×
Ad

ಸ್ಪೀಕರ್ ಯು.ಟಿ.ಖಾದರ್ ಗೆ ಯೆನೆಪೋಯ ಅಬ್ದುಲ್ಲಾ ಕುಂಞಿ ನೇತೃತ್ವದಲ್ಲಿ ಸನ್ಮಾನ ಕಾರ್ಯಕ್ರಮ

Update: 2025-06-14 20:48 IST

ಮಂಗಳೂರು: ಪವಿತ್ರ ಹಜ್ ಕರ್ಮ ನಿರ್ವಹಿಸಿ ಬಂದ ಸ್ಪೀಕರ್ ಯು.ಟಿ. ಖಾದರ್ ಮತ್ತು ಕರ್ನಾಟಕ ಅಲೈಡ್ ಆ್ಯಂಡ್ ಹೆಲ್ತ್ ಕೇರ್ ಕೌನ್ಸಿಲ್‌ನ ಅಧ್ಯಕ್ಷ ಡಾ. ಯು.ಟಿ. ಇಫ್ತಿಕಾರ್ ಅವರಿಗೆ ಯೆನೆಪೋಯ ವಿವಿಯ ಕುಲಾಧಿಪತಿ ಡಾ. ಯೆನೆಪೋಯ ಅಬ್ದುಲ್ಲಾ ಕುಂಞಿ ಅವರ ನೇತೃತ್ವದಲ್ಲಿ ಸಮುದಾಯದ ಪ್ರಮುಖರ ಸಮ್ಮುಖದಲ್ಲಿ ಶನಿವಾರ ನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಿತು.


ಬಳಿಕ ಮಾತನಾಡಿದ ರಾಜ್ಯ ವಿಧಾನ ಸಭೆಯ ಸ್ಪೀಕರ್ ಯು.ಟಿ. ಖಾದರ್ ರಾಜಕೀಯವಾಗಿ ನಾನು ಉನ್ನತ ಸ್ಥಾನಕ್ಕೇರಿದ್ದರೂ ನನ್ನ ವ್ಯಕ್ತಿತ್ವದಲ್ಲಿ ಕಿಂಚಿತ್ತೂ ಬದಲಾವಣೆಯಾಗಿಲ್ಲ. ಜನಸಾಮಾನ್ಯರ ಜೊತೆ ಬೆರೆತು ಸಮಾಜದಲ್ಲಿ ಸೌಹಾರ್ದದ ವಾತಾವರಣ ಸೃಷ್ಟಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ನನ್ನ ಬಳಿ ನೆರವು ಯಾಚಿಸಿಕೊಂಡು ಬಂದ ಯಾರನ್ನೂ ಕೂಡ ನಾನು ನಿರಾಶೆಗೊಳಿಸಲಿಲ್ಲ. ನನ್ನಿಂದಾದಷ್ಟು ಸಹಾಯ ಮಾಡಿದ್ದೇನೆ. ಜನರ ಕಷ್ಟ-ಸಮಸ್ಯೆ ಆಲಿಸುವಾಗ ಜಾತಿ, ಧರ್ಮ, ಪಕ್ಷವನ್ನೂ ನೋಡಿಲ್ಲ. ಎಲ್ಲರನ್ನೂ ಸಮಾನವಾಗಿ ಕಂಡಿದ್ದೇನೆ ಎಂದು ಹೇಳಿದರು.


ಮಸೀದಿ, ಮದ್ರಸ, ದರ್ಗಾ, ದೇವಸ್ಥಾನ, ಚರ್ಚ್‌ಗಳ ಅಭಿವೃದ್ಧಿಗೂ ಶ್ರಮಿಸಿದ್ದೇನೆ. ವೈಯಕ್ತಿಕವಾಗಿ ನನ್ನ ಮೇಲೆ ದಾಳಿ ಮಾಡಿದಾಗಲೂ ಸಂಯಮ ಪಾಲಿಸಿದ್ದೇನೆ. ಸಾರ್ವಜನಿಕ ಜೀವನದಲ್ಲಿ ಹಿತಶತ್ರು ಗಳಿರುವುದು ಸಹಜ. ಹಾಗಾಗಿ ಸಾಮಾಜಿಕ ಜಾಲತಾಣದಲ್ಲಿ ಕಂಡು ಬರುವ ಟೀಕೆ-ಟಿಪ್ಪಣಿಗಳನ್ನೂ ಎದುರಿಸುತ್ತಿದ್ದೇನೆ. ಆದರೆ ನಾನು ಯಾವತ್ತೂ ಕೂಡ ಯುವ ಸಮೂಹವನ್ನು ದಿಕ್ಕು ತಪ್ಪಿಸುವ ಕೆಲಸ ಮಾಡಿಲ್ಲ. ಪ್ರವಾದಿ ಪೈಗಂಬರ್ ಕಲಿಸಿದಂತೆ ತಾಳ್ಮೆಯೇ ನನ್ನ ಪ್ರಮುಖ ಅಸ್ತ್ರವಾಗಿದೆ. ನಾನು ಸಮಾಜ ವನ್ನು ಜೋಡಿಸುತ್ತಿದ್ದೇನೆಯೇ ವಿನಃ ಒಡೆಯುತ್ತಿಲ್ಲ. ಪವಿತ್ರ ಹಜ್ ಕರ್ಮದ ವೇಳೆ ನನ್ನ ತಪ್ಪನ್ನು ಕ್ಷಮಿಸು ಮತ್ತು ನನ್ನ ತೇಜೋವಧೆ ಮಾಡುವವರನ್ನು ಕೂಡ ಕ್ಷಮಿಸು ಎಂದು ಪ್ರಾರ್ಥಿಸಿದ್ದೇನೆ ಎಂದು ಯು.ಟಿ.ಖಾದರ್ ಹೇಳಿದರು.


ದ.ಕ. ಜಿಲ್ಲಾ ಖಾಝಿ ಅಲ್ಹಾಜ್ ತ್ವಾಕಾ ಅಹ್ಮದ್ ಮುಸ್ಲಿಯಾರ್, ಉಡುಪಿ ಸಂಯುಕ್ತ ಖಾಝಿ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ, ಅಬ್ದುಲ್ ಅಝೀಝ್ ದಾರಿಮಿ, ಡಾ. ಎಂಎಸ್‌ಎಂ ಅಬ್ದುರ‌್ರಶೀದ್ ಝೈನಿ ಕಾಮಿಲ್, ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮುಹಮ್ಮದ್ ಕುಂಞಿ, ಯೆನೆಪೋಯ ಅಬ್ದುಲ್ಲಾ ಕುಂಞಿ ಅಭಿನಂದಿಸಿ ಮಾತನಾಡಿದರು.


ಕಾರ್ಯಕ್ರಮದಲ್ಲಿ ನಿವೃತ್ತ ಡಿಸಿಪಿ ಜಿ.ಎ.ಬಾವ, ಯುನಿಟಿ ಹೆಲ್ತ್ ಕಾಂಪ್ಲೆಕ್ಸ್‌ನ ಅಧ್ಯಕ್ಷ ಡಾ. ಹಬೀಬುರ‌್ರಹ್ಮಾನ್, ದ.ಕ.ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್, ಮುಡಾ ಮಾಜಿ ಅಧ್ಯಕ್ಷ ಹಾಜಿ ಇಬ್ರಾಹೀಂ ಕೋಡಿಜಾಲ್, ಕಣಚೂರು ಗ್ರೂಪ್‌ನ ಅಧ್ಯಕ್ಷ ಡಾ. ಕಣಚೂರು ಮೋನು, ಮಾಜಿ ಮೇಯರ್ ಕೆ. ಅಶ್ರಫ್, ಉದ್ಯಮಿಗಳಾದ ಝಕರಿಯಾ ಜೋಕಟ್ಟೆ, ಮನ್ಸೂರ್ ಅಹ್ಮದ್ ಅಝಾದ್, ಬಿಲ್ಡರ್‌ಗಳಾದ ಮುಸ್ತಫಾ ಭಾರತ್, ಸಿರಾಜ್ ಅಹ್ಮದ್, ಪ್ರಮುಖರಾದ ಮುಹಮ್ಮದ್ ಹನೀಫ್ ಹಾಜಿ ಬಂದರ್, ಕೆ.ಕೆ. ಶಾಹುಲ್ ಹಮೀದ್ ಮತ್ತಿತರರು ಉಪಸ್ಥಿತರಿದ್ದರು. ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್‌ನ ಅಧ್ಯಕ್ಷ ಎಸ್.ಎಂ. ರಶೀದ್ ಹಾಜಿ ಸ್ವಾಗತಿಸಿದರು. ನಿಸಾರ್ ಫಕೀರ್ ಮುಹಮ್ಮದ್ ಕಾರ್ಯಕ್ರಮ ನಿರೂಪಿಸಿದರು.









































Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News