×
Ad

ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ವಯಸ್ಸಾದ ಹೃದ್ರೋಗಿಗೆ ವಿನೂತನ ಶೈಲಿಯ ಚಿಕಿತ್ಸೆ

Update: 2025-04-26 23:18 IST

ಮಂಗಳೂರು: ನಗರದ ಫಾದರ್ ಮಲ್ಲರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಹೃದ್ರೋಗ ಶಾಸ್ತ್ರ ವಿಭಾಗದ ವೈದ್ಯರ ತಂಡವು ವಯಸ್ಸಾದ ಹೃದ್ರೋಗಿಗೆ ವಿನೂತನ ಶೈಲಿಯ ಚಿಕಿತ್ಸೆಯ ಮೂಲಕ ಅವರ ಜೀವ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವೈದ್ಯರು ಈ ಮೂಲಕ ವೈದ್ಯಕೀಯ ಕ್ಷೇತ್ರದಲ್ಲಿ ಅಪರೂಪದ ಮತ್ತು ಗಮನಾರ್ಹ ಸಾಧನೆ ಮಾಡಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಹೃದ್ರೋಗಿ ತೀವ್ರ ಎದೆ ನೋವು, ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಹೊನ್ನಾವರ (ಉತ್ತರ ಕನ್ನಡ) ನಗರ ಮೂಲದ 69 ವಯಸ್ಸಿನ ವ್ಯಕ್ತಿ ಫಾದರ್ ಮಲ್ಲರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಹೃದ್ರೋಗ ವಿಭಾಗದ ಮುಖ್ಯಸ್ಥ ಹಾಗೂ ಹೃದ್ರೋಗ ಶಾಸ್ತ್ರ ತಜ್ಞ ಡಾ. ಪ್ರಭಾಕರ್‌ರನ್ನು ಭೇಟಿಯಾಗಿ, ತಮ್ಮ ಹೃದ್ರೋಗದ ಸಮಸ್ಯೆಗಳನ್ನು ವಿವರಿಸಿದರು.

ರೋಗಿಯನ್ನು ಸೂಕ್ಷ್ಮವಾಗಿ ತಪಾಸಣೆ ಮಾಡಿದಾಗ ವೈದ್ಯರು ರೋಗಿಯು ತೀವ್ರ ಹೃದ್ರೋಗ ಸಂಬಂಧಿತ ಕಾಯಿಲೆಗಳಿಂದ ಬಳಲುತಿದ್ದು, ಹೃದಯದ ಅಪದಮನಿಯಲ್ಲಿ ಕ್ಯಾಲ್ಸಿಯಂ ಕಣಗಳಿದ್ದು, ರಕ್ತದ ಚಲನ ವಲನಕ್ಕೆ ಅಡ್ಡಿ ಮಾಡುತ್ತಿತ್ತು. ಅದಲ್ಲದೆ ರೋಗಿಯು 10 ವರ್ಷದ ಹಿಂದೆ ಬೈಪಾಸ್ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಈ ಕಾರಣ 2ನೇ ಬೈಪಾಸ್ ಶಸ್ತ್ರ ಚಿಕಿತ್ಸೆಯು ರೋಗಿಯ ಜೀವಕ್ಕೆ ಗಂಭೀರ ಸಮಸ್ಯೆ ಮತ್ತು ಅಪಾಯಕಾರಿಯಾಗಿತ್ತು.

ತಕ್ಷಣ ರೋಗಿಯನ್ನು ಆಸ್ಪತ್ರೆಗೆ ದಾಖಲಿಸಿ ಡಾ. ಪ್ರಭಾಕರ್‌ರವರು ಈ ಗಂಭೀರ ಸಮಸ್ಯೆ ಮತ್ತು ಜೀವಕ್ಕೆ ಅಪಾಯಕಾರಿಯಾಗುವ ಸವಾಲನ್ನು ಸ್ವೀಕರಿಸಿ, ವಿನೂತನ ಶೈಲಿಯ ಕ್ಲಿಷ್ಟಕರವಾದ ಅರ್ಬಿಟಲ್ ಅಥೆರೆಕ್ಟೆಮಿ ಚಿಕಿತ್ಸೆಯನ್ನು ನಿರ್ವಹಿಸಿ ಹೃದಯದಲ್ಲಿರುವ ಕ್ಯಾಲ್ಸಿಯಂ ಕಣಗಳನ್ನು ತೆಗೆದು 2 ಸ್ಟೆಂಟ್‌ ಗಳನ್ನು ಅಳವಡಿಸಿ ಸಾಮಾನ್ಯ ರಕ್ತ ಚಲನೆಗೆ ಅನುವು ಮಾಡಿಕೊಟ್ಟರು. ಈ ಅಪಾಯಕಾರಿ ಮತ್ತು ಕಠಿಣ ಚಿಕಿತ್ಸೆಯನ್ನು ಸೂಕ್ತ ಮುಂಜಾಗ್ರತೆಗಳನ್ನು ಅನುಸರಿಸಿ ನಿರ್ವಹಿಸಲಾಗಿದೆ ಎಂದು ಡಾ. ಪ್ರಭಾಕರ್ ಮಾಹಿತಿ ನೀಡಿದ್ದಾರೆ.

ಈ ಚಿಕಿತ್ಸೆಗೆ ಆಸ್ಪತೆಯ ಹೃದ್ರೋಗ ತಜ್ಞರಾದ ಡಾ. ಪ್ರದೀಪ್ ಪಿರೇರಾ ಮತ್ತು ಡಾ.ಜೋಸ್ಟಲ್ ಪಿಂಟೋ ಸಹಕರಿಸಿದ್ದರು. ರೋಗಿಯು ಚಿಕಿತ್ಸೆಗೆ ಸ್ಪಂದಿಸಿ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಎ.26 ರಂದು ಬಿಡುಗಡೆಗೊಂಡಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

ಫಾದರ್ ಮಲ್ಲರ್ ಸಂಸ್ಥೆಗಳ ನಿರ್ದೇಶಕರಾದ ರೆ.ಫಾ. ರಿಚರ್ಡ್ ಕೊಯೆಲ್ಲೊ ಈ ಚಿಕಿತ್ಸೆಯನ್ನು ಯಶಸ್ವಿಯಾಗಿ ನಿರ್ವಹಿಸಿರುವ ವೈದ್ಯರ ತಂಡವನ್ನು ಅಭಿನಂದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News