×
Ad

ಅಂತರ್ ರಾಷ್ಟ್ರೀಯ ವಿಜ್ಞಾನ ಸಮ್ಮೇಳನಕ್ಕೆ ಉಪ್ಪಿನಂಗಡಿಯ ವಿದ್ಯಾರ್ಥಿ ಆಯ್ಕೆ

Update: 2025-06-13 21:00 IST

ಉಪ್ಪಿನಂಗಡಿ: ಗ್ರಾಮೀಣ ಭಾಗದ ಪ್ರತಿಭಾವಂತ ಬಾಲಕನೋರ್ವ ತನ್ನ ಸಾಧನೆಯನ್ನು ತೋರಿಸಲು ಇಂದು ಜಪಾನ್‍ನತ್ತ ಪ್ರಯಾಣ ಬೆಳೆಸಿದ್ದಾನೆ.

ಉಪ್ಪಿನಂಗಡಿ ಬಳಿಯ ಕಡವಿನ ಬಾಗಿಲಿನ ನಿವಾಸಿ ಅಬ್ದುಲ್ ಬಾಸಿತ್ ಎಂಬ ವಿದ್ಯಾರ್ಥಿ ತಾನು ಅನ್ವೇಷಿಸಿದ "ಸೀವಿಂಗ್ ಚಯರ್ ಫಾರ್ ಹ್ಯಾಂಡಿಕ್ಯಾಪ್ಸ್'' ಎಂಬ ವಿಜ್ಞಾನ ಮಾದರಿಯನ್ನು ಜಪಾನ್‍ನಲ್ಲಿ ಜೂ.15ರಿಂದ 21ರವರೆಗೆ ನಡೆಯಲಿರುವ ಅಂತರ್ ರಾಷ್ಟ್ರೀಯ ವಿಜ್ಞಾನ ಸಮ್ಮೇಳನ 'ಸುಕುರಾ'ದಲ್ಲಿ ಇದನ್ನು ಪ್ರದರ್ಶನಕ್ಕಿಡಲಿದ್ದಾನೆ.

ಕಡವಿನ ಬಾಗಿಲಿನ ನಿವಾಸಿ ಇಲ್ಯಾಸ್ ಪಾಷಾ ಮತ್ತು ಸಬಿಹಾ ದಂಪತಿಯ ಪುತ್ರನಾದ ಈತ, ಉಪ್ಪಿನಂಗಡಿಯ ಸರಕಾರಿ ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯ ಹಳೆವಿದ್ಯಾರ್ಥಿಯಾಗಿದ್ದು, ಅಲ್ಲಿರುವಾಗಲೇ ಅಲ್ಲಿನ ಶಿಕ್ಷಕರಾದ ಕೃಷ್ಣವೇಣಿ, ಸುಜಯ ಹಾಗೂ ನಯನರವರ ಪ್ರೋತ್ಸಾಹದೊಂದಿಗೆ ಕೇಂದ್ರ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ನಡೆಸುವ ಇನ್‍ಸ್ಪಾಯರ್ ಅವಾರ್ಡ್ ಮಾನಕ್ ಸ್ಪರ್ಧೆಯಲ್ಲಿ ಭಾಗವಹಿಸಿ ಅಲ್ಲಿ ತಾನು ಅನ್ವೇಷಿಸಿದ "ಸೀವಿಂಗ್ ಚಯರ್ ಫಾರ್ ಹ್ಯಾಂಡಿಕ್ಯಾಪ್ಸ್'' ಅನ್ನು ಪ್ರದರ್ಶಿಸಿದ್ದ. ಇದು ಕೈಯಿಲ್ಲದವರಿಗೆ ಕಾಲಲ್ಲಿ ಪಡೆಲ್‍ಗಳನ್ನು ಮೆಟ್ಟಿ ಸುಲಭವಾಗಿ ಹೊಯಿಗೆಯನ್ನು ಗಾಳಿಸುವ ಯಂತ್ರವಾಗಿದೆ. ಈತನ ಈ ಅನ್ವೇಷಣೆಗೆ ಹೇಮಂತ್‍ರಾಜ್ ಬಿಇ ಎಂ.ಟೆಕ್ ಅವರು ಮಾರ್ಗದರ್ಶನ ನೀಡಿದ್ದರು.

ರಾಜ್ಯ ಮಟ್ಟ, ರಾಷ್ಟ್ರಮಟ್ಟದಲ್ಲಿ ಈ ವಿಜ್ಞಾನ ಮಾದರಿಯನ್ನು ಪ್ರದರ್ಶಿಸಿರುವ ಈತ ಅಲ್ಲಿ ವಿಜೇತನಾಗಿದ್ದು, ಈಗ ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ಜಪಾನ್‍ನ ಟೋಕಿಯೋ ನಗರದಲ್ಲಿ ನಡೆಯಲಿರುವ ಅಂತರ್ ರಾಷ್ಟ್ರೀಯ ವಿಜ್ಞಾನ ಸಮ್ಮೇಳನ `ಸುಕುರಾ'ದಲ್ಲಿ ವಿಜ್ಞಾನ ಮಾದರಿಯನ್ನು ಪ್ರದರ್ಶಿಸಲಿದ್ದಾನೆ.

ಭಾರತದಿಂದ ಒಟ್ಟು 54 ಮಂದಿ ವಿದ್ಯಾರ್ಥಿಗಳು ಈ ಸಮ್ಮೇಳನದಲ್ಲಿ ತಾವು ತಯಾರಿಸಿದ ವಿಜ್ಞಾನ ಮಾಡೆಲ್‍ಗಳೊಂದಿಗೆ ಭಾಗವಹಿಸಲಿದ್ದು, ಇವರಲ್ಲಿ 14 ಮಂದಿ ಕರ್ನಾಟಕದವರಾಗಿದ್ದಾರೆ. ಅವರಲ್ಲಿ ದ.ಕ. ಜಿಲ್ಲೆಯಿಂದ ಆಯ್ಕೆಯಾದ ಏಕೈಕ ವಿದ್ಯಾರ್ಥಿ ಉಪ್ಪಿನಂಗಡಿಯ ಅಬ್ದುಲ್ ಬಾಶಿತ್ ಆಗಿದ್ದಾನೆ. ಈತ ಈಗ ಉಪ್ಪಿನಂಗಡಿ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾನೆ.

ಸನ್ಮಾನ: ಉಪ್ಪಿನಂಗಡಿ ಮಾಲೀಕುದ್ದೀನಾರ್ ಜುಮಾ ಮಸೀದಿಯ ವತಿಯಿಂದ ಈತನನ್ನು ಇಂದು ಸನ್ಮಾನಿಸಿ, ಜಪಾನ್ ದೇಶಕ್ಕೆ ಬೀಳ್ಕೊಡಲಾಯಿತು. ಈ ಸಂದರ್ಭ ಮಸೀದಿಯ ಖತೀಬ್ ಅಬ್ದುಸ್ಸಲಾಂ ಫೈಝಿ ಎಡಪ್ಪಾಲ್, ಅಧ್ಯಕ್ಷರಾದ ಯೂಸುಫ್ ಹಾಜಿ ಹಾಗೂ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.





Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News