×
Ad

ನೀರು ನುಗ್ಗಿ ಮನೆಗಳಿಗೆ ಹಾನಿ: ಪರಿಹಾರ ಒದಗಿಸಲು ಸಾಮಾನ್ಯ ಸಭೆಯಲ್ಲಿ ಒತ್ತಾಯ

Update: 2025-07-20 12:12 IST

ಉಳ್ಳಾಲ: ವಿಪರೀತ ಮಳೆ ಹಿನ್ನೆಲೆ ಎರಡನೇ ಬಾರಿ ಹಲವು ಮನೆಗಳಿಗೆ ನೀರು ನುಗ್ಗಿ ಹಾನಿಯಾಗಿದೆ. ಇದಕ್ಕೆ ಸೂಕ್ತ ಪರಿಹಾರ ಒದಗಿಸುವಂತೆ ಆಗ್ರಹ ವ್ಯಕ್ತಪಡಿಸಿದ ಘಟನೆ ಉಳ್ಳಾಲ ನಗರ ಸಭೆಯ ಸಾಮಾನ್ಯ ಸಭೆ ಯಲ್ಲಿ ನಡೆಯಿತು.

ನಗರಸಭೆ ಅಧ್ಯಕ್ಷೆ ಶಶಿಕಲಾ ಅವರ ಅಧ್ಯಕ್ಷತೆಯಲ್ಲಿ ಶನಿವಾರ ಸಂಜೆ ನಡೆದ ಸಭೆಯಲ್ಲಿ ಸದಸ್ಯ ಖಲೀಲ್ ಮಾತನಾಡಿ, ಮೊನ್ನೆ ಸುರಿದ ವಿಪರೀತ ಮಳೆಗೆ ಹಲವು ಮನೆಗಳಿಗೆ ಹಾನಿಯಾಗಿದೆ. ಲಕ್ಷಾಂತರ ನಷ್ಟ ಆಗಿದೆ. ಅವರಿಗೆ‌ಪರಿಹಾರ ಒದಗಿಸಿಕೊಡಬೇಕು ಎಂದು ಒತ್ತಾಯಿಸಿದರು.

ಗ್ರಾಮಕರಣಿಕ ಸುರೇಶ್ ಮಾತನಾಡಿ, ಮನೆಗೆ ನೀರು ನುಗ್ಗಿದ ಪ್ರಕರಣಗಳಿಗೆ ಒಂದೇ ಬಾರಿ ಪರಿಹಾರ ಕೊಡಲು ಸಾಧ್ಯ ಆಗುತ್ತದೆ. ಒಂದು ಲಕ್ಷ ರೂ. ನಷ್ಟ ಆದರೂ ಐದು ಸಾವಿರ ಮಾತ್ರ ಪರಿಹಾರ ಸಿಗುತ್ತದೆ. ಎರಡನೇ ಬಾರಿಗೆ ವರದಿ ಕಳಿಸಿದರೂ ಪರಿಹಾರ ಮಂಜೂರು ಆಗುವುದಿಲ್ಲ. ಸರ್ಕಾರದ ಆದೇಶ ಪ್ರಕಾರ ಒಂದು ಬಾರಿ ಪರಿಹಾರ ನೀಡಲಾಗುತ್ತದೆ ಎಂದರು.

ಸದಸ್ಯ ದಿನಕರ್ ಉಳ್ಳಾಲ ಮಾತನಾಡಿ, ಚೆಂಬುಗುಡ್ಡೆ ಬಳಿ ಮರ ಕಡಿಯಲು ಕಳೆದ ಸಭೆಯಲ್ಲಿ ಅರಣ್ಯಾಧಿಕಾರಿ ಯವರ ಗಮನಕ್ಕೆ ತಂದಿದ್ದೇನೆ. ಈಗ ಗುಡ್ಡ ಕುಸಿದು ಬಿದ್ದಿದ್ದು, ಮರ ಕೂಡ ಬಿದ್ದಿದೆ. ಇದರಿಂದ ಏಕಮುಖ ಸಂಚಾರ ಇದೆ. ಈ ಗುಡ್ಡದ ಮೇಲಿರುವ ಮರದಿಂದ ಅಪಾಯ ಆಗಬಹುದು ಎಂದು 2024 ನವೆಂಬರ್ 15 ರಂದು ಜಿಲ್ಲಾಧಿಕಾರಿ, ಲೋಕೋಪಯೋಗಿ, ಅರಣ್ಯ ಇಲಾಖೆ ಜೊತೆಗೆ ನಗರಸಭೆ ಗೂ ಅರ್ಜಿ ಸಲ್ಲಿಸಿದ್ದೇನೆ. ಈ ಬಗ್ಗೆ ಕ್ರಮ ಆಗದ ಕಾರಣ ಈಗ ಗುಡ್ಡ ಜರಿದು ಬೀಳುತ್ತಿದೆ.ಇದಕ್ಕೆ ಹೊಣೆ ಯಾರು ಎಂದು ಪ್ರಶ್ನಿಸಿದರು.

ಕೌನ್ಸಿಲರ್ ಜಬ್ಬಾರ್ ಮಾತನಾಡಿ ಮಿಲ್ಲತ್ ನಗರ, ಉಳ್ಳಾಲ ಬೈಲ್ ನಲ್ಲಿ ಮನೆಗೆ ನೀರು ನುಗ್ಗಿ ಹಾನಿಯಾಗಿದೆ. ಇಲ್ಲಿ ರಾಜ ಕಾಲುವೆ ಇಲ್ಲ.ಕಟ್ಟಡ ಕಟ್ಟಲು ಪರವಾನಿಗೆ ನೀಡಲಾಗುತ್ತದೆ. ಹಾನಿಯಾದ ಮನೆಗಳಿಗೆ ಪರಿಹಾರ ಒಂದೇ ಬಾರಿ ಕೊಡಲಾಗುತ್ತದೆ. ಈ ಸಮಸ್ಯೆಗಳಿಗೆ ಪರಿಹಾರ ಆಗಬೇಕು ಎಂದು ಆಗ್ರಹಿಸಿದರು.

ಮಳೆ ಜೋರಾಗಿದೆ.ಚರಂಡಿ ವ್ಯವಸ್ಥೆ ಸರಿಯಾಗಿಲ್ಲ. ನಿಯಮ ಪ್ರಕಾರ ಎರಡು ಫೀಟ್ ರಾಜಕಾಲುವೆ ಇರಬೇಕು. ಇದನ್ನು ಸರಿಪಡಿಸಲು ಎಲ್ಲರೂ ಸಹಕಾರ ನೀಡಬೇಕು ಎಂದು ಪೌರಾಯುಕ್ತ ನವೀನ್ ಹೆಗ್ಡೆ ಸಭೆಗೆ ತಿಳಿಸಿದರು.

ರಾಜಕಾಲುವೆ ಸಮಸ್ಯೆ ಹಲವು ಕಡೆ ಇವೆ. ಇದನ್ನು ಸರಿಪಡಿಸಲು ಮೂರು ತಿಂಗಳು ಬೇಕು. ಅಲ್ಲಿಯವರೆಗೆ ಏನು ಪರಿಹಾರ ಇದೆ ಎಂದು ಕೌನ್ಸಿಲರ್ ದಿನಕರ್ ಉಳ್ಳಾಲ ಪ್ರಶ್ನಿಸಿದರು.

ಅಳೇಕಲ, ಹಳೆಕೋಟೆ ಯಲ್ಲಿ ಕುಡಿಯುವ ನೀರು ಇಲ್ಲ. ಚರಂಡಿ ಇಲ್ಲ. ಮಳೆ ನೀರು ಹೋಗುತ್ತಿಲ್ಲ. ಎಲ್ಲರೂ ಕೆಂಪು ನೀರು ಕುಡಿಯುತ್ತಿದ್ದಾರೆ ಎಂದು ಕೌನ್ಸಿಲರ್ ಅಸ್ಗರ್ ಆರೋಪಿಸಿದರು.

ಕುಡಿಯುವ ನೀರು, ಚರಂಡಿ ಮುಂತಾದ ಸಮಸ್ಯೆಗಳಿಗೆ ಪರಿಹಾರ ಮಾಡುತ್ತೇವೆ. ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆ ಮಾಡಲಾಗುವುದು. ಜಾಗ ಸರ್ವೆ ಮಾಡಿ ಚರಂಡಿ ಸಮಸ್ಯೆ ಇತ್ಯರ್ಥ ಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಪೌರಾಯುಕ್ತ ನವೀನ್ ಹೆಗ್ಡೆ ಭರವಸೆ ನೀಡಿದರು.

ಆರೋಗ್ಯ ಇಲಾಖೆ ಸಿಬ್ಬಂದಿ ಶಾರ್ಲೆಟ್ ಮಾತನಾಡಿ, ಡೆಂಗಿ, ಇಲಿಜ್ವರ ಪ್ರಕರಣ ಜಾಸ್ತಿ ಆಗಿದೆ. ಇದಕ್ಕೆ ಔಷಧಿ ಇಲ್ಲ. ನಿಯಂತ್ರಣದ ಮೂಲಕ ಮಾತ್ರ ಪರಿಹಾರ ಇದೆ. ಸೊಳ್ಳೆ ಉತ್ಪತ್ತಿ ಆಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಕೆರೆಬೈಲ್, ಮುಕ್ಕಚ್ಚೇರಿ ಪ್ರದೇಶದಲ್ಲಿ ನಮ್ಮ ಕ್ಲಿನಿಕ್ ಆಗಬೇಕು ಎಂದು ಮಾಹಿತಿ ನೀಡಿದರು.

ನಗರಸಭೆಗೆ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಕೇಂದ್ರ ಸರ್ಕಾರ ಕಮ್ಯುನಿಟಿ ಮೊಬೈಲೇಸೆರ್ಸ್ ಆಗಿ 9 ಜನ ನೇಮಕಗೊಂಡಿದ್ದಾರೆ. ಅವರಿಗೆ ಕೇಂದ್ರದ ಅನುದಾನ ದಿಂದ ಮಾಸಿಕ ಪಿಂಚಣಿ ನೀಡಲಾಗುವುದು. ಅವರಿಗೆ ಮನೆ ಮನೆಗೆ ತೆರಳಿ ಕಸ ವಿಂಗಡಣೆ ಮಾಡುವುದು, ಮಾಹಿತಿ ನೀಡುವುದು, ತೆರಿಗೆ, ನೀರಿನ ಶುಲ್ಕ ವಸೂಲಿ ಜವಾಬ್ದಾರಿ ಇದೆ. ಇವರು ನಗರಸಭೆ ವ್ಯಾಪ್ತಿಯವರೇ ಆಗಿದ್ದಾರೆ ಎಂದು ಪೌರಾಯುಕ್ತ ನವೀನ್ ಹೆಗ್ಡೆ ಸಭೆಗೆ ಮಾಹಿತಿ ನೀಡಿದರು.

ಇವರ ನೇಮಕಾತಿ ಬಗ್ಗೆ ಕೌನ್ಸಿಲರ್ ಗಳ ಗಮನಕ್ಕೆ ಬಂದಿಲ್ಲ. ಈ ವಿಚಾರ ಯಾಕೆ ತಿಳಿಸಿಲ್ಲ ಎಂದು ಪ್ರಶ್ನಿಸಿ ಕೌನ್ಸಿಲರ್ ದಿನಕರ್ ಉಳ್ಳಾಲ ತರಾಟೆಗೈದರು.

ಈ ವಿಚಾರ ನಮ್ಮ ಗಮನಕ್ಕೂ ಬಂದಿಲ್ಲ.ಅಧ್ಯಕ್ಷರ ಅನುಮತಿ ಮೇರೆಗೆ ಚರ್ಚೆ ಆಗಿಲ್ಲ ಸಭೆಯಲ್ಲಿ ಚರ್ಚೆ ಮಾಡದೇ ಅವರನ್ನು ಹೇಗೆ ನೇಮಕ ಮಾಡಿದ್ದೀರಿ ಎಂದು ಸದಸ್ಯ ಖಲೀಲ್ ಪ್ರಶ್ನಿಸಿದರು.ಈ ವಿಚಾರದಲ್ಲಿ ವ್ಯಾಪಕ ಚರ್ಚೆ ನಡೆಯಿತು.

ಸಭೆಯಲ್ಲಿ ಉಪಾಧ್ಯಕ್ಷ ಸಪ್ನಾ ಹರೀಶ್, ಸ್ಥಾಯಿ ಸಮಿತಿ ಅಧ್ಯಕ್ಷ ಅಶ್ರಫ್ ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News