ಪುತ್ತೂರು | ಹಾಸಿಗೆ ಹಿಡಿದಿರುವ ಐತ ಅವರಿಗೆ ಆಸರೆಯಾದ ಹಿದಾಯ ಫೌಂಡೇಶನ್
ಮಂಗಳೂರು : ಸುಮಾರು ನಾಲ್ಕು ವರ್ಷಗಳಿಂದ ಹಾಸಿಗೆ ಹಿಡಿದಿರುವ ಪುತ್ತೂರಿನ ವ್ಯಕ್ತಿಯೋರ್ವರಿಗೆ ಮಂಗಳೂರಿನ ಸಮಾಜ ಸೇವಾ ಸಂಸ್ಥೆ ಹಿದಾಯ ಫೌಂಡೇಶನ್ ನೆರವಿನ ಹಸ್ತ ಚಾಚಿದೆ.
ಪುತ್ತೂರು ತಾಲೂಕಿನ ಗ್ರಾಮೀಣ ಪ್ರದೇಶ ಪಡುವನ್ನೂರು ಗ್ರಾಮದ ಮುಕಾರಿಮೂಲೆ ನಿವಾಸಿ ಕೇಪು ಅವರ ಪುತ್ರ ಐತ ಎಂಬವರು ಓರ್ವ ಪದವೀಧರ. ಪದವಿ ವ್ಯಾಸಂಗಕ್ಕಾಗಿ ಪುತ್ತೂರಿಗೆ ಬಂದು 1995 ರಲ್ಲಿ ಫಿಲೋಮಿನ ಕಾಲೇಜಿನಲ್ಲಿ ಅಂತಿಮ ಬಿ.ಎ. ಪದವಿಯನ್ನು ಅಧ್ಯಯನ ಮಾಡಿದ ಬಳಿಕ ಯಾವುದೇ ಸರಕಾರಿ ಅಥವಾ ಖಾಸಗಿ ಕೆಲಸ ಸಿಗದೆ ಇದ್ದಾಗ ಜೀವನೋಪಾಯಕ್ಕಾಗಿ ಕೂಲಿ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿದ್ದರು.
ಪತ್ನಿ, ಇಬ್ಬರು ಮಕ್ಕಳೊಂದಿಗೆ ಜೀವನ ಸಾಗಿಸುತ್ತಿದ್ದ ಇವರು 2021 ರಲ್ಲಿ ಮರದಿಂದ ಬಿದ್ದು ಬೆನ್ನು ಮೂಳೆ ಮತ್ತು ಸೊಂಟಕ್ಕೆ ತೀವ್ರ ಗಾಯಗೊಂಡ ಪರಿಣಾಮ ಹಾಸಿಗೆ ಹಿಡಿದಿದ್ದರು.
ಈ ಮಧ್ಯೆ ಐತ ಅವರ ಬದುಕಿನ ಸಂಕಷ್ಟಗಳನ್ನು ಅರಿತ ಅವರ ಪದವಿ ವಿದ್ಯಾಭ್ಯಾಸ ವೇಳೆಯ ಸಹಪಾಠಿ, ನ್ಯಾಯವಾದಿ ಇಸ್ಮಾಯಿಲ್ ನೆಲ್ಯಾಡಿ ಅವರು ಮಂಗಳೂರಿನ ಸಮಾಜ ಸೇವಾ ಸಂಸ್ಥೆ ಹಿದಾಯ ಫೌಂಡೇಶನ್ ಗಮನಕ್ಕೆ ತಂದರು. ಹಿದಾಯ ಫೌಂಡೇಶನ್ ನ ವೈಸ್ ಚೇರ್ಮನ್ ಮುಹಮ್ಮದ್ ಹನೀಫ್ ಹಾಜಿ ಹಾಗೂ ಸದಸ್ಯರು ಐತ ಅವರ ಮನೆಗೆ ಖುದ್ದಾಗಿ ಎರಡು ಸಲ ಭೇಟಿ ನೀಡಿ ಅವರ ನೆರವಿಗೆ ಮುಂದಾಗಿದ್ದಾರೆ. ಮೊದಲ ಭೇಟಿಯ ಫಲವಾಗಿ ಹಿದಾಯ ಫೌಂಡೇಶನ್ ವತಿಯಿಂದ ಪ್ರತಿ ತಿಂಗಳು ಮಾಸಿಕ ಪಡಿತರ ವಿತರಣೆಯನ್ನು ಆರಂಭಿಸಲಾಗಿದೆ. ಎರಡನೇ ಭೇಟಿಯ ಬಳಿಕ ಐತ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆ ನೀಡಲು ಕ್ರಮವಹಿಸಲಾಗಿದೆ. ಸಂಸ್ಥೆಯ ವೈಸ್ ಚೇರ್ಮನ್ ಎಸ್ ಎಂ ಮುಸ್ತಫಾ ಅವರ ಪ್ರಾಯೋಜಕತ್ವದಲ್ಲಿ ಐತ ಅವರಿಗೆ ಒಂದು ಸುಸಜ್ಜಿತ ಶೌಚಾಲಯ ನಿರ್ಮಿಸಲು ಮುಂದಾಗಿದೆ. ಮುಂದುವರಿದು ಹಿದಾಯ ಫೌಂಡೇಶನ್ ವತಿಯಿಂದ ಮಕ್ಕಳ ಮುಂದಿನ ವಿದ್ಯಾಭ್ಯಾಸಕ್ಕೂ ನೆರವು ನೀಡಲು ನಿರ್ಧರಿಸಲಾಗಿದೆ.
ಗ್ರಾಮೀಣ ಪ್ರದೇಶದ ಬಡಕುಟುಂಬದ ಐತ ಅವರ ಸಂಕಷ್ಟವನ್ನು ಮನಗಂಡು ದೂರದ ಮಂಗಳೂರಿನ ಹಿದಾಯ ಫೌಂಡೇಶನ್ ಮಾನವೀಯ ನೆರವು ನೀಡಿರುವುದು ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ. ಐತ ಅವರ ಕುಟುಬವು ಹಿದಾಯ ಫೌಂಡೇಶನ್ ಸಂಸ್ಥೆಗೆ ಮತ್ತು ದಾನಿಗಳಿಗೆ ಮನದಾಳದ ಕೃತಜ್ಞತೆ ಸಲ್ಲಿಸಿದೆ.
ಮನೆ ಭೇಟಿಯ ನಿಯೋಗದಲ್ಲಿ ಹಿದಾಯ ಫೌಂಡೇಶನ್ ನ ಮುಹಮ್ಮದ್ ಹನೀಫ್ ಹಾಜಿ, ಎಫ್ ಎಂ ಬಶೀರ್, ಆಸೀಫ್ ಇಕ್ಬಾಲ್, ಹಕೀಂ ಕಲಾಯಿ ,ಇಸ್ಮಾಯಿಲ್ ನೆಲ್ಯಾಡಿ, ಸ್ಥಳೀಯ ಸಾಮಾಜಿಕ ಮುಖಂಡ ಮೊಹಮ್ಮದ್ ಬಡಗನ್ನೂರು ಉಪಸ್ಥಿತರಿದ್ದರು.