ಉಳ್ಳಾಲ ಉರೂಸ್ ಸಮಾರೋಪ
ಉಳ್ಳಾಲ: ಕಳೆದ 25 ದಿನಗಳಿಂದ ಧಾರ್ಮಿಕ ಪ್ರವಚನ ಸಹಿತ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯುತ್ತಿದ್ದ ಉಳ್ಳಾಲ ದರ್ಗಾ ಉರೂಸ್ ಕಾರ್ಯಕ್ರಮ ರವಿವಾರ ಸಮಾಪ್ತಿಗೊಂಡಿದೆ.
ಈ ಉರೂಸ್ ಪ್ರಯುಕ್ತ ಶನಿವಾರ ರಾತ್ರಿ 9ಕ್ಕೆ ಆರಂಭಗೊಂಡ ಭಕ್ತಾದಿಗಳಿಗೆ ಅನ್ನದಾನ ಕಾರ್ಯಕ್ರಮ ರವಿವಾರ ರಾತ್ರಿ 9ರವರೆಗೆ ನೀಡಲಾಗಿದ್ದು, ನಾಲ್ಕುವರೆ ಲಕ್ಷಕ್ಕೂ ಅಧಿಕ ಭಕ್ತಾದಿಗಳು ಈ ಅನ್ನದಾನದಲ್ಲಿ ಪಾಲ್ಗೊಂಡರು.
ಕೇರಳ, ಕರ್ನಾಟಕ, ಉತ್ತರ ಭಾರತದ ಭಕ್ತಾದಿಗಳು ಆಗಮಿಸಿ ಅನ್ನಾಹಾರದಲ್ಲಿ ಭಾಗವಹಿಸಿದ್ದರು.
ಮಹಿಳೆಯರೇ ಜಾಸ್ತಿ: ಉಳ್ಳಾಲ ಉರೂಸ್ ಅನ್ನದಾನ ಸಮಾರಂಭದಲ್ಲಿ ಭಾಗವಹಿಸಿದವರಲ್ಲಿ ಮಹಿಳೆ ಯರ ಸಂಖ್ಯೆ ಜಾಸ್ತಿ ಆಗಿದ್ದವು. ಶನಿವಾರ ರಾತ್ರಿ ಒಂಬತ್ತು ಗಂಟೆಗೆ ಆರಂಭಗೊಂಡ ಅನ್ನದಾನ ಕಾರ್ಯ ಕ್ರಮದಲ್ಲಿ ಪಾಲ್ಗೊಳ್ಳಲು ಶನಿವಾರ ಸಂಜೆಯೇ ಭಕ್ತಾದಿಗಳು ದರ್ಗಾ ವಠಾರದಲ್ಲಿ ಸೇರಿದ್ದರು.
ಶನಿವಾರ ರಾತ್ರಿಯಿಂದ ರವಿವಾರ ಸಂಜೆಯ ವರೆಗೆ ಮಹಿಳಾ ಭಕ್ತಾದಿಗಳು ಜಾಸ್ತಿ ಆಗಿ ಪಾಲ್ಗೊಂಡರು. ಮಹಿಳೆಯರಿಗೆ, ಪುರುಷರಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿತ್ತು.
ಏಕಕಾಲಕ್ಕೆ ಹತ್ತು ಸಾವಿರ ಮಂದಿಗೆ ಆಹಾರ ಸೇವನೆ ಮಾಡುವ ವ್ಯವಸ್ಥೆ ಮಾಡಲಾಗಿತ್ತು. ಭಕ್ತಾದಿಗಳ ನಿಯಂತ್ರಣಕ್ಕೆ ನಾಲ್ಕು ಸಾವಿರ ಸ್ವಯಂ ಸೇವಕರ ವ್ಯವಸ್ಥೆ ಮಾಡಲಾಗಿತ್ತು. ಹೆಚ್ಚುವರಿಯಾಗಿ ಪೊಲೀಸ್ ಬಂದೋಬಸ್ತ್ ಕೂಡ ಇತ್ತು. ಜಾತಿ ಧರ್ಮ ಇಲ್ಲದೆ ಎಲ್ಲರಿಗೂ ಸಮಾನ ಆಗಿ ನೀಡುವ ಅನ್ನದಾನ ಕಾರ್ಯಕ್ರಮದಲ್ಲಿ ಮುಸ್ಲಿಮೇತರರು ಕೂಡ ಭಾಗವಹಿಸಿ ಸಂತಸ ಹಂಚಿಕೊಂಡು ಎಲ್ಲರ ಪ್ರೀತಿಗೆ ಪಾತ್ರರಾದರು.
24 ಗಂಟೆ ಅನ್ನದಾನ: ಉರೂಸ್ ಪ್ರಯುಕ್ತ ಭಕ್ತಾದಿಗಳಿಗೆ ಅನ್ನದಾನ ಶನಿವಾರ ರಾತ್ರಿ 9 ಗಂಟೆಯಿಂದ ರವಿವಾರ ಸಂಜೆ ಐದು ಗಂಟೆಯ ವರೆಗೆ ಸಮಯ ನಿಗದಿ ಪಡಿಸಲಾಗಿತ್ತು. ರವಿವಾರ ಸಂಜೆ ಮತ್ತೆ ದೂರದೂರಿನಿಂದ ಭಕ್ತಾದಿಗಳು ದರ್ಗಾಕ್ಕೆ ಆಗಮಿಸಿದ್ದಾರೆ. ಅಲ್ಲದೇ ದರ್ಗಾ ದಲ್ಲಿ ಭಕ್ತಾದಿಗಳ ಸಂಖ್ಯೆ ಜಾಸ್ತಿ ಇದ್ದ ಕಾರಣ ಶನಿವಾರ ರಾತ್ರಿ 9 ಗಂಟೆಗೆ ಆರಂಭಗೊಂಡ ಅನ್ನದಾನ ರವಿವಾರ ರಾತ್ರಿ 9ರವರೆಗೆ ವಿತರಣೆ ಮಾಡಲಾಗಿದೆ.
ಆಹಾರ ಧಾನ್ಯ: ಭಕ್ತಾದಿಗಳಿಗೆ ಏರ್ಪಡಿಸಿದ್ದ ಅನ್ನದಾನಕ್ಕೆ 45,000 ಕೆಜಿ ಅಕ್ಕಿ,15,000 ಕೆಜಿ ಆಡು ಮಾಂಸ, ಮೂರು ಸಾವಿರ ಕೆಜಿ ತುಪ್ಪ ವ್ಯವಸ್ಥೆ ಮಾಡಲಾಗಿದೆ.
ಶನಿವಾರ ಸಂಜೆಯ ವೇಳೆಯೇ ದೂರ ದೂರಿನಿಂದ ಭಕ್ತಾದಿಗಳು ಅನ್ನದಾನಕ್ಕೆ ಆಗಮಿಸಿದ್ದರು. ಅವರಿಗೆಲ್ಲ ಆಹಾರ ವ್ಯವಸ್ಥೆ ನೀಡಲಾಗಿದೆ. ಎ.24 ರಂದು ಖಾಝಿ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ನೇತೃತ್ವದಲ್ಲಿ ಆರಂಭಗೊಂಡ ಉಳ್ಳಾಲ ಉರೂಸ್ ರವಿವಾರ ಅನ್ನದಾನ ವಿತರಣೆಯೊಂದಿಗೆ ಮುಕ್ತಾಯಗೊಂಡಿದೆ ಎಂದು ದರ್ಗಾ ಅಧ್ಯಕ್ಷ ಹನೀಫ್ ಹಾಜಿ ತಿಳಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ಸ್ಪೀಕರ್ ಯುಟಿ ಖಾದರ್, ಉಳ್ಳಾಲ ತಾಲೂಕು ತಹಶೀಲ್ದಾರ್ ಪುಟ್ಟರಾಜು, ಆಹಾರ ನಿರೀಕ್ಷಕ ರಫೀಕ್, ಕಂದಾಯ ನಿರೀಕ್ಷಕ ಪ್ರಮೋದ್, ಗ್ರಾಮಕರಣಿಕ ಸುರೇಶ್, ನಗರಸಭೆ ಪೌರಾಯುಕ್ತ ಮತ್ತಡಿ, ಎಸಿಪಿ ಪ್ರಕಾಶ್, ಪೊಲೀಸ್ ಇಲಾಖೆ ಅಧಿಕಾರಿಗಳು ಸಹಿತ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.
ವಾಹನ ದಟ್ಟಣೆ: ಉಳ್ಳಾಲ ಉರೂಸ್ ಪ್ರಯುಕ್ತ ಸಂಚಾರ ದಟ್ಟವಾಗಿದ್ದ ಕಾರಣ ಶನಿವಾರ ರಾತ್ರಿ ಯಿಂದ ರವಿವಾರ ಸಂಜೆ ವರೆಗೂ ಉಳ್ಳಾಲ ದಿಂದ ತೊಕ್ಕೊಟ್ಟು ವೆರೆಗೂ ಬ್ಲಾಕ್ ಆಗಿತ್ತು. ಇದರಿಂದ ನಿಧಾನಗತಿ ಯಲ್ಲಿ ಸಂಚಾರ ನಡೆಯುತ್ತಿತ್ತು. ಬಹಳಷ್ಟು ಭಕ್ತಾದಿಗಳು ಕಾರು, ಬೈಕ್ ಗಳಲ್ಲಿ ಬಂದ ಕಾರಣ ದರ್ಗಾ ವಠಾರ ಸುತ್ತ ವಾಹನಗಳು ತುಂಬಿದ್ದವು. ವಾಹನ ಪಾರ್ಕಿಂಗ್ ಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿತ್ತು.
ವಾಹನ ದಟ್ಟಣೆ ಇದ್ದ ಕಾರಣ ತಲಪಾಡಿ, ಕಾಸರಗೋಡು ಕಡೆಯಿಂದ ಮಂಗಳೂರು ಕಡೆಗೆ ತೆರಳುವ ಬಸ್ ತೊಕ್ಕೊಟ್ಟು ಮೇಲ್ಸೇತುವೆ ಮೂಲಕ ಸಂಚರಿಸಿದವು. ಎಂದಿನಂತೆ ರವಿವಾರ ಬೇರೆ ಊರು ಗಳಿಂದ ಉಳ್ಳಾಲಕ್ಕೆ ವಿಶೇಷ ಬಸ್ ಸಂಚಾರ ಇಲ್ಲದ ಕಾರಣ ಬಿ.ಸಿ.ರೋಡ್, ಕೊಣಾಜೆ , ತಲಪಾಡಿ, ಮುಡಿಪು, ಮಂಗಳೂರು ಕಡೆಯಿಂದ ಬರುವ ಬಸ್ ಗಳಲ್ಲಿ ತುಂಬಿದ ಪ್ರಯಾಣಿಕರು ಇದ್ದರು. ಉಳ್ಳಾಲ ದಿಂದ ವಾಪಸ್ ಊರಿಗೆ ತೆರಳಲು ಬಸ್ ನಲ್ಲಿ ಸ್ಥಳವಕಾಶ ಸಿಗದೇ ಬಹಳಷ್ಟು ಮಂದಿ ಪ್ರಯಾಣಿಕರು ಆಟೋ ರಿಕ್ಷಾ ಗಳಲ್ಲಿ ಪ್ರಯಾಣಿಸಬೇಕಾಯಿತು.
ದರ್ಗಾ ಅಧ್ಯಕ್ಷ ಹನೀಫ್ ಹಾಜಿ, ಉಪಾಧ್ಯಕ್ಷ ಅಶ್ರಫ್ ರೈಟ್ ವೇ, ಕೋಶಾಧಿಕಾರಿ ನಾಝಿಮ್, ಪ್ರಧಾನ ಕಾರ್ಯದರ್ಶಿ ಶಿಹಾಬುದ್ದೀನ್ ಸಖಾಫಿ, ಕಾರ್ಯದರ್ಶಿ ಮುಸ್ತಫಾ ಮದನಿ ನಗರ, ಇಸಾಕ್ ಸಹಿತ ಸಮಿತಿ ಸದಸ್ಯರು ಭಕ್ತಾದಿಗಳನ್ನು, ಅಧಿಕಾರಿಗಳನ್ನು ಸ್ವಾಗತಿಸಿ ಶುಭ ಹಾರೈಸಿದರು.
ಮಂಗಳೂರು ಶಾಸಕ, ಸ್ಪೀಕರ್ ಯುಟಿ ಖಾದರ್ ಅವರು ಶನಿವಾರ ಮಧ್ಯರಾತ್ರಿ ದರ್ಗಾಕ್ಕೆ ಭೇಟಿ ನೀಡಿ, ಸ್ವಯಂ ಸೇವಕರ ಜೊತೆ ಕಾರ್ಯನಿರ್ವಹಿಸಿದರು. ಅನ್ನಾಹಾರ ತಯಾರಿಸುವವರ ಜೊತೆ ಕೈಜೋಡಿಸಿದ ಅವರು ಬಳಿಕ ದರ್ಗಾ ಅಧ್ಯಕ್ಷ ಹನೀಫ್ ಹಾಜಿ ಹಾಗೂ ಸಮಿತಿಯ ಸದಸ್ಯರ ಜೊತೆ ಅನ್ನಾಹಾರ ಸೇವಿಸಿದರು. |