×
Ad

ನಾರ್ಶ| ಈಡಿ ಅಧಿಕಾರಿಗಳ ಸೋಗಿನಲ್ಲಿ ಉದ್ಯಮಿಯ ಮನೆ ದರೋಡೆ ಪ್ರಕರಣ: ಮತ್ತೋರ್ವ ಆರೋಪಿ ಸೆರೆ

Update: 2025-02-22 22:08 IST

ದರೋಡೆ ನಡೆದಿದ್ದ ಸಿಂಗಾರಿ ಹಾಜಿಯವರ ಮನೆ 

ವಿಟ್ಲ: ವಿಟ್ಲದ ಬೋಳಂತೂರಿನ ಸಿಂಗಾರಿ ಬಿಡಿ ಮಾಲಕರ ಮನೆ ಮೇಲೆ ನಕಲಿ ಈಡಿ ಅಧಿಕಾರಿಗಳ ಹೆಸರಿನಲ್ಲಿ ದಾಳಿ ನಡೆಸಿ ಲಕ್ಷಾಂತರ ರೂ. ದೋಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮತ್ತೋರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಕೇರಳದ ಕಣ್ಣೂರು ನಿವಾಸಿ ಅಬ್ದುಲ್‌ ನಾಸೀರ್‌ (52) ಎಂದು ಗುರುತಿಸಲಾಗಿದೆ. ಈ ಪ್ರಕರಣದಲ್ಲಿ ಇದೀಗ ಬಂಧಿತರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ.

ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತನಾಗಿರುವ ಕಣ್ಣೂರು ಮೂಲದ ಅಬ್ದುಲ್‌ ನಾಸೀರ್‌, ಸ್ಥಳೀಯ ಆರೋಪಿ ಸಿರಾಜುದ್ದೀನ್‌ ಹಾಗೂ ಮುಖ್ಯ ಸೂತ್ರಧಾರಿ ಎಎಸ್‌ಐ ಮಧ್ಯೆ ಸಂಪರ್ಕ ಸೇತುವಾಗಿದ್ದ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಸಿಂಗಾರಿ ಬೀಡಿ ಸಂಸ್ಥೆಯಲ್ಲಿ ಬೀಡಿ ಪ್ಯಾಕಿಂಗ್‌ ಕಾರ್ಯ ನಿರ್ವಹಿಸುತ್ತಿದ್ದ ಸಿರಾಜುದ್ದೀನ್‌ ತನ್ನ ಮಾಲಕನೊಂದಿಗೆ ಮನಸ್ತಾಪದಿಂದ ಕೆಲಸ ತ್ಯಜಿಸಿದ್ದ.

ಜತೆಗೆ ಮಾಲಕನ ವಿರುದ್ಧ ಸೇಡು ತೀರಿಸಲು ಇ.ಡಿ.ಗೆ ದೂರು ನೀಡುವುದಾಗಿ ಹೇಳುತ್ತಿದ್ದ. ಸಿರಾಜುದ್ದೀನ್‌ನ ಸೇಡಿನ ವಿಚಾರವನ್ನು ಎಎಸ್‌ಐಗೆ ತಿಳಿಸಿ ಇಂತಹ ನಕಲಿ ಇಡಿ ದಾಳಿ ಸಂಘಟಿಸಲು ನಾಸೀರ್‌ ಪ್ರಮುಖ ಪಾತ್ರ ವಹಿಸಿದ್ದ ಎನ್ನಲಾಗಿದೆ.

ಈ ಪ್ರಕರಣದಲ್ಲಿ ಈ ಹಿಂದೆ ಪೊಲೀಸರು ತ್ರಿಶೂರು ಕೊಡಂಗಲ್ಲೂರು ಪೊಲೀಸ್‌ ಠಾಣೆಯಲ್ಲಿ ಎಎಸ್‌ಐ ಆಗಿದ್ದ ಶಫೀರ್‌ ಬಾಬು (48), ಪರ್ಲಿಯಾ ನಿವಾಸಿ ಇಕ್ಬಾಲ್‌(38), ಕೊಳ್ನಾಡು ಗ್ರಾಮ ನಿವಾಸಿ ಸಿರಾಜುದ್ದೀನ್‌ ನಾರ್ಶ(37), ಮಂಗಳೂರು ಪಡೀಲು ನಿವಾಸಿ ಅನ್ಸಾರ್‌ (27), ಕೇರಳದ ಕೊಟ್ಟಾಯಂ ನಿವಾಸಿಗಳಾದ ಅನಿಲ್‌ ಫೆರ್ನಾಂಡಿಸ್‌(49), ಸಚಿನ್‌ ಟಿ.ಎಸ್‌.(29) ಹಾಗೂ ಶಬಿನ್‌ ಎಸ್‌.(27) ಎಂಬವರನ್ನು ಬಂಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News