ್ ಸಮೋ ಸಂಪಾಜೆ ಅವರು ನುಡಿಸಿರಿ ಮೂಲಕ ಪ್ರಶಸ್ತಿ ಪುರಸ್ಕೃತ ಡಾ. ಎಂ. ಮೋಹನ್‌ ಆಳ್ವ ಅವರ ಪರಿಚಯ ಮಾಡಿದರು. ವೇದಿಕೆಯಲ್ಲಿ ಮುಸ್ಲಿಮ್ ಬಾಂಧವ್ಯ ವೇದಿಕೆ ಕರ್ನಾಟಕ ಇದರ ಗೌರವಾಧ್ಯಕ್ಷ ಕೋಟಾ ಇಬ್ರಾಹಿಂ ಸಾಹೇಬ್, ಮಾಜಿ ಅಧ್ಯಕ್ಷ ಅನೀಸ್ ಪಾಷಾ, ಅನುಪಮ ಮಾಸಿಕದ ಸಂಪಾದಕಿ ಶಹನಾಝ್ ಎಂ. ಮೊದಲಾದವರು ಉಪಸ್ಥಿತರಿದ್ದರು.

ಮುಸ್ಲಿಂ ಬಾಂಧವ್ಯ ವೇದಿಕೆ ಕರ್ನಾಟಕ ಇದರ ಕಾರ್ಯದರ್ಶಿ ಮುಸ್ತಾಕ್ ಹೆನ್ನಾಬೈಲ್ ಸ್ವಾಗತಿಸಿದರು. ಹಕೀಮ್ ತೀರ್ಥಹಳ್ಳಿ ಧನ್ಯವಾದ ಸಮರ್ಪಿಸಿದರು. ಡಾ.‌ ನಿಝಾಮುದ್ದೀನ್ ಕಾರ್ಯಕ್ರಮ ನಿರೂಪಿಸಿದರು.

"ಸೌಹಾರ್ದ ಭಾರತವನ್ನು ರಾಜಕೀಯ ಕ್ರೌರ್ಯ ಹದಗೆಡಿಸುತ್ತಿದೆ. ವ್ಯವಸ್ಥಿತವಾಗಿ ಧ್ವೇಷ ಹಂಚುತ್ತಾ ಶಾಂತಿ ಸೌಹಾರ್ದ ಕೆಡಿಸುವ ರಾಜಕೀಯದಿಂದ ದೂರ ಇದ್ದು, ಆಳ್ವರು ಪ್ರೀತಿ ಹಂಚುತ್ತಿರುವುದು ಶ್ಲಾಘನೀಯ. ಎಲ್ಲಾ ರೀತಿಯ ಧರ್ಮ ದ್ವೇಷಕ್ಕೂ ಸೌಹಾರ್ದವೇ ಮದ್ದು. ಸೌಹಾರ್ದದ ಕೊಂಡಿಯಾಗಿ ಮುಸ್ಲಿಂ ಬಾಂಧವ್ಯ ವೇದಿಕೆ ಮುಂದುವರಿಯಲಿದೆ"

-ಸುಹೈಲ್ ಅಹಮದ್ ಮರೂರ್, ಅಧ್ಯಕ್ಷರು, ಮುಸ್ಲಿಂ ಬಾಂಧವ್ಯ ವೇದಿಕೆ ಕರ್ನಾಟಕ



Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News