×
Ad

ʼಧರ್ಮಸ್ಥಳ ದೂರುʼ| ಪಿಎಸೈಯಿಂದ ದುರ್ವರ್ತನೆ, ಗೌಪ್ಯತೆಯ ಉಲ್ಲಂಘನೆ : ಸುಜಾತಾ ಭಟ್ ಆರೋಪ

Update: 2025-07-18 13:00 IST

ಸುಜಾತಾ ಭಟ್

ಮಂಗಳೂರು : ಧರ್ಮಸ್ಥಳದಲ್ಲಿ ಕಾಣೆಯಾಗಿದ್ದಾರೆ ಎನ್ನಲಾದ ವೈದ್ಯಕೀಯ ವಿದ್ಯಾರ್ಥಿನಿ ಅನನ್ಯ ಭಟ್ ಅವರ ತಾಯಿ ಸುಜಾತಾ ಭಟ್ ಅವರು ʼಧರ್ಮಸ್ಥಳದಲ್ಲಿ ಮೃತದೇಹಗಳನ್ನು ಸಾಮೂಹಿಕವಾಗಿ ಹೂತು ಹಾಕಿರುವ ಆರೋಪದʼ ಕುರಿತ ಪ್ರಕರಣದಲ್ಲಿ ಪಿಎಸೈ ವಿರುದ್ಧ ದುರ್ವರ್ತನೆ ಮತ್ತು ಗೌಪ್ಯತೆಯ ಉಲ್ಲಂಘನೆಯ ಆರೋಪಗಳನ್ನು ಮಾಡಿದ್ದಾರೆ.

ಧರ್ಮಸ್ಥಳ ಸಾಮೂಹಿಕವಾಗಿ ಹೂತು ಹಾಕಿರುವ ಪ್ರಕರಣದ ತನಿಖೆಯಲ್ಲಿ ಗೌಪ್ಯ ಸಾಕ್ಷಿ ಹೇಳಿಕೆಯನ್ನು ಕಾನೂನುಬಾಹಿರವಾಗಿ ಬಹಿರಂಗಪಡಿಸಲಾಗಿದೆ ಎಂದು ಸುಜಾತಾ ಭಟ್ ತಮ್ಮ ವಕೀಲರ ಮೂಲಕ ಸಲ್ಲಿಸಿದ ಹೇಳಿಕೆಯಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಭಾರತದ ಮುಖ್ಯ ನ್ಯಾಯಮೂರ್ತಿ, ಕರ್ನಾಟಕ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ, ಕರ್ನಾಟಕದ ಮುಖ್ಯಮಂತ್ರಿ , ರಾಜ್ಯ ಗೃಹ ಸಚಿವರಿಗೆ ಮತ್ತು ಡಿಜಿಪಿಗೆ ದೂರನ್ನು ಕೂಡ ನೀಡಲಾಗಿದೆ.

ಈ ಕುರಿತ ದೂರನ್ನು ಪಿಎಸ್ಐ ಅವರಿಗೆ ಕೂಡ ನೀಡಲಾಗಿದೆ. ನಿಮ್ಮ ನಡವಳಿಕೆಯು ಜಾರಿಯಲ್ಲಿರುವ ಕಾನೂನಿಗೆ ಬದ್ಧವಾಗಿದೆಯೇ ಎಂಬುದನ್ನು ಖಚಿತಪಡಿಸಬೇಕು. ಇದಲ್ಲದೆ ಈ ಬಗ್ಗೆ ಯಾವುದೇ ವಿಳಂಬವಿಲ್ಲದೆ ಉನ್ನತಾಧಿಕಾರಿಗಳ ಗಮನಕ್ಕೆ ತರಬೇಕು ಎಂದು ಅಧಿಕಾರಿಗೆ ಸಲಹೆ ನೀಡಲಾಗಿದೆ.

ಮಾಜಿ ನೈರ್ಮಲ್ಯ ಕಾರ್ಮಿಕನೋರ್ವ ಇತ್ತೀಚೆಗೆ ಮ್ಯಾಜಿಸ್ಟ್ರೇಟ್ ಮುಂದೆ ಹಾಜರಾಗಿ, ಬಲವಂತದಿಂದ ನೂರಾರು ಮೃತದೇಹಗಳನ್ನು ಹೂತು ಹಾಕಿದ್ದಾಗಿ ಒಪ್ಪಿಕೊಂಡು, ಒಂದು ಅಸ್ಥಿಪಂಜರದ ಅವಶೇಷಗಳನ್ನು ಸಲ್ಲಿಸಿದ್ದ. ಅಂದಿನಿಂದ ಈ ಪ್ರಕರಣವು ಹೊಸ ವಿಧಿವಿಜ್ಞಾನ ತನಿಖೆ ಮತ್ತು ರಾಜ್ಯ ಹಾಗು ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆಯಲು ಕಾರಣವಾಗಿದೆ.

ಸುಜಾತಾ ಭಟ್ ಅವರ ಮಗಳು ಅನನ್ಯಾ ಎರಡು ದಶಕಗಳ ಹಿಂದೆ ಅದೇ ಪ್ರದೇಶದಲ್ಲಿ ನಾಪತ್ತೆಯಾಗಿದ್ದರು. ಅವರ ಕುಟುಂಬವು ಬಹಳ ಹಿಂದಿನಿಂದಲೂ ದುಷ್ಕೃತ್ಯದ ಬಗ್ಗೆ ಅನುಮಾನವನ್ನು ಹೊಂದಿದೆ. ಇತ್ತೀಚಿನ ಬೆಳವಣಿಗೆಯಿಂದ ಅನನ್ಯಾ ಅವರ ಕಣ್ಮರೆಗೆ ಮತ್ತು ಸಾಮೂಹಿಕ ಹೂತು ಹಾಕಿರುವ ಘಟನೆಗೆ ಸಂಬಂಧವಿರಬಹುದೆಂದು ಅವರು ಶಂಕಿಸುತ್ತಿದ್ದಾರೆ.

ಹಿರಿಯ ನಾಗರಿಕರಾಗಿರುವ ಸುಜಾತಾ ಭಟ್, ತನಿಖಾಧಿಕಾರಿಯ ನಡವಳಿಕೆಯಿಂದ ನಿಷ್ಪಕ್ಷ ಮತ್ತು ನ್ಯಾಯಯುತ ತನಿಖೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಅಧಿಕಾರಿಯ ನಡವಳಿಕೆಯು ಪಕ್ಷಪಾತೀಯ, ವೃತ್ತಿಪರವಲ್ಲದ ಮತ್ತು ಕಾನೂನುಬಾಹಿರ ವಾಗಿದೆ ಮತ್ತು ತನಿಖೆಯ ಮೇಲಿನ ನಂಬಿಕೆ ಸಂಪೂರ್ಣವಾಗಿ ಕಳೆದು ಹೋಗಿದೆ ಎಂದು ಅವರ ವಕೀಲ ಮಂಜುನಾಥ್ ಹೇಳಿದ್ದಾರೆ.

ನಿಷ್ಪಕ್ಷ ತನಿಖೆ ಮತ್ತು ಕಾನೂನುಬದ್ಧತೆಯ ಬಗ್ಗೆ ಕಳವಳಗಳಿಂದಾಗಿ ಸುಜಾತಾ ಭಟ್ ತನಿಖಾಧಿಕಾರಿಯ ಮುಂದೆ ಹಾಜರಾಗಲು ಅಥವಾ ಅವರು ನೀಡಿದ ನೋಟಿಸ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ತಮ್ಮ ನಿರ್ಧಾರದ ಹಿಂದಿನ ಕಾರಣಗಳನ್ನು ವಿವರಿಸಿ ವಿವರವಾದ ದೂರು ದಾಖಲಿಸಲು ಅವರು ಯೋಜಿಸುತ್ತಿದ್ದಾರೆ. ಈ ಮಧ್ಯೆ, ಅವರ ಕಾನೂನು ಸಲಹೆಗಾರರು ಪೊಲೀಸ್ ಅಧಿಕಾರಿಗೆ ಈ ವಿಷಯವನ್ನು ತಮ್ಮ ಮೇಲಧಿಕಾರಿಗಳಿಗೆ ತಿಳಿಸುವಂತೆ ಮತ್ತು ಮುಂದಿನ ಕಾನೂನು ವಿಧಾನಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವಂತೆ ಸಲಹೆ ನೀಡಿದ್ದಾರೆ.

ಅಧಿಕಾರಿಯ ಸಮನ್ಸ್ ಪಾಲಿಸಲು ನಿರಾಕರಿಸಿದ್ದನ್ನು ಸಮರ್ಥಿಸಿಕೊಂಡು ವಿವರವಾದ ದೂರು ದಾಖಲಿಸುತ್ತೇವೆ. ಸಾರ್ವಜನಿಕ ಸೇವಕನಾಗಿ ತಮ್ಮ ಕರ್ತವ್ಯಗಳ ಬಗ್ಗೆ ಚಿಂತಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News