×
Ad

ಪ್ರೊ. ವಿವೇಕ ರೈ, ಅಬ್ದುಸ್ಸಲಾಮ್ ಪುತ್ತಿಗೆ, ವಲೇರಿಯನ್ ಕ್ವಾಡ್ರಸ್ ಸೇರಿ 7 ಮಂದಿಗೆ ಸಂದೇಶ ಪ್ರಶಸ್ತಿ

Update: 2024-01-20 14:32 IST

ಮಂಗಳೂರು: ಕರ್ನಾಟಕ ಪ್ರಾಂತೀಯ ಕಥೋಲಿಕ ಧರ್ಮಾಧ್ಯಕ್ಷರ ಮಂಡಳಿಯ ಆಶ್ರಯದಲ್ಲಿ ಸಂದೇಶ ಸಂಸ್ಕೃತಿ ಮತ್ತು ಶಿಕ್ಷಣ ಪ್ರತಿಷ್ಠಾನದ ವತಿಯಿಂದ ನೀಡಲಾಗುವ 2024ನೆ ಸಾಲಿನ ಸಂದೇಶ ಪ್ರಶಸ್ತಿಗೆ ಏಳು ಮಂದಿ ಸಾಧಕರು ಹಾಗೂ ವಿಶೇಷ ಪ್ರಶಸ್ತಿಗೆ ಜನಶಿಕ್ಷಣ ಸೇವಾ ಟ್ರಸ್ಟ್ ಆಯ್ಕೆಯಾಗಿದೆ.

ಸಂದೇಶ ಸಾಹಿತ್ಯ ಪ್ರಶಸ್ತಿ (ಕನ್ನಡ): ಪ್ರೊ. ಬಿ.ಎ.ವಿವೇಕ ರೈ; ಸಂದೇಶ ಸಾಹಿತ್ಯ ಪ್ರಶಸ್ತಿ (ಕೊಂಕಣಿ): ವಲೇರಿಯನ್ ಕ್ವಾಡ್ರಸ್; ಸಂದೇಶ ಸಾಹಿತ್ಯ ಪ್ರಶಸ್ತಿ (ತುಳು): ಮುದ್ದು ಮೂಡುಬೆಳ್ಳೆ; ಸಂದೇಶ ಮಾಧ್ಯಮ ಪ್ರಶಸ್ತಿ: ಅಬ್ದುಸ್ಸಲಾಮ್ ಪುತ್ತಿಗೆ, ವಾರ್ತಾ ಭಾರತಿ ದೈನಿಕದ ಪ್ರಧಾನ ಸಂಪಾದಕ; ಸಂದೇಶ ಕೊಂಕಣಿ ಸಂಗೀತ ಪ್ರಶಸ್ತಿ: ಆಲ್ವಿನ್ ಡಿಕುನ್ಹಾ; ಸಂದೇಶ ಕಲಾ ಪ್ರಶಸ್ತಿ: ಚಂದ್ರನಾಥ ಆಚಾರ್ಯ; ಸಂದೇಶ ಶಿಕ್ಷಣ ಪ್ರಶಸ್ತಿ: ಹುಚ್ಚಮ್ಮ ಚೌದ್ರಿ ಆಯ್ಕೆಯಾಗಿದ್ದಾರೆ ಎಂದು ಪ್ರತಿಷ್ಠಾನದ ನಿರ್ದೇಶಕ ವಂ. ಡಾ. ಸುದೀಪ್ ಪಾಲ್ ತಿಳಿಸಿದರು.

ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, ಫೆ. 11ರಂದು ಸಂಜೆ 5.30ಕ್ಕೆ ಸಂದೇಶ ಸಂಸ್ಥೆ ಆವರಣದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ಬೆಂಗಳೂರಿನ ಆರ್ಚ್ ಬಿಷಪ್ ಮತ್ತು ಕರ್ನಾಟಕ ಪ್ರಾದೇಶಿಕ ಬಿಷಪ್ ಸಮ್ಮೇಳನದ ಅಧ್ಯಕ್ಷರಾದ ಅ. ವಂ. ಡಾ. ಪೀಟರ್ ಮಚಾದೋ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷ ಯು.ಟಿ.ಖಾದರ್, ಬಳ್ಳಾರಿಯ ಬಿಷಪ್ ಮತ್ತು ಸಂಸ್ಥೆಯ ಅಧ್ಯಕ್ಷರು ಅ ವಂ. ಡಾ. ಹೆನ್ರಿ ಡಿಸೋಜ, ಮಂಗಳೂರಿನ ಬಿಷಪ್ ಅ. ವಂ. ಡಾ. ಪೀಟರ್ ಪೌಲ್ ಸಲ್ದಾನ್ಹಾ, ಉಡುಪಿಯ ಬಿಷಪ್ ಅ. ವಂ. ಡಾ. ಜೆರಾಲ್ಡ್ ಐಸಾಕ್ ಲೋಬೋ, ಸಂಸ್ಥೆಯ ಟ್ರಸ್ಟಿ ಫಾ. ಐವನ್ ಪಿಂಟೋ ಭಾಗವಹಿಸಲಿದ್ದಾರೆ ಎಂದವರು ಹೇಳಿದರು.

ಸಮಾಜದಲ್ಲಿ ವಿವಿಧ ವಿಭಾಗಗಳಲ್ಲಿ ಅಸಾಧಾರಣ ಕೊಡುಗೆ ನೀಡಿದ ಸಾಧಕರು ಹಾಗೂ ಸಂಸ್ಥೆಗಳನ್ನು ಗುರುತಿಸಿ ಸಂದೇಶ ಪ್ರಶಸ್ತಿ ನೀಡಲಾಗುತ್ತಿದೆ. ಸಂದೇಶ ಸಂಸ್ಥೆಯು ಇತ್ತೀಚೆಗೆ ಕರ್ನಾಟಕ ಗಂಗೂಭಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದೊಂದಿಗೆ ಒಪ್ಪಂದ ಮಾಡಿಕೊಂಡಿದೆ ಎಂದು ಅವರು ಹೇಳಿದರು.

ಸಂಸ್ಥೆಯ ಟ್ರಸ್ಟಿ ರಾಯ್ ಕ್ಯಾಸ್ತಲಿನೊ, ಆಯ್ಕೆ ಸಮಿತಿ ಅಧ್ಯಕ್ಷ ಚಿನ್ನಪ್ಪ ಗೌಡ, ಸದಸ್ಯ ಅಡ್ವಕೇಟ್ ಬಿ.ಎ. ಮುಹಮ್ಮದ್ ಹನೀಫ್ ಉಪಸ್ಥಿತರಿದ್ದರು.




 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News