ಕೊಲೆಯಾದ ರೌಡಿ ಶೀಟರ್ ಸುಹಾಸ್ ಶೆಟ್ಟಿ ಫಾಝಿಲ್ ಕೊಲೆ ಪ್ರಕರಣದ ಮೊದಲ ಆರೋಪಿ: ಕಮಿಷನರ್ ಅನುಪಮ್ ಅಗರ್ವಾಲ್
ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್
ಮಂಗಳೂರು: ಕೊಲೆಯಾದ ರೌಡಿ ಶೀಟರ್ ಆಗಿರುವ ಸುಹಾಸ್ ಶೆಟ್ಟಿಯ ಮೇಲೆ ಎರಡು ಕೊಲೆ ಪ್ರಕರಣಗಳಿವೆ. ಆತ ಮುಖ್ಯವಾಗಿ 2022ರ ಫಾಝಿಲ್ ಕೊಲೆ ಪ್ರಕರಣದ ಮೊದಲ ಆರೋಪಿ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಹೇಳಿದ್ದಾರೆ.
ನಗರದ ಎ.ಜೆ. ಆಸ್ಪತ್ರೆಯ ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, “ಗುರುವಾರ ರಾತ್ರಿ ಸುಮಾರು 8.30ರಿಂದ 8.40 ರ ನಡುವೆ ಬಜ್ಪೆ ಪೊಲೀಸ್ ಠಾಣೆಯ ಕಿನ್ನಿಪದವಿನಲ್ಲಿ ಘಟನೆ ನಡೆದಿದೆ. ರೌಡಿ ಶೀಟರ್ ಆಗಿರುವ ಸುಹಾಸ್ ಶೆಟ್ಟಿ ತನ್ನ ಸ್ನೇಹಿತರ ಜೊತೆ ಇನ್ನೋವಾ ಕಾರಿನಲ್ಲಿ ಹೋಗುತ್ತಿದ್ದಾಗ ಎರಡು ವಾಹನಗಳಿಂದ ಅಡ್ಡಗಟ್ಟಲಾಗಿದೆ. ಮೊದಲು ಗೂಡ್ಸ್ ವಾಹನದಲ್ಲಿ ದಾಳಿ ಮಾಡಲಾಯಿತು. ಬಳಿಕ ಸ್ವಿಫ್ಟ್ ಕಾರಿನಲ್ಲಿ ಬಂದಿದ್ದ ಆರೋಪಿಗಳು ಇಳಿದು ಸುಹಾಸ್ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದಾರೆ. ಅವರ ಗುರಿ ಸುಹಾಸ್ ಶೆಟ್ಟಿಯೇ ಆಗಿದ್ದ”, ಎಂದರು.
“ತಕ್ಷಣವೇ ಸುಹಾಸ್ ನನ್ನು ಮಂಗಳೂರಿನ ಎ. ಜೆ. ಆಸ್ಪತ್ರೆಗೆ ದಾಖಲಿಸಲಾಯಿತು. ಆ ಸಂದರ್ಭ ಆತ ಮೃತಪಟ್ಟಿದ್ದಾನೆ ಎಂದು ತಿಳಿದು ಬಂತು. ಘಟನೆಯ ವೇಳೆ ಸುಹಾಸ್ ಜೊತೆಗಿದ್ದ ಸ್ನೇಹಿತರ ಪೈಕಿ ಇಬ್ಬರಿಗೆ ಗಾಯಗಳಾಗಿವೆ. ಅವರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ”, ಎಂದು ಅವರು ಘಟನೆಯ ಕುರಿತು ಮಾಹಿತಿ ನೀಡಿದರು.
“ ಒಂದು ವರ್ಷದ ಹಿಂದಷ್ಟೇ ಸುಹಾಸ್ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಆತನ ಚಲನವಲನಗಳ ಮೇಲೆ ಪೊಲೀಸ್ ಇಲಾಖೆ ಕಣ್ಣಿಟ್ಟಿತ್ತು. ಘಟನೆಯ ವೀಡಿಯೊವನ್ನು ನೋಡಿದ್ದೇವೆ. ಆರೋಪಿಗಳನ್ನು ಪತ್ತೆಹಚ್ಚಲು ಕ್ರಮ ಕೈಗೊಳ್ಳಲಾಗುತ್ತಿದೆ”, ಎಂದು ಕಮಿಷನರ್ ಹೇಳಿದ್ದಾರೆ.
“ಘಟನೆಯ ಬಳಿಕ ನಗರದ ಸೂಕ್ಷ್ಮತೆಯನ್ನು ಗಮನದಲ್ಲಿಟ್ಟುಕೊಂಡು ನಗರದಾದ್ಯಂತ ರಾತ್ರಿಯಿಂದಲೇ ಬಂದೋಬಸ್ತ್, ನಾಕಾಬಂಧಿ ಮಾಡಲಾಗಿದೆ. ಹೊರಜಿಲ್ಲೆಗಳಿಂದ ಉನ್ನತಾಧಿಕಾರಿಗಳು ಬರುತ್ತಿದ್ದಾರೆ. ನಗರದಾದ್ಯಂತ ಕಾನೂನು ಸುವ್ಯವಸ್ಥೆ ಕಾಪಾಡಲಾಗುವುದು”, ಎಂದು ಅನುಪಮ್ ಅಗರ್ವಾಲ್ ಹೇಳಿದ್ದಾರೆ.
►ಸುಹಾಸ್ ಶೆಟ್ಟಿಯ ಮೇಲಿರುವ ಪ್ರಕರಣಗಳಾವು?
ರೌಡಿ ಶೀಟರ್ ಆಗಿರುವ ಸುಹಾಸ್ ಶೆಟ್ಟಿಯ ಮೇಲೆ ಒಟ್ಟು 5 ಪ್ರಕರಣಗಳಿವೆ. ಅವುಗಳ ಪೈಕಿ ಮಂಗಳೂರು ನಗರದಲ್ಲಿಯೇ 4 ಪ್ರಕರಣಗಳು ದಾಖಲಾಗಿವೆ. ಒಂದು ಪ್ರಕರಣವು ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
►ಬಜ್ಪೆ ಪೊಲೀಸ್ ಠಾಣೆಯಲ್ಲಿ 2016ರಲ್ಲಿ ಐಪಿಸಿ ಸೆಕ್ಷನ್ 143, 47, 323, 447, 504, 506, 149ರ ಅಡಿ ದಾಖಲಾಗಿದ್ದ ಪ್ರಕರಣದಲ್ಲಿ ಆತ ಖುಲಾಸೆಯಾಗಿದ್ದಾನೆ.
►ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ 2016ರಲ್ಲಿ ಐಪಿಸಿ 160ರಡಿ ದಾಖಲಾದ ಪ್ರಕರಣದಲ್ಲಿ ಆತನಿಗೆ ಶಿಕ್ಷೆಯಾಗಿದೆ.
►ಬಜ್ಪೆ ಪೊಲೀಸ್ ಠಾಣೆಯಲ್ಲಿ 2020ರಲ್ಲಿ ಐಪಿಸಿ 143, 147, 148, 323, 324, 504, 506ರಡಿ ದಾಖಲಾದ ಪ್ರಕರಣದಲ್ಲಿ ಆತ ಖುಲಾಸೆಯಾಗಿದ್ದಾನೆ.
►ಬಜ್ಪೆ ಪೊಲೀಸ್ ಠಾಣೆಯಲ್ಲಿ 2020ರಲ್ಲಿ ಐಪಿಸಿ 143, 147, 148, 323, 324, 504, 506, 307, 302, 149ರಡಿ ಮತ್ತು ಪರಿಶಿಷ್ಠ ಜಾತಿ ಪರಿಶಿಷ್ಠ ಪಂಗಡ ದೌರ್ಜನ್ಯ ಕಾಯ್ದೆಯಡಿ ದಾಖಲಾದ ಪ್ರಕರಣವು ಈಗಾಗಲೇ ವಿಚಾರಣಾ ಹಂತದಲ್ಲಿದೆ.
►2022ರಲ್ಲಿ ಸುರತ್ಕಲ್ ಠಾಣೆಯಲ್ಲಿ ಐಪಿಸಿ 143, 147, 148, 326, 302, 504, 506, 120(B) 201, 202, 204, 212, 118, 149ರಡಿ ದಾಖಲಾದ ಫಾಝಿಲ್ ಕೊಲೆ ಪ್ರಕರಣವು ವಿಚಾರಣಾ ಹಂತದಲ್ಲಿದೆ.