ಪತ್ರಕರ್ತರ ಭವಿಷ್ಯದ ಸವಾಲುಗಳಿಗೆ ಸೃಜನಶೀಲತೆಯೇ ಪರಿಹಾರ: ವಾಲ್ಟರ್ ನಂದಳಿಕೆ
ಮಂಗಳೂರು, ಜು.2: ಮಾಧ್ಯಮ ಕ್ಷೇತ್ರದಲ್ಲಿ ಡಿಜಿಟಲ್ ,ಕೃತಕ ಬುದ್ಧಿ ಮತ್ತೆಯ ತಂತ್ರಜ್ಞಾನದ ಪ್ರವೇಶವಾಗಿದ್ದರೂ ಪತ್ರಕರ್ತರು ಭವಿಷ್ಯದ ಸವಾಲುಗಳ ಬಗ್ಗೆ ಹೆದರಬೇಕಾಗಿಲ್ಲ. ಸೃಜನಶೀಲತೆ ಇದ್ದರೆ ಯಾವುದೇ ಸವಾಲನ್ನು ಎದುರಿಸಲು ಸಾಧ್ಯ ಎಂದು ದೈಜಿ ವರ್ಲ್ಡ್ ಮೀಡಿಯಾದ ಸಂಪಾದಕ ವಾಲ್ಟರ್ ನಂದಳಿಕೆ ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಕಾರ್ಯ ನಿರತ ಪತ್ರಕರ್ತರ ಸಂಘದ ವತಿಯಿಂದ ಮಂಗಳೂರು ಪತ್ರಿಕಾ ಭವನದಲ್ಲಿ ಬುಧವಾರ ಆಯೋಜಿಸಲಾದ ಪತ್ರಿಕಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾಧ್ಯಮದ ಸವಾಲು ಗಳು ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.
ಮಾಧ್ಯಮಗಳು ಜನರಲ್ಲಿ ವಿಶ್ವಾಸಾರ್ಹತೆಯನ್ನು ಮೂಡಿಸುವ ಬಗ್ಗೆ ಹೆಚ್ಚು ಕಾರ್ಯ ಪ್ರವೃತ್ತ ವಾಗಬೇಕಾ ಗಿದೆ. ಮಾಧ್ಯಮಗಳ ಬೆಳವಣಿಗೆಯಿಂದಾಗಿ ಪತ್ರಿಕಾ ಓದುಗರ ಸಂಖ್ಯೆ ಕಡಿಮೆಯಾಗಿದ್ದರೂ, ಮುದ್ರಣ ಮಾಧ್ಯಮಗಳಲ್ಲಿ ಪ್ರಕಟವಾಗುವ ಸುದ್ದಿಯ ಬಗ್ಗೆ ಜನರಿಗೆ ಹೆಚ್ಚು ವಿಶ್ವಾಸ ಇನ್ನೂ ಉಳಿದಿದೆ ಎನ್ನುವುದು ಅಧ್ಯಯನ ವರದಿ ತಿಳಿಸಿದೆ ಎಂದು ಹೇಳಿದರು
ಇತ್ತೀಚೆಗೆ ಸಮೀಕ್ಷೆಯೊಂದರ ಪ್ರಕಾರ ಶೇ.60ರಷ್ಟು ಜನರು ಮುದ್ರಣ ಮಾಧ್ಯಮವನ್ನು ನಂಬುತ್ತಾರೆ. ಶೇ.63ರಷ್ಟು ಜನರು ಟಿ.ವಿ ನ್ಯೂಸ್ ನ್ನು ನಂಬುವುದಿಲ್ಲ.ಶೇ 89 ರಷ್ಟು ಮಂದಿ ಸಾಮಾಜಿಕ ಮಾಧ್ಯಮ ಗಳನ್ನು ಆನ್‌ಲೈನ್ ವೆಬ್ ಸೈಟ್‌ಗಳನ್ನು ನಂಬುವುದಿಲ್ಲ ಎಂದವರು ಹೇಳಿದರು.
ಪತ್ರಿಕೋದ್ಯಮ ಶಿಕ್ಷಣ ನೀಡುವ ದೊಡ್ಡ ದೊಡ್ಡ ಶಿಕ್ಷಣ ಸಂಸ್ಥೆಗಳು ಮುಚ್ಚುತ್ತಿದ್ದರೂ, ವಿದ್ಯಾರ್ಥಿಗಳು ಆತಂಕಪಡಬೇಕಾಗಿಲ್ಲ. ಮಾಧ್ಯಮ ರಂಗದಲ್ಲಿ ಇನ್ನಷ್ಟು ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿದೆ. ಪತ್ರಕರ್ತರು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಮುನ್ನಡೆಯಬೇಕಾಗಿದೆ ಎಂದು ನುಡಿದರು.
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಉಮ್ಮರ್ ಯು.ಎಚ್. ಮಾತನಾಡಿ, ಮಾಧ್ಯಮ ಕ್ಷೇತ್ರದಲ್ಲಿ ಸಾಕಷ್ಟು ಸವಾಲುಗಳಿವೆ. ಈ ನಡುವೆ ಮಾಧ್ಯಮ ಕ್ಷೇತ್ರದ ತಳ ಮಟ್ಟದಲ್ಲಿ ಪತ್ರಿಕಾ ವಿತರಣೆ ನಡೆಸುತ್ತಿರುವವರನ್ನು ಗೌರವಿಸುತ್ತಿರುವುದು ಶ್ಲಾಘನೀಯ ಎಂದರು.
ಮಂಗಳೂರಿನಲ್ಲಿ ಕನ್ನಡದ ಪ್ರಥಮ ಪತ್ರಿಕೆ ಆರಂಭಿಸಿದ ಹರ್ಮನ್ ಮೊಗ್ಲಿಂಗ್ ಹೆಸರಿನ ಪ್ರತಿಮೆ ಮತ್ತು ರಸ್ತೆಗೆ ಅವರ ಹೆಸರಿಡುವ ಅಗತ್ಯವಿದೆ ಎಂದು ಉಮ್ಮರ್ ಯು.ಎಚ್ ಅಭಿಪ್ರಾಯಿಸಿದರು.
ಪತ್ರಿಕಾ ದಿನಾಚರಣೆಯ ಸಂದರ್ಭದಲ್ಲಿ ಹಿರಿಯ ಪತ್ರಿಕಾ ವಿತರಕ ರಘುರಾಮ.ಕೆ ಅವರನ್ನು ಸನ್ಮಾನಿಸಲಾಯಿತು. ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಅಧ್ಯಕ್ಷತೆ ವಹಿಸಿದ್ದರು.
ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ ,ದಕ್ಷಿಣ ಕನ್ನಡ ನಿವೃತ್ತ ಅಪರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮ, ಜಿಲ್ಲಾ ವಾರ್ತಾಧಿಕಾರಿ ಖಾದರ್ ಶಾ, ಹಿರಿಯ ಪತ್ರಕರ್ತರಾದ ಚಿದಂಬರ ಬೈಕಂಪಾಡಿ, ಕುಮಾರನಾಥ್, ಕೆ.ವಿ.ಜಾರ್ಜ್ ದ.ಕ ಜಿಲ್ಲಾ ಪತ್ರಕರ್ತರ ಸಂಘದ ಉಪಾಧ್ಯಕ್ಷ ಭಾಸ್ಕರ ರೈ ಕಟ್ಟ,ಕೋಶಾಧಿಕಾರಿ ಪುಷ್ಪರಾಜ್ ಬಿ.ಎನ್ ಉಪಸ್ಥಿತರಿದ್ದರು.
ಕಾರ್ಯದರ್ಶಿ ವಿಜಯ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ವಂದಿಸಿದರು.