×
Ad

ಮಕ್ಕಳು ದುಶ್ಚಟಗಳಿಗೆ ಬಲಿಯಾಗದಂತೆ ಹೆತ್ತವರು ಎಚ್ಚರವಹಿಸಬೇಕಾಗಿದೆ: ಮುನವರ್‌ ಝಮಾ

Update: 2023-10-27 23:23 IST

ಮಂಗಳೂರು : ಮಕ್ಕಳು ದುಶ್ಚಟಗಳಿಗೆ ಬಲಿಯಾಗದಂತೆ ಹೆತ್ತವರು ಎಚ್ಚರವಹಿಸಬೇಕಾಗಿದೆ ಎಂದು ಅಂತರ್‌ರಾಷ್ಟ್ರೀಯ ಮೋಟಿವೇಶನಲ್ ಸ್ಪೀಕರ್ ಮುನವರ್‌ ಝಮಾ ತಿಳಿಸಿದ್ದಾರೆ.

ನಗರದ ಟಿಎಂಎ ಪೈ ಸಭಾಂಗಣದಲ್ಲಿ ಶುಕ್ರವಾರ ರಾತ್ರಿ ಎಚ್‌ಐಎಫ್ ವತಿಯಿಂದ ನಡೆದ ‘ಪಬ್ಲಿಕ್ ಟಾಕ್ ಫಾರ್ ಯೂತ್ಸ್ ಆ್ಯಂಡ್ ಪೇರೆಂಟ್ಸ್ʼ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹೆತ್ತವರು, ರಾಜಕಾರಣಿಗಳು, ಪೊಲೀಸರು, ಸಮಾಜ ಸೇವಕರು, ಬುದ್ಧಿಜೀವಿಗಳು ಒಟ್ಟಾಗಿ ಶ್ರಮಿಸಿದರೆ ಯುವಜನರನ್ನು ದುಶ್ಚಟಗಳಿಗೆ ಬಲಿಯಾಗದಂತೆ ಎಚ್ಚರ ವಹಿಸಲು ಸಾಧ್ಯ. ಎಲ್ಲರೂ ಒಂದಾಗಿ ಶ್ರಮಿಸಿದರೆ ಭಾರತದಲ್ಲಿ ಯಾವನೇ ಒಬ್ಬ ಯುವಕ ದುಶ್ಚಟಕ್ಕೆ ಬಲಿಯಾಗಲಾರ ಎಂದು ಹೇಳಿದರು.

ಯಾವುದೇ ದೇಶ ಸೂಪರ್ ಪವರ್ ಆಗಲು ಆ ದೇಶದ ಎಲ್ಲರೂ ಸೂಪರ್ ಪವರ್ ಆಗಬೇಕಾಗಿದೆ. ಒಬ್ಬ ವ್ಯಕ್ತಿಯನ್ನು ಸೂಪರ್ ಪವರ್ ಮಾಡುವ ಶಕ್ತಿ ಶಿಕ್ಷಕನಿಗೆ ಮಾತ್ರ ಇದೆ ಎಂದು ನುಡಿದರು.

ನೀವು ಯಾವುದೇ ವೃತ್ತಿಯನ್ನು ಆಯ್ದುಕೊಳ್ಳುವಾಗ ಐದು ವಿಚಾರಗಳನ್ನು ಗಮನದಲ್ಲಿಟ್ಟುಕೊಳ್ಳಿ, ಆ ವೃತ್ತಿಯಲ್ಲಿ ನಿಮಗೆ ಆಸಕ್ತಿ ಇರಬೇಕು. ಅದರಿಂದ ಆರ್ಥಿಕ ಶಕ್ತಿ ದೊರೆಯುವಂತಾಗಬೇಕು ಮತ್ತು ಹೆಚ್ಚು ಜನರಿಗೆ ಅದರಿಂದ ಉಪಯೋಗ ವಾಗಬೇಕು. ಭಗವಂತನಿಗೆ ಇಷ್ಟವಾಗುವ ವೃತ್ತಿಯನ್ನು ಆಯ್ದುಕೊಳ್ಳಿ ಎಂದು ಹೇಳಿದರು.

ವಿರಾಟ್ ಕೊಹ್ಲಿ ಬ್ಯಾಟಿಂಗ್ ಮಾಡುವಾಗ ಮೊಬೈಲ್‌ನಿಂದ ದೂರವಿದ್ದು ತನ್ನ ಗುರಿಯತ್ತ ನೋಡುತ್ತಿರುವಂತೆ ವಿದ್ಯಾರ್ಥಿ ಗಳ ಗುರಿ ಕೇವಲ ಅಧ್ಯಯನದ ಕಡೆಗೆ ಇರಲಿ ಎಂದರು. ಶಿಕ್ಷಕರ ಕೈಯಲ್ಲಿ ಬೆತ್ತ ಮತ್ತು ಗಡಿಯಾರ ಇರಬಾರದು. ತನ್ನ ಕೈಯಲ್ಲಿ ಗಡಿಯಾರ ಇಲ್ಲ. ತಮ್ಮ ಬಳಿ 3 ಲಕ್ಷ ವಿದ್ಯಾರ್ಥಿಗಳು ಶಿಕ್ಷಣ ಪಡೆದಿದ್ದಾರೆ. ಆದರೆ ಯಾರಿಗೂ ಹೊಡೆದಿಲ್ಲ ಎಂದು ಹೇಳಿದರು. ಸುಮಾರು ಒಂದೂವರೆ ಗಂಟೆ ಕಾಲ ಮುನವರ್‌ ಝಮಾ ಮಾತನಾಡಿದರು.

ರಾಜ್ಯ ವಿಧಾನ ಸಭಾ ಸ್ಪೀಕರ್ ಯು.ಟಿ.ಖಾದರ್ ಅವರು ಮುನವರ್‌ ಝಮಾ ಅವರಿಗೆ ಪ್ರಶಸ್ತಿ ನೀಡಿ ಅಭಿನಂದಿಸಿದರು.

ಎಚ್‌ಐಎಫ್ ಅಧ್ಯಕ್ಷ ಆದಿಲ್ ಫರ್ವೆಝ್, ಹುಬ್ಬಳ್ಳಿ ಸನಾ ಶಾಹಿನ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅಶ್ರಫ್ ಅಲಿ ಉಪಸ್ಥಿತರಿದ್ದರು.

ಯು.ಟಿ.ಖಾದರ್ ಅವರ ಪುತ್ರಿ ನಸೀಮಾ ಹವ್ವಾ ಸ್ವಾಗತಿಸಿದರು. ರಿಝ್ವಾನ್ ಪಾಂಡೇಶ್ವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿಲಾಲ್ ರೈಫ್ ಕಿರಾತ್ ಪಠಿಸಿದರು. ಶಾಝ್ ಅಹ್ಮದ್ ಕಾರ್ಯಕ್ರಮ ನಿರೂಪಿಸಿದರು. ಸಂಚಾಲಕ ಎಚ್‌ಎಂ ಫಾರೂಕ್ ವಂದಿಸಿದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News