×
Ad

ರಾಜ್ಯ ಬಿಜೆಪಿ ಆಂತರಿಕ ಸಮಸ್ಯೆಯಿಂದ ಅವನತಿಯ ಹಾದಿ ಹಿಡಿದಿದೆ: ಐವನ್ ಡಿಸೋಜ

Update: 2023-08-19 13:21 IST

ಮಂಗಳೂರು, ಆ.19: ರಾಜ್ಯದಲ್ಲಿ ಬಿಜೆಪಿಯು ಆಂತರಿಕ ಸಮಸ್ಯೆಯಿಂದ ನಿರ್ನಾಮವಾಗುವ ಹಾದಿಯಲ್ಲಿದೆ. ಇದೇ ಕಾರಣಕ್ಕೆ ವಿಧಾನಸಭೆಯಲ್ಲಿ ವಿಪಕ್ಷ ನಾಯಕನ್ನು ಆರಿಸಲಾಗದ ಸ್ಥಿತಿಗೆ ತಲುಪಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ, ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ ಹೇಳಿದ್ದಾರೆ.

ನಗರದಲ್ಲಿರುವ ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ನಾಯಕರಾದ ಎಸ್.ಟಿ.ಸೋಮಶೇಖರ್, ಶಿವರಾಮ ಹೆಬ್ಬಾರ್ ತಮ್ಮ ಸೋಲಿಗೆ ಬಿಜೆಪಿಯವರೇ ಕಾರಣ ಎನ್ನುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರೂ ಟೀಕಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರ ಅವಧಿ ಪೂರ್ಣಗೊಂಡು ಈಗ ಅವಧಿ ಮೀರಿದ ಔಷಧಿಯ ರೀತಿಯಲ್ಲಿ ನಳಿನ್ ಕುಮಾರ್ ಕಟೀಲು ಬಿಜೆಪಿಯಲ್ಲಿದ್ದಾರೆ. ಬಸವರಾಜ ಬೊಮ್ಮಾಯಿ ಅವರು ಜೆಡಿಎಸ್ ಮುಖಂಡ ಎಚ್.ಡಿ.ಕುಮಾರಸ್ವಾಮಿಗೆ ಶರಣಾಗಿದ್ದಾರೆ. ಈ ರೀತಿ ಬಿಜೆಪಿ ರಾಜ್ಯದಲ್ಲಿ ಅವನತಿಯ ಹಾದಿಯಲ್ಲಿದೆ ಎಂದು ಟೀಕಿಸಿದರು.

ಬಿಜೆಪಿ ಸರಕಾರದ ಅವಧಿಯ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸಲು ನ್ಯಾ.ನಾಗಮೋಹನ್ ದಾಸ್ ನೇತೃತ್ವದ ಸಮಿತಿ ರಚಿಸಲಾಗಿದೆ. ಕಾಂಗ್ರೆಸ್ ಗ್ಯಾರಂಟಿ ಯೋಜನೆ ಗಳಿಗೆ ಜನರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಬಿಬಿಎಂಪಿ, ಜಿ.ಪಂ,ತಾ.ಪಂ ಚುನಾವಣೆಗೆ ಸರ್ಕಾರ ಸಿದ್ಧತೆ ನಡೆಸುತ್ತಿದೆ ಎಂದರು.

ವೆನ್ಲಾಕ್ ಆಸ್ಪತ್ರೆಯ ಸಮಸ್ಯೆ ಗಳ ಬಗ್ಗೆ ಟೀಕೆ ಮಾಡುವ ಸ್ಥಳೀಯ ಶಾಸಕರು ತಮ್ಮ ಹೊಣೆಗಾರಿಕೆ ಮರೆತು ಮಾತನಾಡುತ್ತಿದ್ದಾರೆ ಎಂದು ಐವನ್ ಡಿಸೋಜ ಟೀಕಿಸಿದ್ದಾರೆ.

*ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 9.25 ಲಕ್ಷ ರೂ. ಪರಿಹಾರ ಬಿಡುಗಡೆ ಮಾಡಲಾಗಿದೆ. ಇತ್ತೀಚೆಗೆ ಅಳಪೆ ಗ್ರಾಮದಲ್ಲಿ ಆಕಸ್ಮಿಕವಾಗಿ ನೀರಿಗೆ ಬಿದ್ದು ಮೃತಪಟ್ಟ ವರುಣ್ ಮತ್ತು ವೀಕ್ಷಿತ್ ಕುಟುಂಬಕ್ಕೆ ಮುಖ್ಯ ಮಂತ್ರಿ ಪರಿಹಾರ ನಿಧಿಯಿಂದ ತಲಾ 2 ಲಕ್ಷ ರೂ. ಮಂಜೂರು ಮಾಡಿದ್ದಾರೆ. ಅದೇರೀತಿ ಅನಾರೋಗ್ಯದಿಂದ ಸಂಕಷ್ಟಕ್ಕೀಡಾದ 11 ಕುಟುಂಬಗಳ ಸದಸ್ಯರಿಗೆ ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಒಟ್ಟು 9.25 ಲಕ್ಷ ರೂ ಮಂಜೂರು ಮಾಡಿ ಮುಖ್ಯಮಂತ್ರಿ ಸಂತ್ರಸ್ತರಿಗೆ ನೆರವು ನೀಡಿರುವುದಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ಐವನ್ ಡಿಸೋಜ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮನಪಾ ಸದಸ್ಯ ಪ್ರವೀಣ್ ಆಳ್ವ, ಮನಪಾ ಮಾಜಿ ಸದಸ್ಯರಾದ ಸೇಸಮ್ಮ, ಭಾಸ್ಕರ ರಾವ್, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ವಿಕಾಸ್ ಶೆಟ್ಟಿ, ಅಬ್ದುಲ್ ಸಲೀಂ ಮುಕ್ಕ, ಚೇತನ್ ಕುಮಾರ್, ಹಬೀಬ್ ಕಣ್ಣೂರ್, ಸತೀಶ್ ಪೆಂಗಲ್, ಯೋಗೀಶ್ ನಾಯಕ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News