×
Ad

ಉಪ್ಪಿನಂಗಡಿ: ಬೀಡಿ ಸೇದಲು ನಿಲ್ಲಿಸಲಿಲ್ಲ ಎಂದು ಲಾರಿಯಿಂದ ಜಿಗಿದ ಕ್ಲೀನರ್ ಮೃತ್ಯು; ಪ್ರಕರಣ ದಾಖಲು

Update: 2025-02-25 22:30 IST

ಉಪ್ಪಿನಂಗಡಿ : ಬೀಡಿ ಸೇದಲು ಲಾರಿ ನಿಲ್ಲಿಸಲಿಲ್ಲವೆಂಬ ಕಾರಣಕ್ಕೆ ಲಾರಿಯ ಕ್ಲೀನರ್ ಚಲಿಸುತ್ತಿದ್ದ ಲಾರಿಯಿಂದ ಹಾರಿ ಮೃತಪಟ್ಟ ಘಟನೆ ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಶಿರಾಡಿ ಗ್ರಾಮದ ಅಡ್ಡಹೊಳೆಯಲ್ಲಿ ಫೆ.25ರಂದು ಮುಂಜಾನೆ ನಡೆದಿದೆ.

ತಮಿಳುನಾಡಿನ ನಾಗಪಟ್ಟಿನಂ ಜಿಲ್ಲೆಯ ಎರುವೈಕಾಡು ಗ್ರಾಮದ ನಿವಾಸಿ ಲಕ್ಷ್ಮಣ್ ಸೇಗೊಂಟ್ಟವನ್(43)ಮೃತಪಟ್ಟ ನಿರ್ವಾಹಕ.

ಈತ ತನ್ನೂರಿನವರೇ ಆದ ವೇಳಾಯುದಂ ರಾಜಾಗಂ ಎಂಬವರ ಜೊತೆ ಲಾರಿಯಲ್ಲಿ ಕ್ಲೀನರ್ ಆಗಿ 1 ವಾರದಿಂದ ಕೆಲಸ ಮಾಡಿಕೊಂಡಿದ್ದರು. ಇವರು ತಮಿಳುನಾಡಿನ ದಿಂಡಿವನಮ್ ಎಂಬಲ್ಲಿಂದ ಕಲ್ಲಂಗಡಿ ಹಣ್ಣುಗಳನ್ನು ಲೋಡ್ ಮಾಡಿ ಕೊಂಡು ಮಂಗಳೂರಿಗೆ ಬರುತ್ತಿದ್ದು, ಫೆ.25ರಂದು ಮಧ್ಯರಾತ್ರಿ ಕಂಡಕ್ಟರ್ ಲಕ್ಷ್ಮಣ್ ಸೇಗೊಂಟ್ಟವನ್ ಬೀಡಿ ಸೇದಬೇಕೆಂದು ಹೇಳಿದಾಗ ಸ್ವಲ್ಪ ಮುಂದಕ್ಕೆ ತೆಗೆದುಕೊಂಡು ಹೋಗಿ ಲಾರಿ ನಿಲ್ಲಿಸುತ್ತೇನೆಂದು ಚಾಲಕ ವೇಳಾಯುದಂ ಹೇಳಿದ್ದರು ಎನ್ನಲಾಗಿದೆ. ಇದರಿಂದ ಉದ್ವೇಗಗೊಂಡ ಲಕ್ಷ್ಮಣ್ ಸೇಗೊಂಟ್ಟವನ್ ಲಾರಿ ಅಡ್ಡಹೊಳೆ ಸೇತುವೆ ಬಳಿ ತಲುಪಿದಾಗ ಲಾರಿಯ ಎಡಬದಿ ಕಿಟಕಿಯ ಮೂಲಕ ಕಾಂಕ್ರೀಟ್ ರಸ್ತೆಗೆ ಜಿಗಿದಿದ್ದಾರೆ ಎಂದು ವರದಿಯಾಗಿದೆ. ಬಳಿಕ ವೇಳಾಯುದಂ ಅವರು ಲಾರಿಯನ್ನು ನಿಲ್ಲಿಸಿ ಇಳಿದು ನೋಡಿದಾಗ ಲಕ್ಷ್ಮಣ್ ಸೇಗೊಂಟ್ಟವನ್‍ನ ಎದೆಯ ಭಾಗದಲ್ಲಿ ತರಚಿದ ಗಾಯವುಂಟಾಗಿ ಮೃತಪಟ್ಟಿದ್ದರು ಎಂದು ಅವರು ತಿಳಿಸಿದ್ದಾರೆ.

ಈ ಬಗ್ಗೆ ವೇಳಾಯುದಂ ನೀಡಿರುವ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News