×
Ad

ಸೌಹಾರ್ದ ಪ್ರತಿಯೊಬ್ಬರಲ್ಲೂ ರಕ್ತಗತವಾಗಲಿ: ವಿಖ್ಯಾತಾನಂದ ಸ್ವಾಮೀಜಿ

Update: 2025-07-15 17:34 IST

ಮಂಗಳೂರು: ಹೃದಯದಲ್ಲಿ ಅಡಗಿರುವ ಸೌಹಾರ್ದವು ಪ್ರತಿಯೊಬ್ಬರಲ್ಲೂ ರಕ್ತಗತಗೊಳ್ಳಬೇಕು. ಆವಾಗ ಮಾತ್ರ ಸಮಾಜದಲ್ಲಿ ಶಾಂತಿ, ನೆಮ್ಮದಿ ನೆಲೆಸಲು ಸಾಧ್ಯವಿದೆ ಎಂದು ಬೆಂಗಳೂರಿನ ಈಡಿಗ ಮಠದ ವಿಖ್ಯಾತಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು.

ʼಹೃದಯ-ಹೃದಯಗಳನ್ನು ಬೆಸೆಯೋಣʼ ಎಂಬ ಘೋಷಣೆಯೊಂದಿಗೆ ಕರ್ನಾಟಕ ರಾಜ್ಯ ಸುನ್ನಿ ಯುವಜನ ಸಂಘವು ನಗರದ ಕ್ಲಾಕ್ ಟವರ್ ಬಳಿ ಮಂಗಳವಾರ ಆಯೋಜಿಸಿದ್ದ ಸೌಹಾರ್ದ ಸಂಚಾರ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಅವರು ಸಂದೇಶ ಭಾಷಣಗೈದರು.

ನಾವೆಲ್ಲರೂ ಒಂದೇ ಎಂಬ ಭಾವನೆ ಎಲ್ಲರಲ್ಲೂ ಮೂಡಿಬರಬೇಕು. ಆವಾಗ ಮಾತ್ರ ಹಿಂಸಾಚಾರ, ಕ್ರೋಧದಿಂದ ಮನುಷ್ಯ ಮುಕ್ತನಾಗಬಲ್ಲ. ಯಾರೇ ತಪ್ಪು ಮಾಡಲಿ, ಅವರನ್ನು ಯಾವ ಕಾರಣಕ್ಕೂ ನಾವು ಸಮರ್ಥಿಸಬಾರದು. ಬದಲಾಗಿ ತಕ್ಷಣದಿಂದ ದೂರ ಇಡಬೇಕು. ಅದರೊಂದಿಗೆ ನಾವು ಕೂಡ ಅಹಂಭಾವ, ಅಹಂಕಾರದಿಂದಲೂ ದೂರವಿರಬೇಕು ಎಂದು ವಿಖ್ಯಾತಾನಂದ ಸ್ವಾಮೀಜಿ ಹೇಳಿದರು.

ಪ್ರವಾದಿ ಪೈಗಂಬರ್ ಅವರನ್ನು ನಾರಾಯಣಗುರುಗಳು ಮುತ್ತುರತ್ನ ಎಂದಿದ್ದರು. ಯಾಕೆಂದರೆ ಪ್ರವಾದಿಯ ನಡೆನುಡಿ ಸ್ಪಷ್ಟವಾಗಿತ್ತು. ಆದರೆ ನಾವಿಂದು ಪ್ರವಾದಿಯ ಸಂದೇಶದಿಂದ ವಿಮುಖರಾಗುತ್ತಿ ದ್ದೇವೆ. ಹಾಗಾಗಬಾರದು, ಪ್ರವಾದಿ ಕಲಿಸಿಕೊಟ್ಟ ಮಾರ್ಗದಲ್ಲಿ ನಾವು ಸಾಗೋಣ ಎಂದು ವಿಖ್ಯಾತಾನಂದ ಸ್ವಾಮೀಜಿ ಹೇಳಿದರು.

ರಾಜ್ಯ ವಕ್ಫ್ ಕೌನ್ಸಿಲ್‌ನ ಉಪಾಧ್ಯಕ್ಷ ಮೌಲಾನಾ ಶಾಫಿ ಸಅದಿ ಬೆಂಗಳೂರು, ವಿಧಾನ ಪರಿಷತ್ ಶಾಸಕ ಐವನ್ ಡಿಸೋಜ, ಮಂಗಳೂರು ಧರ್ಮಪ್ರಾಂತದ ಸಾರ್ವಜನಿಕ ಸಂಪರ್ಕ ಅಧಿಕಾರಿ ರಾಯ್ ಕ್ಯಾಸ್ಟಲಿನೊ ಮತ್ತಿತರರು ಮಾತನಾಡಿದರು.

ಎಸ್‌ವೈಎಸ್ ರಾಜ್ಯಾಧ್ಯಕ್ಷ ಬಶೀರ್ ಸಅದಿ ಬೆಂಗಳೂರು ಅಧ್ಯಕ್ಷತೆ ವಹಿಸಿದ್ದರು. ಮೌಲಾನಾ ಎಮ್ಮೆಸ್ಸೆಂ ಅಬ್ದುರ‌್ರಶೀದ್ ಝೈನಿ ಕಾಮಿಲ್, ಎಸ್‌ವೈಎಸ್ ರಾಜ್ಯ ಉಪಾಧ್ಯಕ್ಷ ಸಯ್ಯದ್ ಹಾಮೀಂ ತಂಙಳ್ ಬಾಳೆ ಹೊನ್ನೂರು, ಸೈಯದ್ ಶಿಹಾಬ್ ತಂಙಳ್ ಮಾರನಹಳ್ಳಿ, ದ.ಕ. ಜಿಲ್ಲಾಧ್ಯಕ್ಷ ಮೆಹಬೂಬ್ ಸಖಾಫಿ ಕಿನ್ಯ ದ.ಕ.ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್, ಸಮಾಜ ಸೇವಕ ಹೈದರ್ ಪರ್ತಿಪ್ಪಾಡಿ, ಕಾಂಗ್ರೆಸ್ ಮುಖಂಡ ಪದ್ಮರಾಜ ರಾಮಯ್ಯ, ಸಿಪಿಎಂ ಮುಖಂಡ ಮುನೀರ್ ಕಾಟಿಪಳ್ಳ, ರೈತ ಸಂಘದ ಯಾದವ ಶೆಟ್ಟಿ, ಡಿವೈಎಫ್‌ಐ ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಝ್, ಸುನೀಲ್ ಕುಮಾರ್ ಬಜಾಲ್, ಮಾಜಿ ಕಾರ್ಪೊರೇಟರ್ ಅನಿಲ್ ಕುಮಾರ್, ಎ.ಸಿ. ವಿನಯರಾಜ್ ಮತ್ತಿತರರು ಪಾಲ್ಗೊಂಡಿದ್ದರು.

ಎಸ್‌ವೈಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಂ. ಅಬೂಬಕರ್ ಸಿದ್ದೀಕ್ ಆಶಯ ಭಾಷಣಗೈದರು. ಉಳ್ಳಾಲ ದರ್ಗಾ ಅಧ್ಯಕ್ಷ, ಸೌಹಾರ್ದ ಸಂಚಾರ ಸ್ವಾಗತ ಸಮಿತಿಯ ಅಧ್ಯಕ್ಷ ಹನೀಫ್ ಹಾಜಿ ಉಳ್ಳಾಲ ಸ್ವಾಗತಿಸಿದರು. ಹಾಫಿಳ್ ಯಾಕೂಬ್ ಸಅದಿ ನಾವೂರು, ಅಶ್ರಫ್ ಕಿನಾರಾ ಕಾರ್ಯಕ್ರಮ ನಿರೂಪಿಸಿ ದರು. ಇಸ್ಮಾಯೀಲ್ ಮಾಸ್ಟರ್ ಮರಿಕ್ಕಳ ವಂದಿಸಿದರು.







Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News